
ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೧೫: ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ವಿಜಯಪುರ ರೀಜನ್ ವತಿಯಿಂದ ನಗರದ ಆನಂದ ನಗರದಲ್ಲಿರುವ ಭಾವಸಾರ ಕ್ಷತ್ರೀಯ ಮಂಗಲ ಕಾರ್ಯಾಲಯದಲ್ಲಿ ಬೃಹತ್ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು ೧,೦೦೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಳ್ಳಾರಿ ಜೋನಲ್ ಬಿಸಿನೆಸ್ ಹೆಡ್ ಚೆನ್ನನಗೌಡ ಎಚ್., ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದು ಎಂಬ ಆಶಯದಿಂದ ಸಂಸ್ಥೆಯು ನಿರಂತರವಾಗಿ ವಿದ್ಯಾರ್ಥಿವೇತನ ಯೋಜನೆಯನ್ನು ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
೧೯೭೪ರಲ್ಲಿ ಆರಂಭಗೊAಡ ಸಂಸ್ಥೆಯು ೧೯೭೯ರಲ್ಲಿ ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಆಗಿ ಕಾರ್ಯನಿರ್ವಹಿಸಿ, ಇದೀಗ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಆಗಿ ದೇಶದ ಪ್ರಮುಖ ಎನ್‌ಬಿಎಫ್‌ಸಿ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಸಂಸ್ಥಾಪಕ ಪದ್ಮಭೂಷಣ ಆರ್. ತ್ಯಾಗರಾಜನ್ ಅವರ ದೂರದೃಷ್ಟಿಯಂತೆ ಚಾಲಕರು ಹಾಗೂ ಸಣ್ಣ ವ್ಯಾಪಾರಿಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಕಾರ್ಯಕ್ಕೆ ಸಂಸ್ಥೆ ಆದ್ಯತೆ ನೀಡುತ್ತಿದೆ ಎಂದರು.
ಲಾರಿ ಮತ್ತು ಟ್ರಕ್ ಚಾಲಕರು, ಕ್ಲೀನರ್‌ಗಳು ವೃತ್ತಿಯ ನಿಮಿತ್ತ ಸದಾ ಊರೂರು ಸಂಚರಿಸುತ್ತಿರುವುದರಿAದ ಅವರ ಮಕ್ಕಳ ಶಿಕ್ಷಣಕ್ಕೆ ಅಡಚಣೆಯಾಗಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿವೇತನ ಯೋಜನೆ ರೂಪಿಸಲಾಗಿದೆ. ವಿಶೇಷವಾಗಿ ಚಾಲಕರ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ನೆರವು ನೀಡಲಾಗುತ್ತಿದೆ. ಇದರೊಂದಿಗೆ ಬಡ ಕುಟುಂಬಗಳ ಪ್ರತಿಭಾವಂತ ಮಕ್ಕಳು ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಮೊಟಕುಗೊಳಿಸಬಾರದು ಎಂಬ ಆಶಯದಿಂದ ದೇಶಾದ್ಯಂತ ಪ್ರತಿವರ್ಷ ೩೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಸ್ಥೆ ವಿದ್ಯಾರ್ಥಿ ವೇತನ ನೀಡುತ್ತಿದೆ ಎಂದು ತಿಳಿಸಿದರು.
೮ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ?೪,೦೦೦, ಪಿಯುಸಿ ೧೧ ಮತ್ತು ೧೨ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ?೪,೫೦೦ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಕನಿಷ್ಠ ಶೇ.೬೦ ಅಂಕ ಗಳಿಸಿರುವ ಅರ್ಹ ವಿದ್ಯಾರ್ಥಿಗಳಿಗೆ ಈ ನೆರವು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಶ್ರೀರಾಮ್ ಫೌಂಡೇಶನ್ ಮೂಲಕ ವಿದ್ಯಾರ್ಥಿವೇತನದ ಜತೆಗೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಕಿವುಡ ಮಕ್ಕಳ ಶಾಲೆ ನಡೆಸುವುದು, ವೃದ್ಧಾಶ್ರಮಗಳ ನಿರ್ವಹಣೆ, ಪರಿಸರ ಸಂರಕ್ಷಣೆಗಾಗಿ ಗಿಡ ನೆಡುವುದು, ಸ್ವಚ್ಛತಾ ಕಾರ್ಯಕ್ರಮಗಳು ಹಾಗೂ ಅಂಧ ಮಕ್ಕಳಿಗೆ ನೆರವು ಸೇರಿದಂತೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಸಂಸ್ಥೆ ನಡೆಸುತ್ತಿದೆ ಎಂದರು.
ಮಸೂತಿಯ ಜಗದೀಶ್ವರ ಹಿರೇಮಠದ ಶ್ರೀ ಮ.ಘ.ಚ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.
ಹಿರಿಯ ವೈದ್ಯ ಡಾ. ಎಲ್.ಎಚ್. ಬಿದರಿ ಮಾತನಾಡಿ, ಶ್ರೀರಾಮ್ ಫೈನಾನ್ಸ್ ನೀಡುತ್ತಿರುವ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕು. ದೊರೆತಿರುವ ಆರ್ಥಿಕ ನೆರವು ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ಅವಕಾಶವಾಗಿದ್ದು, ಪರಿಶ್ರಮ, ಶಿಸ್ತು ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆದು ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಹೊಸೂರ, ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ ಮಡಿವಾಳಪ್ಪ ಕರಡಿ, ವಿ.ಡಿ.ಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಮಹಾನಗರ ಪಾಲಿಕೆ ಸದಸ್ಯೆ ರಶ್ಮಿ ಬಿ. ಕೋರಿ, ಲಾರಿ ಅಸೋಸಿಯೇಶನ್ ಅಧ್ಯಕ್ಷ ಆಸೀಫ್ ಎಲ್. ಬಗಲಿ (ಪಟ್ಟೇಲ), ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಎಚ್.ಆರ್. ಚಿಂಚಲಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವಿಜಯಪುರ ರೀಜನಲ್ ಬಿಸಿನೆಸ್ ಹೆಡ್ ಉಮೇಶ ಬಿರಾದಾರ ಹಾಗೂ ಸಿಬ್ಬಂದಿ ವರ್ಗದವರು ಅತಿಥಿ-ಗಣ್ಯರು, ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಸ್ವಾಗತಿಸಿ ಸತ್ಕರಿಸಿದರು.



























