Home ಮುಖಪುಟ ಸುದ್ದಿ ವಜ್ರಮುಷ್ಠಿ ಕಾಳಗಕ್ಕೆ ಜೆಟ್ಟಿಗಳ ಆಯ್ಕೆ

ವಜ್ರಮುಷ್ಠಿ ಕಾಳಗಕ್ಕೆ ಜೆಟ್ಟಿಗಳ ಆಯ್ಕೆ

ಮೈಸೂರು, ಅ. ೧೯- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಮೈಸೂರು ಜಂಬೂ ಸವಾರಿಗೆ ಅಂತಿಮ ಹಂತದ ಸಿದ್ಧತೆಗಳು ನಡೆದಿವೆ. ಜಂಬೂಸವಾರಿ ಮೆರವಣಿಗೆ ಮುನ್ನ ಅರಮನೆಯಲ್ಲಿ ನಡೆಯಲಿರುವ ವಜ್ರಮುಷ್ಠಿ ಕಾಳಗಕ್ಕೆ ಜೆಟ್ಟಿಗಳನ್ನು ಆಯ್ಕೆ ಮಾಡಲಾಗಿದೆ.


ದಸರಾ ಮಹೋತ್ಸವ ಪ್ರಯುಕ್ತ ಜಂಬೂಸವಾರಿ ಮೆರವಣಿಗೆ ಮುನ್ನ ಶುಭ ಸಂದೇಶವಾಗಿ ಜಟ್ಟಿಕಾಳಗವನ್ನು ನಡೆಸುವುದು ಸಂಪ್ರದಾಯ. ಅರಮನೆ ಆವರಣದಲ್ಲಿ ಜೆಟ್ಟಿ ಕಾಳಗದ ಪೈಲ್ವಾನರನ್ನು ಆಯ್ಕೆ ಮಾಡಲಾಯಿತು. ಈ ಬಾರಿ ಮೈಸೂರು, ಬೆಂಗಳೂರು, ಚನ್ನಪಟ್ಟಣ ಹಾಗೂ ಚಾಮರಾಜನಗರ ಜೆಟ್ಟಿಗಳ ನಡುವೆ ಮೈನವಿರೇಳಿಸುವ ವಜ್ರಮುಷ್ಠಿ ಕಾಳಗದಲ್ಲಿ ಸೆಣಸಲಿದ್ದಾರೆ.


ಮೈಸೂರಿನ ಮಹೇಶ್ ಜೆಟ್ಟಿ, ಬೆಂಗಳೂರಿನ ಚೇತನ್ ಜೆಟ್ಟಿ, ಚಾಮರಾಜನಗರದ ಸತೀಶ್ ಜೆಟ್ಟಿ, ಚನ್ನಪಟ್ಟಣದ ತೇಜಸ್ ಶೆಟ್ಟಿ ಅವರ ಹೆಸರನ್ನು ವಜ್ರಮುಷ್ಠಿ ಕಾಳಗಕ್ಕೆ ಉಸ್ತಾದಗಳು ಅಂತಿಮಗೊಳಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಪೈಲ್ವಾನ ಮಹೇಶ್ ಜೆಟ್ಟಿ, ಜಂಬೂಸವಾರಿ ಮೆರವಣಿಗೆ ದಿನ ಜೆಟ್ಟಿ ಕಾಳಗ ಮಾಡುವುದು ತಲಾತಲಾಂತರದಿಂದ ನಡೆದುಕೊಂಡು ಬಂದಿದೆ. ಈ ಕುಸ್ತಿಗಾಗಿ ಆರು ತಿಂಗಳಿನಿಂದ ಗರಡಿಯಲ್ಲಿ ತಯಾರಿ ನಡೆಸಿದ್ದೇನೆ ಎಂದು ತಿಳಿಸಿದರು.