Home ಜಿಲ್ಲೆ ಸೈದಾಪುರದಲ್ಲಿ ಶೀಘ್ರ ಕ್ರೀಡಾಂಗಣ ನಿರ್ಮಾಣ: ಶಾಸಕ ಶರಣಗೌಡ ಕಂದಕೂರ ಭರವಸೆ

ಸೈದಾಪುರದಲ್ಲಿ ಶೀಘ್ರ ಕ್ರೀಡಾಂಗಣ ನಿರ್ಮಾಣ: ಶಾಸಕ ಶರಣಗೌಡ ಕಂದಕೂರ ಭರವಸೆ

ಯಾದಗಿರಿ: ಜು.೨೯:ತೆಲಂಗಾಣ ಗಡಿಭಾಗದ ಸೈದಾಪುರ ಪಟ್ಟಣ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಕ್ರೀಡಾ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸ್ಥಳ ಗುರುತಿಸುವಂತೆ ಸೂಚನೆ ನೀಡಲಾಗಿದೆ ಎಂದು ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ತಿಳಿಸಿದರು.

ಸೈದಾಪುರ ಪಟ್ಟಣದ ಡಿಡಿಯು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದ ಸುತ್ತಮುತ್ತ ಕನಿಷ್ಠ ಮೂರು ಎಕರೆ ಸರ್ಕಾರಿ ಜಮೀನು ಗುರುತಿಸಿ ಶೀಘ್ರದಲ್ಲೇ ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇಂದಿನ ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿದ್ದು ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆ ಬೆಳೆಯಲು ಸರ್ಕಾರ ಹೋಬಳಿ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಉತ್ತೇಜನ ನೀಡುತ್ತಿದ್ದು, ಇದಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶರಣೀಕುಮಾರ ದೋಕಾ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನೆಳ್ಳಿ ಮಾತನಾಡಿ, ಹೋಬಳಿಯ ೩೫ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭೀಮಣ್ಣಗೌಡ ಕ್ಯಾತ್ನಾಳ, ಯೋಗೇಶ್ ಕುಮಾರ್ ದೋಕಾ, ಗುರನಾಥರೆಡ್ಡಿ ಗೌಡ, ಚಂದ್ರುಗೌಡ, ರಾಜು ಉಡುಪಿ, ಪರಮೇಶ ವಾರದ, ಚಂದ್ರುಗೌಡ ಹೆಗ್ಗಣಗೇರಾ, ತಾಯಪ್ಪ ಬಂದೆಪಲ್ಲಿ, ಮರೆಪ್ಪ ನಟೇಕಾರ, ಆನಂದ ಮೀರಿಯಲ್, ಲಕ್ಷ್ಮಣ ನಾಯಕ್, ಮಲೇಶಿ ನಾಯಕ, ಶಿವುಗೌಡ ಸೈದಾಪುರ, ಅಲಾವುದ್ದೀನ್ ನೀಲಹಳ್ಳಿ, ಸಾಹೇಬಗೌಡ ಗೌಡಗೇರಾ, ಬಸವರಾಜ ಹಿರೇನೂರ, ಬಸವರೆಡ್ಡಿ ಹೆಗ್ಗಣಗೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗುರಮಠಕಲ್ ಹಾಗೂ ಸೈದಾಪುರ ಪಟ್ಟಣಗಳಲ್ಲಿ ಖೇಲೋ ಇಂಡಿಯಾ ಯೋಜನೆಯಡಿ ಗ್ರಾಮೀಣ ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ಮನವಿ ಸಲ್ಲಿಸಲಾಗಿದೆ. ಸ್ಥಳ ಗುರುತಿಸಿ ನೀಡಿದರೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು.

ಕ್ರೀಡಾಕೂಟದಲ್ಲಿ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಲು ಇಲಾಖೆಯು ಪುಷ್ಪಾಲಂಕೃತ ತೆರೆದ ವಾಹನದ ವ್ಯವಸ್ಥೆ ಮಾಡಿತ್ತು. ಆದರೆ ಅದನ್ನು ನಿರಾಕರಿಸಿದ ಶಾಸಕ ಶರಣಗೌಡ ಕಂದಕೂರ, ಕ್ರೀಡಾ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳ ಪಥಸಂಚಲನವನ್ನು ಕಾಲ್ನಡಿಗೆಯಲ್ಲೇ ವೀಕ್ಷಿಸುವ ಮೂಲಕ ಸರಳತೆ ಮೆರೆದರು. ಕಾರ್ಯಕ್ರಮಕ್ಕೂ ಮುನ್ನ ಶಾಲಾ ಮಕ್ಕಳು ಪುಷ್ಪವೃಷ್ಠಿ ಮೂಲಕ ಶಾಸಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.


“ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇರುವ ಕುರಿತು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ಶಿಕ್ಷಕರ ನೇಮಕಾತಿ ಕುರಿತು ಸರ್ಕಾರ ಈಗಾಗಲೇ ತೀರ್ಮಾನ ಕೈಗೊಂಡಿದೆ.”

  • ಶರಣಗೌಡ ಕಂದಕೂರ, ಗುರಮಠಕಲ್ ಶಾಸಕ