Home ಜಿಲ್ಲೆ ಹಿರಿಯ ಜಾನಪದ ಗಾಯಕ ದೇವದಾಸ ಚಿಮಕೋಡಗೆ ರಾಜ್ಯ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ

ಹಿರಿಯ ಜಾನಪದ ಗಾಯಕ ದೇವದಾಸ ಚಿಮಕೋಡಗೆ ರಾಜ್ಯ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ

ಬೀದರ್: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ವತಿಯಿಂದ ಮಂಡ್ಯ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೀದರ್ ಜಿಲ್ಲೆಯ ಹಿರಿಯ ಜಾನಪದ ಗಾಯಕ ದೇವದಾಸ ಚಿಮಕೋಡ ಅವರಿಗೆ ಪ್ರತಿಷ್ಠಿತ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಕಳೆದ ಸುಮಾರು ೩೫ ವರ್ಷಗಳಿಂದ ಜಾನಪದ ಕಲೆಯ ಉಳಿವು ಮತ್ತು ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ದೇವದಾಸ ಚಿಮಕೋಡ ಅವರು, ತಮ್ಮದೇ ಆದ ಕಲಾ ತಂಡವನ್ನು ಕಟ್ಟಿಕೊಂಡು ಬೀದರ್ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಾಗೂ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಜಾನಪದ ಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ಸಾಧನೆ ಬೀದರ್ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ಜಾನಪದ ಗಾಯಕನಾಗಿ ಗುರುತಿಸಿಕೊಂಡಿರುವ ದೇವದಾಸ ಚಿಮಕೋಡ ಅವರು ಜಾನಪದ ಹಾಡುಗಾರಿಕೆ ಹಾಗೂ ಜಾನಪದ ನೃತ್ಯಗಳ ಕುರಿತು ಅಧ್ಯಯನ ನಡೆಸಿ ಪ್ರಮಾಣಪತ್ರ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯ ಅನೇಕ ಕಲಾವಿದರಿಗೆ ಪ್ರೇರಣೆಯಾಗಿರುವ ಇವರು, ಬೀದರ್ ಉತ್ಸವ, ಜನಪದ ಉತ್ಸವ, ಜನಪರ ಉತ್ಸವ, ಬಸವ ಉತ್ಸವ, ಕಲಬುರಗಿ ಉತ್ಸವ, ಮೈಸೂರು ಉತ್ಸವ, ಯುವಜನೋತ್ಸವ, ಯುವಜನ ಮೇಳ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಕಲೆಗಾಗಿ ಬದುಕು, ಬದುಕಿಗಾಗಿ ಕಲೆ ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ದೇವದಾಸ ಚಿಮಕೋಡ ಅವರು, ಸ್ವತಃ ಹಾಡುಗಳನ್ನು ರಚಿಸಿ, ಅವುಗಳಿಗೆ ರಾಗ ಸಂಯೋಜನೆ ಮಾಡುತ್ತಾರೆ. ಡಫಲಿ ನುಡಿಸುತ್ತಾ ಹಾಡುವ ವಿಶಿಷ್ಟ ಶೈಲಿ ಅವರದ್ದಾಗಿದೆ. ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ವಿಷಯಗಳ ಕುರಿತು ೪೦ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿ ಹಾಡಿರುವ ಇವರು, ತಮ್ಮ ಗಾಯನದ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ಬೀದರ್ ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ತೆರಳಿ ಜಾನಪದ ಕಾರ್ಯಕ್ರಮಗಳನ್ನು ನೀಡಿರುವ ಇವರು, ಗ್ರಾಮೀಣ ಭಾಗದಲ್ಲಿ ಜಾನಪದ ಕಲೆಯ ಪ್ರಸಾರ ಮತ್ತು ಪ್ರಚಾರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
ದೇವದಾಸ ಚಿಮಕೋಡ ಅವರು ರಚಿಸಿರುವ ಜಾಗೃತಿ ಗೀತೆಗಳನ್ನು ಒಳಗೊಂಡ ‘ಜನಜಾಗೃತಿ’ ಹಾಡುಗಳ ಪುಸ್ತಕವನ್ನು ಪ್ರಕಟಿಸಿದ್ದಾರೆ. ಈ ಪುಸ್ತಕಗಳನ್ನು ಕರ್ನಾಟಕ ರಾಜ್ಯ ಸರ್ಕಾರದ ಕೇಂದ್ರ ಗ್ರಂಥಾಲಯ, ಬೆಂಗಳೂರು, ೨೦೧೮ರಲ್ಲಿ ಖರೀದಿಸಿ ರಾಜ್ಯದ ೩೧ ಜಿಲ್ಲೆಗಳ ಗ್ರಂಥಾಲಯಗಳಿಗೆ ಕಳುಹಿಸಿಕೊಟ್ಟಿರುವುದು ಇವರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ಕೆ ದೊರೆತ ಮನ್ನಣೆಯಾಗಿದೆ.
ಮಂಡ್ಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಕೆ.ಎಂ. ವಸುಂಧರಾ ಅವರು ದೇವದಾಸ ಚಿಮಕೋಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಅಕಾಡೆಮಿ ರಿಜಿಸ್ಟ್ರಾರ್ ಶೃತಿ ಎಂ. ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ದೇವದಾಸ ಚಿಮಕೋಡ ಅವರಿಗೆ ರಾಜ್ಯಮಟ್ಟದ ಗೌರವ ಪ್ರಶಸ್ತಿ ಲಭಿಸಿರುವುದಕ್ಕೆ ಚಿಮಕೋಡ ಗ್ರಾಮದ ಗ್ರಾಮಸ್ಥರು ಹಾಗೂ ಕಲ್ಯಾಣ ಕರ್ನಾಟಕ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.