Home ಜಿಲ್ಲೆ ಕಲಬುರಗಿ ತೊಗರಿ ಬಿತ್ತನೆ ವೇಳೆ ಮಣ್ಣಿನ ತೇವಾಂಶ ಮುಖ್ಯ

ತೊಗರಿ ಬಿತ್ತನೆ ವೇಳೆ ಮಣ್ಣಿನ ತೇವಾಂಶ ಮುಖ್ಯ

ಕಲಬುರಗಿ,ಜು.6: ತೊಗರಿ ಬಿತ್ತನೆ ಕೈಗೊಳ್ಳುವ ವೇಳೆ ಮಣ್ಣಿನಲ್ಲಿ ತೇವಾಂಶ ಇರುವುದು ಅತಿ ಮುಖ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ಜಹೀರ್ ಹೇಳಿದರು.
ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಮುಂಗಾರು ಹಂಗಾಮು ಬೆಳೆ ಬಿತ್ತನೆ ಕುರಿತು ರೈತರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕಡಿಮೆ ಮಳೆ, ಮುಂಗಾರು ಮಳೆಯ ವಿಳಂಬ ಒಂದೆಡೆಯಾದರೆ ಎಲ್ಲೆಡೆ ಒಂದೇ ಪ್ರಮಾಣದ ಮಳೆ ಸುರಿಯುತ್ತಿಲ್ಲ. ಹೀಗಾಗಿ ಮಣ್ಣಿನ ತೇವಾಂಶದಲ್ಲಿ ವ್ಯತ್ಯಾಸ ಕಾಣಬಹುದಾಗಿದೆ. ತೇವಾಂಶ ಸಮಸ್ಯೆಯಿಂದಾಗಿ ಹೆಸರು, ಉದ್ದು ಬೆಳೆಯುವ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ವಾರಕ್ಕೆ ಐದು ನಿಮಿಷ ಮಳೆಯಾಗುತ್ತಿದೆ. ಬಿತ್ತಿದ ಬೆಳೆಗೆ ಭೂಮಿ ತೇವಾಂಶ ಕಾಪಾಡಿಕೊಳ್ಳಲು ಆಗುತ್ತಿಲ್ಲ. ಮತ್ತೊಂದೆಡೆ, ಪ್ರತಿ ತಾಸಿಗೆ 24 ರಿಂದ 30 ಕಿಲೋಮೀಟರ್ ವೇಗದ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಮೋಡಗಳು ಒಂದೆಡೆ ನಿಲ್ಲಲು ಸಹ ಆಗುತ್ತಿಲ್ಲ. ಇದರಿಂದಾಗಿ ಮಳೆಯ ಕೊರತೆ ಕಾಡುತ್ತಿದೆ ಎಂದರು.ಪ್ರಸಕ್ತ ವರ್ಷ ಯುರೋಪ್, ಏಷ್ಯಾ ಭಾರತದಲ್ಲಿ ಹವಾಮಾನ ವೈಪರೀತ್ಯ ಮಾನವ, ಪ್ರಾಣಿ ಸಂಕುಲ ಹಾಗೂ ಕೃಷಿ ಬೆಳೆಗೆ ಧಕ್ಕೆ ನೀಡುತ್ತಿದೆ ಎಂದರು.
ತೊಗರಿ ಬೀಜ ಉಪಚಾರ, ಬೀಜ ಕ್ಯಾಲ್ಸಿಯಂ ಮೂಲಕ ಕಠಿಣಗೊಳಿಸುವಿಕೆ, ಕಸ್ಕೂಟ ಕಳೆ ನಿರ್ವಹಣೆ, ಕಡಿಮೆ ಅವಧಿ ತಳಿ ಉಪಯೋಗ, ಬರಗಾಲದಲ್ಲಿ ಬೆಳೆ ನಿರ್ವಹಣೆ, ಬೋದು ಪದ್ಧತಿ ತೊಗರಿ ಬೇಸಾಯ, ಸಸ್ಯ ಸಂರಕ್ಷಣೆ ಮಾಹಿತಿ, ಕೃಷಿ ಇಲಾಖೆ ಯೋಜನೆ, ಸಮಗ್ರ ಕೃಷಿ ಮಾಹಿತಿಯನ್ನು ನಿವೃತ್ತ ಕೃಷಿ ವಿಜ್ಞಾನಿ ಡಾ. ದಯಾನಂದ ಮಹಾಲಿಂಗ, ಕೃಷಿ ಅಧಿಕಾರಿ ಪ್ರಿಯಾಂಕಾ ಕುಲಕರ್ಣಿ, ಆತ್ಮ ಕಲ್ಬುರ್ಗಿ ವಿಭಾಗ ಅಧಿಕಾರಿ ಶಿವರಾಯ ವಿವರಿಸಿದರು.
ರೈತ ಸಂಪರ್ಕ ಕೇಂದ್ರದ ಸದುಪಯೋಗ ಪಡೆಯಲು ತಿಳಿಸಿದರು. ತರಬೇತಿಯಲ್ಲಿ ರೈತರ ಕೃಷಿ ತೋಟಗಾರಿಕೆ ಪ್ರಶ್ನೆಗಳಿಗೆ ಉತ್ತರ ನೀಡಲಾಯಿತು, ಜೊತೆಗೆ ಜೈವಿಕ ವಿಧಾನ ಮೂಲಕ ಬೀಜ ಉಪಚಾರ ಪ್ರಾತ್ಯಕ್ಷಿಕೆಯನ್ನು ರೈತರಿಗೆ ವಿವರಿಸಲಾಯಿತು.