Home ಜಿಲ್ಲೆ ಕಡಪಟ್ಟಿಯಲ್ಲಿ ಅ.೧೧ರಿಂದ ೨೧ರವರೆಗೆ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

ಕಡಪಟ್ಟಿಯಲ್ಲಿ ಅ.೧೧ರಿಂದ ೨೧ರವರೆಗೆ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

ಸಂಜೆ ವಾಣಿ ವಾರ್ತೆ |
ಜಮಖಂಡಿ: ತಾಲೂಕಿನ ಸುಕ್ಷೇತ್ರ ಕಡಪಟ್ಟಿ ಗ್ರಾಮದ ದೊಡ್ಡ ಬಸವನಗುಡಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯಶ್ರೀಗಳು, ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ವಿವಿಧ ಕಾರ್ಯಕ್ರಮಗಳ ವಿವರ ನೀಡಿದರು.
ಸೆ.೨೧ರಿಂದ ಅ.೧೦ರವರೆಗೆ ಕಡಪಟ್ಟಿ ಕ್ಷೇತ್ರದಲ್ಲಿ ಶ್ರೀ ದಾನಮ್ಮ ದೇವಿಯ ಜೀವನ ಚರಿತ್ರೆ, ಪುರಾಣ ಹಾಗೂ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಸೆ.೨೧ರಂದು ಬೆಳಗಿನ ಜಾವ ಭಕ್ತರು ಗುಡ್ಡಾಪುರಕ್ಕೆ ತೆರಳಿ ದಾನಮ್ಮ ದೇವಿಯ ದರ್ಶನ ಪಡೆದು ಜ್ಯೋತಿಯನ್ನು ತರಲಿದ್ದಾರೆ. ಜ್ಯೋತಿಯನ್ನು ಜಮಖಂಡಿಯ ದಾನಮ್ಮ ದೇವಿ ದೇವಸ್ಥಾನದಲ್ಲಿ ಪೂಜಿಸಿ, ಬಳಿಕ ಹನುಮಂತ ದೇವರ ದೇವಸ್ಥಾನದಿಂದ ಉತ್ಸವದ ಮೂಲಕ ಕಡಪಟ್ಟಿಯ ಬಸವೇಶ್ವರ ದೇವಸ್ಥಾನಕ್ಕೆ ತರಲಾಗುವುದು. ಸಂಜೆ ೬ ಗಂಟೆಗೆ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಅ.೧೧ರಿಂದ ೨೧ರವರೆಗೆ ಕಡಪಟ್ಟಿಯಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ ೮ರಿಂದ ೧೧ರವರೆಗೆ ಕಲೂತಿ ಕಲ್ಯಾಣ ಮಂಟಪದಲ್ಲಿ ಜಗದ್ಗುರುಗಳ ಸಾನಿಧ್ಯದಲ್ಲಿ ಇಷ್ಟಲಿಂಗ ಮಹಾಪೂಜೆ ಜರುಗಲಿದೆ. ಭಕ್ತರು ಕುಟುಂಬ ಸಮೇತರಾಗಿ ಮಡಿಯಿಂದ ಕುಂಭದಲ್ಲಿ ನೀರು ತಂದು ಮಹಾಪೂಜೆಯಲ್ಲಿ ಪಾಲ್ಗೊಳ್ಳುವಂತೆ ಶಿವಾಚಾರ್ಯಶ್ರೀಗಳು ಮನವಿ ಮಾಡಿದರು.
ಮಹಾಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಉಪಹಾರ ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸಂಜೆ ೬ ಗಂಟೆಗೆ ಕಡಪಟ್ಟಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಧರ್ಮಸಭೆ ನಡೆಯಲಿದ್ದು, ಜಗದ್ಗುರುಗಳ ಸಾನಿಧ್ಯದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತಿಗಳು ಹಾಗೂ ಹಿರಿಯರು ಭಾಗವಹಿಸಲಿದ್ದಾರೆ.
ದಸರಾ ಧರ್ಮ ಸಮ್ಮೇಳನವು ಜಮಖಂಡಿ ಅಥವಾ ಕಡಪಟ್ಟಿಗೆ ಮಾತ್ರ ಸೀಮಿತವಾಗದೆ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಪಾಲ್ಗೊಳ್ಳುವ ಧಾರ್ಮಿಕ ಸಮಾರಂಭವಾಗಲಿದೆ ಎಂದು ಶಿವಾಚಾರ್ಯಶ್ರೀಗಳು ತಿಳಿಸಿದರು.
ಎಲ್ಲಾ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನದ ಸೇವೆ ಸಲ್ಲಿಸುವ ಮೂಲಕ ಜಗದ್ಗುರುಗಳ ಹಾಗೂ ಶ್ರೀ ದಾನಮ್ಮ ದೇವಿಯ ಆಶೀರ್ವಾದ ಪಡೆಯಬೇಕು ಎಂದು ಅವರು ಕರೆ ನೀಡಿದರು.
ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯಶ್ರೀಗಳು, ಏಗಪ್ಪ ಸವದಿ, ಬಸಯ್ಯ ಕಡಕೋಳ, ಚನ್ನಪ್ಪ ಬಿರಾದಾರ, ಬಸಯ್ಯ ಸಿದ್ದಗಿರಿಮಠ, ಮಹಾದೇವ ಇಟ್ಟಿ, ಮಲ್ಲಿಕಾರ್ಜುನ ಇಂಡಿ, ಶ್ರೀಕಾಂತ ರಾಮದುರ್ಗ, ಬಸಯ್ಯ ಮಠಪತಿ, ರಾಜು ಪೂಜಾರಿ, ಬಸಪ್ಪ ಕೋಣಪ್ಪನವರ, ಸಂಗಯ್ಯ ಪೂಜಾರಿ, ಕಾಂತು ಪೂಜಾರಿ, ಶಿವಯ್ಯ ಪೂಜಾರಿ, ವಿರೇಶ ಕಲಾದಗಿ, ಮಹೇಶ ಕಲಕತ್ತಿಮಠ, ಚಿಕ್ಕಯ್ಯ ಪೂಜಾರಿ, ಈರಣ್ಣ ಅಕ್ಕಿ, ಮಲಕಾಜಪ್ಪ ಚಟ್ನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.