Home ಜಿಲ್ಲೆ ಕಲಬುರಗಿ ಸೂರ್ಯಕಾಂತಿ ಬೆಳೆ ಕ್ಷೇತ್ರೋತ್ಸವ

ಸೂರ್ಯಕಾಂತಿ ಬೆಳೆ ಕ್ಷೇತ್ರೋತ್ಸವ

ಕಲಬುರಗಿ,ಅ.19-ಜಿಲ್ಲೆಯ ಅಫಜಲಪುರ ತಾಲೂಕಿನ ಭೋಗನಳ್ಳಿ ಗ್ರಾಮದ ರೈತರ ಹೊಲಗಳಲ್ಲಿ ತೊಗರಿಯಲ್ಲಿ ಅಂತರಬೆಳೆಯಾಗಿ ಬೆಳೆದಿರುವ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಆರ್‍ಎಸ್‍ಎಫ್‍ಹೆಚ್-700 ಹೈಬ್ರಿಡ್ ತಳಿಯ ಸೂರ್ಯಕಾಂತಿ ಬೆಳೆಯ ಕ್ಷೇತ್ರೋತ್ಸವವನ್ನು ಕಲಬುರಗಿಯ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಪ್ರಗತಿಪರ ರೈತರಾದ ಅಬ್ದುಲ್ ಲತೀಫ್ ಪಟೇಲ್ ಹೊಲದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ಬೇಸಾಯಶಾಸ್ತ್ರ ವಿಜ್ಞಾನಿ ಡಾ. ಯುಸುಫ್‍ಅಲಿ ನಿಂಬರಗಿ ಮಾತನಾಡಿ ತೊಗರಿಯಲ್ಲಿ ಅಂತರ ಬೆಳೆಯಾಗಿ ತೇವಾಂಶದ ಕೊರತೆಯ ನಡುವೆಯೂ ಸೂರ್ಯಕಾಂತಿ ಬೆಳೆದು ಯಶ
ಕಂಡಿದ್ದಾರೆ. ರೈತರು ಒಂದೇ ಬೆಳೆಗೆ ಸೀಮಿತರಾಗದೆ ಅಂತರಬೆಳೆಯಾಗಿ ಹಲವು ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕವಾಗಿ ಲಾಭವನ್ನು ಪಡೆಯಬಹುದು. ತೊಗರಿಯಲ್ಲಿ ಸೂರ್ಯಕಾಂತಿ ಅಂತರಬೆಳೆಯಾಗಿ
ಬೆಳೆಯುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು ಇಂತಹ ಹಲವಾರು ತಾಂತ್ರಿಕತೆಗಳನ್ನು ಕೆವಿಕೆಯಿಂದ ಪಡೆದು ರೈತರು ಅಳವಡಿಸಿಕೊಂಡಾಗ ತಮ್ಮ ಆರ್ಥಿಕ ಪರಿಸ್ಥಿತಿಯನ್ನು
ಸುಧಾರಿಸಿಕೊಳ್ಳಬಹುದು ಎಂದರು. ಮಣ್ಣು ವಿಜ್ಞಾನಿ ಡಾ. ಶ್ರೀನಿವಾಸ ಬಿ. ವಿ, ಮಾತನಾಡಿ ರೈತ ಬಾಂಧವರು ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳನ್ನು ಬಳಸಿ ಹೆಚ್ಚೆಚ್ಚು ಸಾವಯವ ಮೂಲದ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಆರೋಗ್ಯವನ್ನು ನಿರ್ವಹಿಸಿ ಉತ್ತಮ ಫಲಿತಾಂಶ ಪಡೆಯಬಹುದು ಜೊತೆಗೆ ಯಾವುದೇ ತ್ಯಾಜ್ಯ ವಸ್ತುಗಳನ್ನು ಸುಡದೆ ಅದನ್ನು ಕೊಳೆಸಿ ಗೊಬ್ಬರವನ್ನಾಗಿ ಮಾಡಿ ಮರುಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆಯನ್ನು ಸುಧಾರಿಸಬಹುದೆಂದು ಹೇಳಿದರು. ಬಳಿಕ ವಿಜ್ಞಾನಿಗಳು ರೈತರೊಂದಿಗೆ ಚರ್ಚಿಸಿ ಸೂರ್ಯಕಾಂತಿ ಬೆಳೆಯ ಕುರಿತು ಸಮಾಲೋಚನೆ ನಡೆಸಿದರು.
ಗ್ರಾಮದ ರೈತರಾದ ಲತೀಫ್ ಪಟೇಲ್ ಹಾಗೂ ರಿಯಾಜ್ ಪಟೇಲ್‍ರವರು ಯಶಸ್ವಿಯಾಗಿ ಬೆಳೆದಿರುವ ಸೂರ್ಯಕಾಂತಿ ಬೆಳೆಯನ್ನು ಹಲವು ರೈತರು ಖುದ್ದಾಗಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೈತರಾದ ಸಿದ್ದು ಹುಲಿ, ಸುಭಾಷ ಪಾಟೀಲ, ಈರಣ್ಣ ಸುತಾರ್, ಮಹಬೂಬ್ ನದಾಫ್, ಸಿಧನೂರ, ಬೊಗಪ್ಪ ಮಾಂಗ, ರಸೂಲ್ ಪಟೇಲ್ ಹಾಗೂ ರಶೀದ್ ಪಟೇಲ್ ಸೇರಿದಂತೆ ಅನೇಕ ರೈತ
ಮುಖಂಡರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.