Home ಜಿಲ್ಲೆ ಬೆಂಗಳೂರು ಎಸ್‌ಐಆರ್ ಜಾಗೃತಿ ಗಣತಿ ನಮೂನೆ ಫಾರಂ ವಿತರಣೆಗೆ ಚಾಲ

ಎಸ್‌ಐಆರ್ ಜಾಗೃತಿ ಗಣತಿ ನಮೂನೆ ಫಾರಂ ವಿತರಣೆಗೆ ಚಾಲ

ಕೋಲಾರ,ಜು,೧- ಭಾರತ ಚುನಾವಣಾ ಆಯೋಗದ ಮಹತ್ವದ ’ಎಸ್‌ಐಆರ್ ಕಾರ್ಯಕ್ರಮದ ಕುರಿತು ಮತದಾರರಲ್ಲಿ ಅರಿವು ಮೂಡಿಸುವ ಮತ್ತು ಗಣತಿ ನಮೂನೆ ಫಾರಂಗಳನ್ನು ವಿತರಿಸುವ ಅಭಿಯಾನಕ್ಕೆ ತಾಲ್ಲೂಕಿನ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಲ್ವ ಚಿಕ್ಕವಲ್ಲಬ್ಬಿ ಗ್ರಾಮದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ.


ಗ್ರಾಮದ ಬಿಎಲ್‌ಓ ಕೆ.ಎಂ. ನಾರಾಯಣಸ್ವಾಮಿ ಗ್ರಾಮದ ಹಿರಿಯ ಮುಖಂಡರಾದ ಕೆ.ಎನ್. ಚಂದ್ರೇಗೌಡ ಅವರಿಗೆ ಗಣತಿ ನಮೂನೆ ಫಾರಂಗಳನ್ನು ಹಸ್ತಾಂತರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಮುಖಂಡರುಗಳಾದ ಸಿ. ಶಿವಣ್ಣ, ರಾಜೇಶ್ ಕೆ.ಎಂ. ಹಾಗೂ ಟಿ.ಕೆ. ಬೈರೇಗೌಡ ಅವರಿಗೂ ಫಾರಂಗಳನ್ನು ವಿತರಿಸಿ, ಗ್ರಾಮದ ಪ್ರತಿಯೊಬ್ಬರಿಗೂ ಮತದಾನದ ಹಕ್ಕಿನ ಮಹತ್ವವನ್ನು ತಲುಪಿಸುವ ಕೆಲಸ ಮಾಡಿದರು.


ಗ್ರಾಮದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇರಲೇಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ಮುಖಂಡರು ಮನವಿ ಮಾಡಿದ್ದಾರೆ. ಬಿಎಲ್‌ಓ ಅಧಿಕಾರಿಗಳು ಮನೆ ಮನೆಗೆ ಬಂದಾಗ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು. ಒಂದು ವೇಳೆ ಯಾರಲ್ಲಾದರೂ ಅಗತ್ಯ ದಾಖಲೆಗಳು ಇಲ್ಲದಿದ್ದರೆ, ಅದನ್ನು ಮುಖಂಡರ ಗಮನಕ್ಕೆ ತಂದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ದಾಖಲೆಗಳನ್ನು ಕೊಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಅಭಿಯಾನದ ಅಡಿಯಲ್ಲಿ ಪ್ರತಿದಿನವೂ ಜನರ ಸಂಪರ್ಕದಲ್ಲಿದ್ದು, ಮಾಹಿತಿ ಇಲ್ಲದವರಿಗೂ ನಿರಂತರವಾಗಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಲಾಗಿದೆ.


“ನಮ್ಮ ಹಕ್ಕು ನಮ್ಮ ಮತದಾನ” ಎಂಬ ಘೋಷಣೆಯೊಂದಿಗೆ, ಮತದಾನದ ಹಕ್ಕು ಹೊಂದಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಜನರಿಗೆ ಮನವರಿಕೆ ಮಾಡಿಕೊಡಲಾಗಿದೆ. ಯುವಕರಿಗೆ ಉದ್ಯೋಗದ ಅರ್ಜಿ ಸಲ್ಲಿಸಲು, ಭಾಗ್ಯಲಕ್ಷ್ಮಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳು, ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ವಿದ್ಯಾರ್ಥಿ ವೇತನ ಸೇರಿದಂತೆ ಸರ್ಕಾರದ ಹತ್ತಾರು ಯೋಜನೆಗಳ ಪ್ರಯೋಜನ ಪಡೆಯಲು ಮತದಾನದ ಹಕ್ಕು ಅತ್ಯಗತ್ಯವಾಗಿದೆ ಎಂದು ಜಾಗೃತಿ ಮೂಡಿಸಲಾಯಿತು.


ಅರ್ಜಿ ನಮೂನೆ ಫಾರಂಗಳನ್ನು ಭರ್ತಿ ಮಾಡುವಾಗ ಅಧಿಕಾರಿಗಳಿಗೆ ಸ್ಪಷ್ಟವಾಗಿ ಕಾಣುವಂತೆ ಗುಂಡಾಗಿ ಅಕ್ಷರಗಳನ್ನು ಬರೆಯಬೇಕು. ಸಾರ್ವಜನಿಕರು ಬಿಎಲ್‌ಓ ನೀಡುವ ಒರಿಜಿನಲ್ ಫಾರಂಗಳನ್ನು ನೇರವಾಗಿ ಭರ್ತಿ ಮಾಡುವ ಮೊದಲು, ಅವುಗಳ ಜೆರಾಕ್ಸ್ ಪ್ರತಿಯನ್ನು ಮಾಡಿಸಿಕೊಂಡು, ಅದರಲ್ಲಿ ಮೊದಲು ವಿವರಗಳನ್ನು ಬರೆದು ಎಲ್ಲವೂ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ನಂತರವಷ್ಟೇ ಒರಿಜಿನಲ್ ಫಾರಂನಲ್ಲಿ ಬರೆದು ಬಿಎಲ್‌ಓ ಕೈಗೆ ನೀಡಬೇಕು ಎಂದು ಸಲಹೆ ನೀಡಲಾಗಿದೆ.


ಹೆಸರಿನಲ್ಲಿ ಒಂದು ಅಕ್ಷರ ತಪ್ಪಾದರೂ ಮತ ಡಿಲೀಟ್ ಆಗುವ ಸಾಧ್ಯತೆ ಇರುತ್ತದೆ. ಒಮ್ಮೆ ಮತ ಡಿಲೀಟ್ ಆದಲ್ಲಿ ಮತ್ತೆ ಅದನ್ನು ಸರಿಪಡಿಸಲು ಕೋರ್ಟ್‌ಗೆ ಅಲೆಯಬೇಕಾದ ತೊಂದರೆ ಎದುರಾಗಬಹುದು. ಆದ್ದರಿಂದ ಪ್ರತಿ ಅಕ್ಷರ ಮತ್ತು ದಾಖಲೆಗಳು ಸ್ಪಷ್ಟವಾಗಿರಲಿ ಎಂದು ಎಚ್ಚರಿಸಲಾಗಿದೆ.


ಮತದಾರರು ೨೦೦೨ ಹಾಗೂ ೨೦೨೫ರ ಮತದಾನದ ಪಟ್ಟಿಯನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು ಅಥವಾ ಬಿಎಲ್‌ಓ ಬಳಿ ಕೇಳಿ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದ್ದು, ಮುಖಂಡರು ಕೂಡ ಇದನ್ನು ವಿವಿಧ ಸಾಮಾಜಿಕ ಜಾಲತಾಣಗಳ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲಿದ್ದಾರೆ. ಪಕ್ಷಾತೀತವಾಗಿ ಭಾರತ ಚುನಾವಣಾ ಆಯೋಗದ ಈ ’ಎಸ್‌ಐಆರ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಲಾಗಿದೆ.


ಯುವ ಮುಖಂಡರುಗಳಾದ ರಾಜೇಶ್ ಕೆ.ಎಂ., ಟಿ.ಕೆ. ಬೈರೇಗೌಡ ಹಾಗೂ ಕಲ್ವಮಂಜಲಿ ರಾಮುಶಿವಣ್ಣ ಅವರು ಈ ಇಡೀ ಜಾಗೃತಿ ಅಭಿಯಾನದ ನೇತೃತ್ವ ವಹಿಸಿ, ಸಾರ್ವಜನಿಕರಿಗೆ ನಿರಂತರ ಮಾಹಿತಿ ನೀಡುತ್ತಿದ್ದಾರೆ.