
ಕಲಬುರಗಿ ಅ. 19:ಸತಿ-ಪತಿಯರು ಪರಸ್ಪರರ ಮನಸ್ಸನ್ನು ಅರಿತು, ಅಹಂಕಾರವನ್ನು ಬಿಟ್ಟು ಅನ್ಯೋನ್ಯತೆಯಿಂದ ಬದುಕಿದಾಗ ಮಾತ್ರ ಆ ಮನೆಯು ಸಾಕ್ಷಾತ್ ಕೈಲಾಸವಾಗಲು ಸಾಧ್ಯ,ಎಂದು ನರೋಣಾ ಹಾಗೂ ಗೋಳಾದ ಹೊಸಮಠದ ಪೂಜ್ಯ ಚನ್ನಮಲ್ಲ ಸ್ವಾಮಿಗಳು ನುಡಿದರು.
ನಗರದ ಅಡ್ವೋಕೇಟ್ಸ್ ಕಾಲೊನಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಗುಡ್ಡಾಪುರದ ದಾನಮ್ಮ ದೇವಿಯ ಜೀವನ ದರ್ಶನ ಕುರಿತ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಹಿಂದೂ ಧರ್ಮದಲ್ಲಿ ಉಲ್ಲೇಖಿಸಿರುವ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಆಶ್ರಮಗಳ ಮಹತ್ವವನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟರು.ಒಂದು ಆದರ್ಶ ಮನೆ ಸದಾ ಆನಂದದ ನಿಲಯವಾಗಿರಬೇಕು.
ಬುದ್ಧಿವಂತ ಹಾಗೂ ವಿಧೇಯ ಮಕ್ಕಳು, ಮೃದುಭಾಷಿಯಾದ ಪತ್ನಿ ಹಾಗೂ ಉತ್ತಮ ಸನ್ಮಿತ್ರರಿರಬೇಕು.
ಮನೆಗೆ ಬರುವ ಅತಿಥಿಗಳನ್ನು ದೇವರಂತೆ ಸತ್ಕರಿಸುವ ಹಾಗೂ ಪ್ರತಿ ದಿನ ಶಿವಪೂಜೆ ಮಾಡುವ ಗುಣವಿದ್ದರೆ ಆ ಗೃಹಸ್ಥಾಶ್ರಮವೇ ಧನ್ಯ, ಎಂದು ಶಾಸ್ತ್ರಗಳ ವಾಕ್ಯವಾದ ಸಾನಂದಂ ಸದನಂ…ಶ್ಲೋಕವನ್ನು ವಿವರಿಸಿದರು.
ಸಂಸಾರವನ್ನು ತ್ಯಜಿಸಿ ಸನ್ಯಾಸಿಯಾಗುವುದಕ್ಕಿಂತ, ಸಂಸಾರದಲ್ಲಿದ್ದುಕೊಂಡೇ ವಿರಕ್ತಿ ಬೆಳೆಸಿಕೊಳ್ಳುವುದು ಅತ್ಯಂತ ಶ್ರೇಷ್ಠ ಎಂದು ಕಿವಿಮಾತು ಹೇಳಿದರು.
ಇಂದಿನ ವಿವಾಹ ವ್ಯವಸ್ಥೆಯ ಮಾನದಂಡಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸ್ವಾಮೀಜಿಯವರು, ಮದುವೆಯ ನೈಜ ಅರ್ಥವನ್ನು ಮರೆತು ಕೇವಲ ಆಡಂಬರಕ್ಕೆ ಜೋತು ಬೀಳುತ್ತಿರುವ ಬಗ್ಗೆ ಎಚ್ಚರಿಸಿದರು. ಮದುವೆಯಲ್ಲಿ ವಧುವಿಗೆ ನೀಡುವ ಕುಂಕುಮ, ಮಾಂಗಲ್ಯ, ಕಾಲುಂಗುರ ಮುಂತಾದ ಪ್ರತಿಯೊಂದು ವಸ್ತುಗಳಿಗೂ ಪವಿತ್ರ ಸಂಕೇತಗಳಿವೆ.ಕಾಲುಂಗುರವು ಅಹಂಕಾರ ಬಿಟ್ಟು ದೃಷ್ಟಿಯನ್ನು ಭೂಮಿಯತ್ತ ಇಡಲು ಸೂಚಿಸಿದರೆ, ಆರತಿ-ದೀಪಗಳು ತವರು ಮತ್ತು ಗಂಡನ ಮನೆಗಳೆರಡರ ಕೀರ್ತಿಯನ್ನು ಬೆಳಗುವುದರ ಸಂಕೇತವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ದಾನಮ್ಮ ದೇವಿಯ ತ್ಯಾಗ ಮತ್ತು ಭಕ್ತಿಯನ್ನು ಸ್ಮರಿಸಿದ ಶ್ರೀಗಳು, ಲಿಂಗಮ್ಮನು ದಾಸೋಹದ ಮೂಲಕ 12ನೇ ಶತಮಾನದ ಶರಣರಾದ ಬಸವಣ್ಣ, ಅಲ್ಲಮಪ್ರಭುಗಳೊಡನೆ ಬೆರೆತು ದಾನಮ್ಮಳಾಗಿ ಬೆಳಗಿದಳು. ಭಗವಂತನು ಆಡಂಬರಕ್ಕೆ ಒಲಿಯುವವನಲ್ಲ; ಆತ ಅಪ್ಪಟ ಭಕ್ತಿಗೆ ಮಾತ್ರ ಒಲಿಯುವವನು. ಕುಂಬಾರ ಗುಂಡಯ್ಯನ ಬಡ ಹೆಂಡತಿಯ ಭಕ್ತಿಯ ಗಂಜಿಯನ್ನು ಪರಶಿವನು ಓಡೋಡಿ ಬಂದು ಸವಿದ ಕಥೆಯೇ ಇದಕ್ಕೆ ಜ್ವಲಂತ ಸಾಕ್ಷಿ ಎಂದು ವಿವರಿಸಿದರು.
ಪುರಾಣದಲ್ಲಿ ದಾನಮ್ಮನ ಕಲ್ಯಾಣ ಮಹೋತ್ಸವದ ಸಂದರ್ಭ.ಕಾಲನಿಯ ಸದ್ಭಕ್ತರು ಸಭಾ ಮಂಟಪವನ್ನೇ ಕಲ್ಯಾಣ ಮಂಟಪವಾಗಿ ಸಿಂಗರಿಸಿದ್ದರು. 12 ನೇ ಶತಮಾನದಲ್ಲಿ ಉಮರಾಣಿ ಯಲ್ಲಿ ನಡೆದಿದ್ದ ದಾನಮ್ಮನ ಮದುವೆಯ ಕಲ್ಪನೆಯ ರೀತಿ ರಿವಾಜುಗಳಂತೆಯೇ ಎರಡೂ ಕಡೆಯ ಬೀಗರಾಗಿ ಕಲ್ಯಾಣ ಮಹೋತ್ಸವಲ್ಲಿ ಭಾಗವಹಿಸಿದರು. ದೇವಸ್ಥಾನದ ಪೂಜಾರಿ ಚೆನ್ನವೀರಯ್ಯ ಸ್ವಾಮಿಯವರು ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಬೀಗರಿಗೆ ಹಾಗೂ ಬಂದ ಅತಿಥಿ ಅಭ್ಯಾಗತರಿಗೆ ದಾನಮ್ಮನ ಮೆಚ್ಚಿನ ಪ್ರಸಾದವಾದ ಹೋಳಿಗೆತುಪ್ಪದ ಊಟವನ್ನು ಪಂಕ್ತಿಯಲ್ಲಿ ಕೂಡಿಸಿ ಬಡಿಸಿದ್ದು ವಿಶೇಷ. ಈ ಸಂದರ್ಭದಲ್ಲಿ ಮಹಾದೇವ ಕಾವಳೆ,ಚಂದ್ರಶೇಖರ ಕೋಬಾಳ, ಶ್ರೀಮಂತ ಉದನೂರ್, ಶಿವಲಿಂಗಪ್ಪ ದೊಡ್ಡಮನಿ, ಜಗದೀಶ ಮಾಲು, ಎಸ್.ಎಂ.ಮುಗಳಿ , ವಿಶಾಲ ಪ್ರತಾಪ ಸಿಂಗ್, ಶಶಿಕಾಂತ ಪಾಟೀಲ, ಶರಣಬಸವಪ್ಪಾ ಪಪ್ಪಾ ಅವರನ್ನು ಗೌರವಿಸಲಾಯಿತು. ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಸಾನಿಧ್ಯ ವಹಿಸಿದ್ದರು.ಆರಂಭದಲ್ಲಿ ಸೋಮಶೇಖರ ರುಳಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಮಂಜುನಾಥ ಜೇವರ್ಗಿ ಅವರು ವಂದಿಸಿದರು.























