
ಕಲಬುರಗಿ,ಆ.೧೧: ಪತ್ನಿಯ ಮೇಲೆ ಸಂಶಯಗೊಂಡು ಮನೆಯನ್ನು ಸ್ಫೋಟಿಸಿ ಸ್ಫೋಟಕ್ಕೆ ಸ್ವಂತ ಗಂಡನೇ ಬಲಿಯಾದ ಹೃದಯ ವಿದ್ರಾವಕ ಘಟನೆ ಇಂದು ಬೆಳಿಗ್ಗೆ ಅಳಂದ ತಾಲೂಕು ಮಟಕಿ ತಾಂಡಾದಲ್ಲಿ ನಡೆದಿದೆ.
ಸೇವಾಲಾಲ ಬಳಿರಾಮ ರಾಠೋಡ ( ೫೦) ಮೃತ ವ್ಯಕ್ತಿ. ಈತನ ಮಗಳು ಮೀರಾ ಸೇವಾಲಾಲ ರಾಠೋಡ ( ೧೫)ಸಹ ಸ್ಫೋಟದಲ್ಲಿ ಜೀವ ಕಳೆದುಕೊಂಡಿದ್ದಾಳೆ.ಸ್ಫೋಟದ ತೀವ್ರತೆಗೆ ಮನೆ ಧ್ವಂಸವಾಗಿದ್ದು, ಮೃತ ದೇಹಗಳು ಛಿದ್ರವಾಗಿವೆ.
ಸೇವಾಲಾಲ ಬಳಿರಾಮ ರಾಠೋಡ ಕಲ್ಲುಗಣಿಯಲ್ಲಿ ಸ್ಫೋಟಕಗಳನ್ನು ಬ್ಲಾಸ್ಟ್ ಮಾಡುವ ಕೆಲಸ ಮಾಡುತ್ತಿದ್ದ.
ಇಂದು ಬೆಳಿಗ್ಗೆ ೧೦.೩೦ ರ ಸುಮಾರಿಗೆ ಸೇವಾಲಾಲ ಬಳಿರಾಮ ರಾಠೋಡ ಜಿಲೆಟಿನ್ ಕಡ್ಡಿಗಳನ್ನು ತಂದು ಮನೆಯಲ್ಲಿ ಸ್ಫೋಟ ಮಾಡಿದ್ದಾನೆ.
ಘಟನೆಯಲ್ಲಿ ಮನೆಯಲ್ಲಿದ್ದ ಪತ್ನಿ ಸವಿತಾ ( ೪೦) ,ಮಗ ಪ್ರಕಾಶ ( ೧೯) ನಾದಿನಿ ಸುರೇಖಾ ಕೃಷ್ಣ ಚವ್ಹಾಣ ( ೩೦) ಮತ್ತು ಆಕೆಯ ಮಗ ವಿವೇಕ ಕೃಷ್ಣಾ ಚವ್ಹಾಣ ಎಂಬ ನಾಲ್ವರಿಗೆ ಗಾಯಗಳಾಗಿವೆ.
ಅಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.































