
ಮನ್ ಕಿ ಬಾತ್ನಲ್ಲಿ ವೋಕಲ್ ಫಾರ್ ಲೋಕರ್ ಮಂತ್ರ ಪಠಿಸಿದ ಮೋದಿ
ನವದೆಹಲಿ, ಅ.೨೫-ಹಬ್ಬಗಳ ಸಂಭ್ರಮ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯರು ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ಇಂದು ಮಾತನಾಡಿದ ಅವರು, ವೋಕಲ್ ಫಾರ್ ಲೋಕಲ್, ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತದ ಮಂತ್ರವನ್ನು ದೇಶದ ಜನರು ಪಾಲಿಸಬೇಕು ಎಂದು ಒತ್ತಿ ಹೇಳಿದರು.
ಜೀವನದಲ್ಲಿ ಅಗತ್ಯವಿರುವ ಪ್ರತಿಯೊಂದು ವಸ್ತುವೂ ಸಾಧ್ಯವಾದಷ್ಟು ಸ್ವದೇಶಿಯಾಗಿರಬೇಕು. ಹಬ್ಬಗಳ ಸಂದರ್ಭದಲ್ಲಿಉಡುಗೊರೆಗಳು, ಬಟ್ಟೆಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿಸುವಾಗಲೂ ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದು ಪ್ರಧಾನಿ ಮನವಿ ಮಾಡಿದರು.
ಹೆಮ್ಮೆಯಿಂದ ಹೇಳಿ, ಇದು ಸ್ವದೇಶಿ ಎಂದು ಮೂರು ಬಾರಿ ಪುನರುಚ್ಚರಿಸಿದ ಮೋದಿ,ವೋಕಲ್ ಫಾರ್ ಲೋಕಲ್ ಒಂದೇ ಮಂತ್ರ, ಆತ್ಮನಿರ್ಭರ ಭಾರತ ಒಂದೇ ಮಾರ್ಗ ಮತ್ತು ವಿಕಸಿತ ಭಾರತ ಒಂದೇ ಗುರಿ ಎಂದು ಹೇಳಿದರು.
ಮಳೆಗಾಲದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಗಳ ಬಗ್ಗೆ ಪ್ರಧಾನಿ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದರು.
ಈ ಮುಂಗಾರು ಋತುವಿನಲ್ಲಿ ನೈಸರ್ಗಿಕ ವಿಕೋಪಗಳು ದೇಶಕ್ಕೆ ಸವಾಲೊಡ್ಡಿವೆ. ಕೆಲವು ಕಡೆ ಮನೆಗಳು ನಾಶವಾಗಿವೆ, ಇನ್ನೂ ಕೆಲವು ಕಡೆ ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಪ್ರವಾಹದ ನೀರಿಗೆ ಸೇತುವೆಗಳು ಕೊಚ್ಚಿಹೋಗಿವೆ, ರಸ್ತೆಗಳು ಹಾನಿಗೊಳಗಾಗಿವೆ. ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಘಟನೆಗಳು ಪ್ರತಿಯೊಬ್ಬ ಭಾರತೀಯನಿಗೂ ನೋವು ತಂದಿವೆ ಎಂದು ಹೇಳಿದರು.
ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಪಡೆಗಳು ಹಗಲು-ರಾತ್ರಿ ಶ್ರಮಿಸಿ ಜನರ ರಕ್ಷಣೆಗೆ ಮುಂದಾಗಿವೆ ಎಂದು ಅವರು ಶ್ಲಾಘಿಸಿದರು. ಥರ್ಮಲ್ ಕ್ಯಾಮೆರಾಗಳು, ಜೀವ ಪತ್ತೆ ಸಾಧನಗಳು, ಶ್ವಾನಪಡೆ ಹಾಗೂ ಡ್ರೋನ್ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದರು.
ಪುಲ್ವಾಮಾದಲ್ಲಿ ನಡೆದ ಮೊದಲ ಹಗಲು-ರಾತ್ರಿ ಕ್ರಿಕೆಟ್ ಪಂದ್ಯ ಮತ್ತು ಶ್ರೀನಗರದ ದಾಲ್ ಸರೋವರದಲ್ಲಿ ಆಯೋಜಿಸಲಾಗಿದ್ದ ದೇಶದ ಮೊದಲ ಖೇಲೋ ಇಂಡಿಯಾ ವಾಟರ್ ಸ್ಪೋರ್ಟ್ಸ್ ಫೆಸ್ಟಿವಲ್ಕುರಿತು ಮಾತನಾಡಿದರು.
ಪುಲ್ವಾಮಾದ ಕ್ರಿಕೆಟ್ ಪಂದ್ಯ ವೀಕ್ಷಿಸಲು ದಾಖಲೆ ಸಂಖ್ಯೆಯಲ್ಲಿ ಜನರು ಕ್ರೀಡಾಂಗಣಕ್ಕೆ ಆಗಮಿಸಿದ್ದರು ಎಂದು ಅವರು ಹೇಳಿದರು.
ಹಿಂದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಸಾಧ್ಯವೆಂದು ಭಾವಿಸಲಾಗಿತ್ತು. ಆದರೆ ಈಗ ನನ್ನ ದೇಶ ಬದಲಾಗುತ್ತಿದೆ ಎಂದು ಮೋದಿ ಹೇಳಿದರು.
ದಾಲ್ ಸರೋವರದಲ್ಲಿ ನಡೆದ ಜಲಕ್ರೀಡಾ ಉತ್ಸವದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಮ್ಮು-ಕಾಶ್ಮೀರದ ಚಿನ್ನದ ಪದಕ ವಿಜೇತ ಮೊಹ್ಸಿನ್ ಅಲಿ ಅವರೊಂದಿಗೆ ಮಾತನಾಡಿದರು. ಈ ಪ್ರದೇಶದ ಯುವಜನರಲ್ಲಿ ಅಪಾರ ಸಾಮರ್ಥ್ಯವಿದ್ದು, ಅವರು ದೇಶಕ್ಕೆ ಕೀರ್ತಿ ತರಬಲ್ಲರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಷ್ಯಾದ ಅತ್ಯಂತ ಶೀತ ಪ್ರದೇಶಗಳಲ್ಲಿ ಒಂದಾದ ವ್ಲಾಡಿವೋಸ್ಟಾಕ್ನಲ್ಲಿ ಈ ತಿಂಗಳು ವಿಶಿಷ್ಟ ಪ್ರದರ್ಶನವೊಂದು ನಡೆದಿದ್ದು, ರಷ್ಯಾದ ಮಕ್ಕಳು ರಾಮಾಯಣದ ವಿವಿಧ ವಿಷಯಗಳ ಕುರಿತು ರಚಿಸಿದ ಚಿತ್ರಗಳನ್ನು ಪ್ರದರ್ಶಿಸಲಾಗಿದೆ ಎಂದು ತಿಳಿಸಿದರು.
ಜಗತ್ತಿನ ವಿವಿಧ ಭಾಗಗಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಹೆಚ್ಚುತ್ತಿರುವ ಅರಿವು ಮತ್ತು ಆಸಕ್ತಿಯನ್ನು ನೋಡುವುದು ನಿಜಕ್ಕೂ ಸಂತಸದ ಸಂಗತಿ ಎಂದು ಪ್ರಧಾನಿ ಮೋದಿ ಹೇಳಿದರು.
ಸ್ವದೇಶಿ ಉತ್ಪನ್ನಗಳ ಬಳಕೆ, ಸ್ವಾವಲಂಬಿ ಭಾರತದ ನಿರ್ಮಾಣ, ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಜನರ ಸೇವೆ ಮತ್ತು ಭಾರತೀಯ ಸಂಸ್ಕೃತಿಯ ಜಾಗತಿಕ ಪ್ರಸಾರಕ್ಕೆ ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ನಲ್ಲಿ ವಿಶೇಷ ಒತ್ತು ನೀಡಿದರು.
ಕಲಬುರಗಿ ತೊಗರಿ ಬೇಳೆಗೆ ವಿಶ್ವ ಮಾರುಕಟ್ಟೆ
ಕರ್ನಾಟಕದ ಕಲಬುರಗಿ ಜಿಲ್ಲೆಯ ತೊಗರಿ ಬೇಳೆ ವಿಶ್ಚದಾದ್ಯಂತ ಹೊಸ ಮಾರುಕಟ್ಟೆಗಳನ್ನು ಕಂಡು ಕೊಳ್ಳುತ್ತಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಮನ್ ಕಿ ಬಾತ್ನಲ್ಲಿ ಪ್ರಧಾನಿಯವರು ಈ ವಿಷಯ ಪ್ರಸ್ತಾಪಿಸಿರುವುದು ಗಮನಸೆಳೆದಿದೆ.
ಬಿಹಾರದ ಮಖಾನಾ ಬುಡಕಟ್ಟು ಕಲೆಯ ಶ್ರೀಮಂತಿಕೆಯನ್ನು ಬಿಂಬಿಸುವ ಪ್ಯಾಕೇಜಿಂಗ್ ಮೂಲಕ ಮಹಾರಾಷ್ಟ್ರದ ಬುಡಕಟ್ಟು ಉತ್ಪನ್ನಗಳು ಮನ್ನಣೆ ಪಡೆಯುತ್ತಿವೆ ಎಂದರು.
ಖಾದಿಯ ಜನಪ್ರಿಯತೆ ಹೆಚ್ಚುತ್ತಿದ್ದು, ನಮ್ಮ ಸಂಪ್ರದಾಯಗಳನ್ನು ಜೀವಂತವಾಗಿರಿಸುವ ಕುಶಲಕರ್ಮಿಗಳಿಗೆ ಇದರಿಂದ ಬೆಂಬಲ ಸಿಗಲಿದೆ ಎಂದು ತಿಳಿಸಿದರು.
























