
ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೨೧: ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಭರವಸೆಯಂತೆ ೮೦೦ ಉರ್ದು ಮತ್ತು ೨೦೦ ಮರಾಠಿ ಶಿಕ್ಷಕರ ಹುದ್ದೆಗಳು ಸೇರಿದಂತೆ ಅಗತ್ಯ ಶಿಕ್ಷಕರ ನೇಮಕಾತಿಗೆ ಸ್ಪಷ್ಟ ಅಧಿಸೂಚನೆ ಹೊರಡಿಸಬೇಕು ಎಂದು ಸೋಲಿಡಾರಿಟಿ ಯೂಥ್ ಮೂವಮೆಂಟ್ ಕರ್ನಾಟಕದ ಸಂಚಾಲಕ ಇಸ್ಮಾಯಿಲ್ ತೀರ್ಥಹಳ್ಳಿ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ೧೫ ಸಾವಿರ ಶಿಕ್ಷಕರ ನೇಮಕಾತಿಗೆ ಸಂಬAಧಿಸಿದAತೆ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಉರ್ದು, ಮರಾಠಿ ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಮಾಧ್ಯಮದ ಅಭ್ಯರ್ಥಿಗಳಿಗೆ ಸಮರ್ಪಕ ಅವಕಾಶ ಕಲ್ಪಿಸದಿರುವುದು ಸಾವಿರಾರು ಅಭ್ಯರ್ಥಿಗಳಲ್ಲಿ ನಿರಾಸೆ ಮೂಡಿಸಿತ್ತು. ಈ ಕುರಿತು ಅಭ್ಯರ್ಥಿಗಳು ಹಾಗೂ ವಿವಿಧ ಜನಪರ ಸಂಘಟನೆಗಳು ಸರ್ಕಾರದ ಗಮನ ಸೆಳೆದಿದ್ದವು. ಸೋಲಿಡಾರಿಟಿ ಯೂಥ್ ಮೂವಮೆಂಟ್ ಕರ್ನಾಟಕ ಕೂಡ ನಿರಂತರವಾಗಿ ಒತ್ತಾಯಿಸಿತ್ತು ಎಂದರು.
ಸAಘಟನೆಯ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ೮೦೦ ಉರ್ದು ಮತ್ತು ೨೦೦ ಮರಾಠಿ ಶಿಕ್ಷಕರ ಹುದ್ದೆಗಳು ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ನೇಮಕಾತಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿತ್ತು. ಇದರಿಂದ ಅಭ್ಯರ್ಥಿಗಳಲ್ಲಿ ಹೊಸ ನಿರೀಕ್ಷೆ ಮೂಡಿದ್ದು, ಸರ್ಕಾರದ ಮುಂದಿನ ಅಧಿಸೂಚನೆಗಾಗಿ ಕಾಯುತ್ತಿದ್ದಾರೆ.
ಆದರೆ, ಕಡಿಮೆ ಸಂಖ್ಯೆಯ ಹುದ್ದೆಗಳಿಗೆ ಮಾತ್ರ ನೇಮಕಾತಿ ನಡೆಸಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ. ಸರ್ಕಾರ ನೀಡಿದ ಭರವಸೆಯಿಂದ ಹಿಂದೆ ಸರಿಯದೆ, ಅಗತ್ಯ ಹುದ್ದೆಗಳನ್ನು ಗುರುತಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಇಲ್ಲವಾದಲ್ಲಿ ಅಭ್ಯರ್ಥಿಗಳ ಹಿತಾಸಕ್ತಿಗಾಗಿ ಮುಂದಿನ ಹಂತದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸುವುದರ ಜೊತೆಗೆ ಯುವಜನರ ಉದ್ಯೋಗ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಬೇಕು. ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಯುವ ಆಯೋಗ ಸ್ಥಾಪನೆಗೆ ಆಗ್ರಹ
ಕರ್ನಾಟಕ ರಾಜ್ಯ ಯುವ ಆಯೋಗವನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣ ಸ್ಥಾಪಿಸಬೇಕು ಎಂದು ಇಸ್ಮಾಯಿಲ್ ತೀರ್ಥಹಳ್ಳಿ ಒತ್ತಾಯಿಸಿದರು.
ಯುವಜನರು ಇಂದು ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಆರ್ಥಿಕ ಒತ್ತಡ, ಮಾದಕ ವ್ಯಸನ, ಮಾನಸಿಕ ಆರೋಗ್ಯ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಸಮಗ್ರವಾಗಿ ಸ್ಪಂದಿಸುವ ಹಾಗೂ ಯುವಜನರ ಧ್ವನಿಯನ್ನು ಸರ್ಕಾರದ ನೀತಿ ರೂಪಣೆಯ ಮಟ್ಟಕ್ಕೆ ಕೊಂಡೊಯ್ಯುವ ಪರಿಣಾಮಕಾರಿ ಸಂಸ್ಥೆಯ ಅಗತ್ಯವಿದೆ ಎಂದರು.
೨೦೨೩ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಯುವ ಆಯೋಗ ಸ್ಥಾಪಿಸುವ ಭರವಸೆ ನೀಡಿತ್ತು. ಸರ್ಕಾರ ತನ್ನ ಭರವಸೆಯನ್ನು ಕಾರ್ಯರೂಪಕ್ಕೆ ತಂದು, ಯುವ ಆಯೋಗ ಸ್ಥಾಪನೆಯ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ದೇಶದ ಹಲವು ರಾಜ್ಯಗಳಲ್ಲಿ ಯುವ ಆಯೋಗಗಳು ಯುವಕರ ಹಕ್ಕುಗಳ ರಕ್ಷಣೆ, ಕೌಶಲ್ಯಾಭಿವೃದ್ಧಿ, ಉದ್ಯೋಗ, ನೀತಿ ರೂಪಣೆ, ಮಾದಕ ವ್ಯಸನ ವಿರೋಧಿ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಪಾಲ್ಗೊಳ್ಳುವಿಕೆಗೆ ಸಂಬAಧಿಸಿದAತೆ ಕಾರ್ಯನಿರ್ವಹಿಸುತ್ತಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಯುವಜನರನ್ನು ಸಾಮಾಜಿಕ, ಪ್ರಜಾಸತ್ತಾತ್ಮಕ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಯುವ ಆಯೋಗ ಅಗತ್ಯವಾಗಿದೆ ಎಂದು ಹೇಳಿದರು.
ಯುವ ಆಯೋಗವು ಯುವಕರಿಗೆ ನೀಡುವ ಸೌಲಭ್ಯವಲ್ಲ; ಬದಲಾಗಿ ಅವರ ಹಕ್ಕುಗಳು ಮತ್ತು ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುವ ಸಾಂಸ್ಥಿಕ ವ್ಯವಸ್ಥೆಯಾಗಿದೆ ಎಂದು ಪ್ರತಿಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಹಮೀದ್ ಜಾವೀದ್, ಉಬೇದ್, ಮುದಸ್ಸೀರ್ ಯಾಸೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.































