
ಕಲಬುರಗಿ,ಆ.29: ಪೂಜ್ಯ ಡಾ. ಶರಣಬಸವಪ್ಪ ಅಪ್ಪನವರ ಸಮಾಜಮುಖಿ ಮತ್ತು ಆಧ್ಯಾತ್ಮಿಕ ಚಿಂತನೆಯ ಪ್ರಮುಖ ಆಯಾಮಗಳಲ್ಲಿ “ಶರಣಬಸವರ ಪುರುಷಾರ್ಥ ಸಿದ್ಧಿ ದಾಸೋಹ” ಎಂಬ ಪರಿಕಲ್ಪನೆಯನ್ನೂ ಗುರುತಿಸಬಹುದು ಎಂದು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವರಾಜ ಶಾಸ್ತ್ರಿ ಹೇರೂರ್ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಶರಣಬಸವರ ಪುರುಷಾರ್ಥ ಸಿದ್ಧಿ ದಾಸೋಹ ಎಂಬ ವಿಷಯ ಕುರಿತು ಮಾತನಾಡಿದರು.
ಪುರುಷಾರ್ಥ ಎಂದರೆ ಮಾನವ ಜೀವನದ ಉನ್ನತ ಗುರಿಗಳನ್ನು ಸಾಧಿಸುವ ಪ್ರಯತ್ನ, ಸಿದ್ಧಿ ಎಂದರೆ ಆ ಗುರಿಯ ಸಾಕಾರ, ದಾಸೋಹ ಎಂದರೆ ತನ್ನಲ್ಲಿರುವ ಜ್ಞಾನ, ಶ್ರಮ, ಸಂಪತ್ತು, ಸಮಯ ಮತ್ತು ಸೇವೆಯನ್ನು ಸಮಾಜದ ಒಳಿತಿಗಾಗಿ ಸಮರ್ಪಿಸುವ ಮನೋಭಾವ.
ಭಾರತೀಯ ಚಿಂತನಾ ಪರಂಪರೆಯಲ್ಲಿ ಪುರುಷಾರ್ಥಕ್ಕೆ ಸಾಮಾನ್ಯವಾಗಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಆಯಾಮಗಳನ್ನು ಹೇಳಲಾಗುತ್ತದೆ. ಆದರೆ ಶರಣ ಪರಂಪರೆಯ ದೃಷ್ಟಿಯಲ್ಲಿ ಮನುಷ್ಯನ ಜೀವನದ ಸಾರ್ಥಕತೆ ಕೇವಲ ವೈಯಕ್ತಿಕ ಸುಖದಲ್ಲಿಲ್ಲ, ಕಾಯಕ, ದಾಸೋಹ, ನೀತಿ, ಜ್ಞಾನ, ಭಕ್ತಿ ಮತ್ತು ಸಮಾಜಸೇವೆಯ ಮೂಲಕ ಬದುಕನ್ನು ಸಾರ್ಥಕಗೊಳಿಸುವುದರಲ್ಲಿ ಇದೆ.
ಈ ದೃಷ್ಟಿಯಿಂದ ಶರಣಬಸವರ ಪುರುಷಾರ್ಥ ಸಿದ್ಧಿ ಎಂದರೆ ವ್ಯಕ್ತಿಯು ತನ್ನ ಸಾಮಥ್ರ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಕುಟುಂಬ-ಸಮಾಜ-ನಾಡಿನ ಅಭಿವೃದ್ಧಿಗೆ ಕೊಡುಗೆ ನೀಡುವುದು.
“ಸ್ವಾರ್ಥದಿಂದ ಪರಾರ್ಥದ ಕಡೆಗೆ, ವೈಯಕ್ತಿಕ ಸಾಧನೆಯಿಂದ ಸಾಮಾಜಿಕ ಸಾಧನೆಯ ಕಡೆಗೆ” ಸಾಗುವ ಚಿಂತನೆಯೇ ಇದರ ಮೂಲ ಆಶಯ, ಆದ್ದರಿಂದ ‘ನಾನು ಏನು ಪಡೆದೆ?’ ಎನ್ನುವುದಕ್ಕಿಂತ ‘ನನ್ನಿಂದ ಸಮಾಜಕ್ಕೆ ಏನು ದೊರೆಯಿತು?’ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವ ಮನೋಭಾವ ಬೆಳೆಸುವುದು ಈ ಚಿಂತನೆಯ ಪ್ರಮುಖ ಸಂದೇಶವಾಗಿದೆ.
ಒಟ್ಟಿನಲ್ಲಿ, “ಶರಣಬಸವರ ಪುರುಷಾರ್ಥ ಸಿದ್ಧಿ ದಾಸೋಹ” ಎಂಬ ಪರಿಕಲ್ಪನೆಯನ್ನು ವ್ಯಕ್ತಿಯ ಜೀವನದ ಸಾರ್ಥಕತೆ, ಕಾಯಕದ ಗೌರವ, ಜ್ಞಾನದ ಹಂಚಿಕೆ, ಶಿಕ್ಷಣದ ಪ್ರಸಾರ, ಸಮಾನತೆ, ಭಕ್ತಿ ಮತ್ತು ಸಮಾಜಸೇವೆಯ ಸಮನ್ವಯವಾಗಿ ಅರ್ಥೈಸಬಹುದು. ಮನುಷ್ಯನು ತನ್ನ ಸಾಮಥ್ರ್ಯವನ್ನು ಕೇವಲ ಸ್ವಂತ ಪ್ರಗತಿಗಾಗಿ ಬಳಸದೆ ಸಮಾಜದ ಒಳಿತಿಗಾಗಿ ಸಮರ್ಪಿಸಿದಾಗ ನಿಜವಾದ ಪುರುಷಾರ್ಥ ಸಿದ್ಧಿಯಾಗುತ್ತದೆ ಎಂದು ಹೇಳಿದರು.































