
ಜಮಖಂಡಿ: ಮೇ.20:ನಗರದ ಸಿಂಧೂರ ಲಕ್ಷ್ಮಣ ಮಾರ್ಕೆಟ್‍ನಲ್ಲಿ ಬೀದಿ ಬದಿ ವ್ಯಾಪಾರಸ್ಥರು ಮಾರ್ಕೆಟ್ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ನಗರಸಭೆ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ಸಿಂಧೂರ ಲಕ್ಷ್ಮಣ ಮಾರ್ಕೆಟ್ ಆವರಣದಲ್ಲಿ ಪ್ರತ್ಯೇಕ ಬಾಕ್ಸ್‍ಗಳನ್ನು ಅಳವಡಿಸಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೆಲ ವ್ಯಾಪಾರಸ್ಥರು ಪಾಕಿರ್ಂಗ್ ಸ್ಥಳದಲ್ಲೇ ವ್ಯಾಪಾರ ನಡೆಸುತ್ತಿದ್ದ ಹಿನ್ನೆಲೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿಗಳು ತೆರವು ಕಾರ್ಯಾಚರಣೆ ನಡೆಸಿ ಕೆಲವು ವ್ಯಾಪಾರ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ಬೀದಿ ಬದಿ ವ್ಯಾಪಾರಸ್ಥರು ಮಾರ್ಕೆಟ್‍ನ ಮುಖ್ಯ ಗೇಟ್‍ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಘಟನಾ ಸ್ಥಳಕ್ಕೆ ಜಮಖಂಡಿ ಪೆÇಲೀಸರು ಹಾಗೂ ನಗರಸಭೆ ಸಿಬ್ಬಂದಿಗಳು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ಗೇಟ್‍ಗೆ ಹಾಕಿದ್ದ ಬೀಗವನ್ನು ತೆರವುಗೊಳಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ನಗರಸಭೆ ಅಧಿಕಾರಿಗಳು, “ನಗರಸಭೆ ವತಿಯಿಂದ ವ್ಯಾಪಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಅದೇ ನಿಯಮದಂತೆ ವ್ಯಾಪಾರ ನಡೆಸಬೇಕು” ಎಂದು ವ್ಯಾಪಾರಸ್ಥರಿಗೆ ಸೂಚಿಸಿದರು.
ಪ್ರಕಾಶ ಭಜಂತ್ರಿ, ಹಣ್ಣು ವ್ಯಾಪಾರಸ್ಥ:
“ವ್ಯಾಪಾರ ಮಾಡಲು ಅನುಕೂಲವಾಗಲಿ ಎಂದು ನಗರಸಭೆ ಬಾಕ್ಸ್ ನಿರ್ಮಿಸಿದೆ. ಆದರೆ ನಮಗೆ ಮೂಲೆಯ ಭಾಗದಲ್ಲಿ ಜಾಗ ನೀಡಿದ್ದಾರೆ. ಅಲ್ಲಿ ಗ್ರಾಹಕರು ಬರುವುದೇ ಇಲ್ಲ. ಹಣ್ಣು ಖರೀದಿಸಲು ಜನರು ಬಾರದ ಕಾರಣ ವ್ಯಾಪಾರ ಸಂಪೂರ್ಣ ಕುಂಠಿತವಾಗಿದೆ,” ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಇನ್ನೂ ಕೆಲ ಬೀದಿ ಬದಿ ವ್ಯಾಪಾರಸ್ಥರು, “ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ಮುಖ ನೋಡಿ ಚೀಟಿ ಹಂಚಿಕೆ ಮಾಡಿದ್ದಾರೆ. ನಮಗೆ ಉದ್ದೇಶಪೂರ್ವಕವಾಗಿ ಮೂಲೆಯ ಜಾಗ ನೀಡಿದ್ದಾರೆ,” ಎಂದು ಆರೋಪಿಸಿದರು.



















