Home ಮುಖಪುಟ ಸುದ್ದಿ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಮೂವರು ಬಂಧನ

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಮೂವರು ಬಂಧನ

ಮುಂಬಯಿ,ಅ.೧೯-ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ರಾಜಸ್ಥಾನದ ಕೋಟಾ ನಗರದಲ್ಲಿ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ನಗರದ ಜುಹೂ ಪ್ರದೇಶದ ಪುಷ್ಪಾ ಪಾರ್ಕ್ ಬಳಿ ನಿನ್ನೆ ಸಂಜೆ ಟೈಗರ್ ಶ್ರಾಫ್ ಅವರು ಫುಟ್‌ಬಾಲ್ ಆಟ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರ ಬಿಎಂಡಬ್ಲ್ಯು ಕಾರಿನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.


ಈ ಸಂಬಂಧಿಸಿದಂತೆ ದಾಖಲಿಸಿದ ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಕೈಗೊಂಡ ಪೊಲೀಸರು ಮೂವರನ್ನು ಕೋಟಾ ನಗರದಲ್ಲಿ ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.


ಮೂವರು ವಿಚಾರಣೆ ವೇಳೆ ನೀಡಿದ ಮಾಹಿತಿಯನ್ನು ಆಧರಿಸಿ ದಾಳಿಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರ


ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ವಿಶೇಷ ತಂಡದ ಮೂಲಕ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿ ರಾಜಸ್ಥಾನದ ಕೋಟಾದಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತರು ಪಾತ್ರ ಹಾಗೂ ದಾಳಿಯ ಹಿಂದಿನ ಉದ್ದೇಶದ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅಲ್ಲದೇ ದಾಳಿ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚಲು ೧೫ ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು,ರಾಜ್ಯವಲ್ಲದೇ ಹೊರರಾಜ್ಯಗಳಲ್ಲೂ ತೀವ್ರ ಕಾರ್ಯಾಚರಣೆ ಕೈಗೊಂಡಿವೆ.


ಜುಹೂ ಪ್ರದೇಶದ ಪುಷ್ಪಾ ಪಾರ್ಕ್ ಬಳಿ ನಿನ್ನೆ ಸಂಜೆ ಟೈಗರ್ ಶ್ರಾಫ್ ಅವರು ಫುಟ್‌ಬಾಲ್ ಆಟ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರ ಬಿಎಂಡಬ್ಲ್ಯು ಕಾರಿನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.


ದಾಳಿಯಲ್ಲಿ ೩೬ ವರ್ಷದ ನಟ ಟೈಗರ್ ಶ್ರಾಫ್ ಅವರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದು,ಅವರ
ಚಾಲಕ, ಆಟೋ ಚಾಲಕ ಗಾಯಗೊಂಡಿದ್ದಾರೆ.


ಟೈಗರ್ ಶ್ರಾಫ್ ಅವರನ್ನು ನೋಡಲು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಜನಸಮೂಹದ ನಡುವೆಯೇ ದಾಳಿಕೋರರು ನಟನ ಕಾರಿನತ್ತ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಗುಂಡಿನ ದಾಳಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಟೈಗರ್ ಶ್ರಾಫ್ ಅವರ ಕಾರು ಚಾಲಕ ಹಾಗೂ ಸಮೀಪದಲ್ಲಿದ್ದ ಆಟೋರಿಕ್ಷಾ ಚಾಲಕರೊಬ್ಬರು ಗಾಯಗೊಂಡಿದ್ದಾರೆ, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ


ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ ಎನ್ನಲಾದ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ.


ಅಲ್ಲದೇ ಗುಂಡಿನ ದಾಳಿಯ ಹಿಂದೆ ಯಾವ ಸಂಘಟನೆಯ ಕೈವಾಡವಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಟ ಸಲ್ಮಾನ್ ಖಾನ್ ಅವರೊಂದಿಗೆ ಟೈಗರ್ ಶ್ರಾಫ್ ಆಪ್ತತೆ ಹೊಂದಿರುವ ಹಿನ್ನೆಲೆಯಲ್ಲಿ, ಈ ದಾಳಿಗೂ ಬಿಷ್ಣೋಯ್ ಗ್ಯಾಂಗ್‌ಗೂ ಸಂಬಂಧವಿದೆಯೇ ಎಂಬ ಪ್ರಶ್ನೆ ಮೂಡಿದೆ. ಆದರೆ, ಈ ಕುರಿತು ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಗುಂಡಿನಿಂದಲೇ ಉತ್ತರ


ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿರುವ ದುಷ್ಕರ್ಮಿಗಳಿ ಗುಂಡುಗಳಿಗೆ ಗುಂಡುಗಳ ಮೂಲಕವೇ ಉತ್ತರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಠಿಣ ಎಚ್ಚರಿಕೆ ನೀಡಿದ್ದಾರೆ.


ಮುಂಬೈನಲ್ಲಿ ಗ್ಯಾಂಗ್‌ವಾರ್‌ಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಘಟನೆಯ ಬೆನ್ನಲ್ಲೇ ತಡರಾತ್ರಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಟೈಗರ್ ಶ್ರಾಫ್ ಅವರ ನಿವಾಸಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ, ನಟನ ಆರೋಗ್ಯದ ಬಗ್ಗೆ ವಿಚಾರಿಸಿದರು. ಅಲ್ಲದೆ, ಆತಂಕದಲ್ಲಿದ್ದ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ, ಘಟನೆಯ ಬಳಿಕ ಅಗತ್ಯ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದರು.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ, ಮುಂಬೈನಲ್ಲಿ ಮತ್ತೆ ಗ್ಯಾಂಗ್‌ವಾರ್‌ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
೧೯೯೦ರ ದಶಕದಲ್ಲಿ ಮುಂಬೈನಲ್ಲಿ ಗ್ಯಾಂಗ್‌ವಾರ್‌ಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ ಅಪರಾಧ ಗುಂಪುಗಳ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸಿ ಅವುಗಳ ಬೇರುಗಳನ್ನು ಕಿತ್ತೊಗೆಯಲಾಗಿತ್ತು. ಇದೀಗ ಮತ್ತೊಮ್ಮೆ ಇಂತಹ ಅಪರಾಧ ಜಾಲಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಮಯ ಬಂದಿದೆ ಎಂದು ಅವರು ಹೇಳಿದರು.


ನಗರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಸಂದೇಶವನ್ನು ಶಿಂಧೆ ನೀಡಿದ್ದಾರೆ.