Home ಜಿಲ್ಲೆ ಬೆಂಗಳೂರು ಹೈನುಗಾರರಿಗೆ ಆರ್ಥಿಕ ಬಲ ತುಂಬುವುದೇ ನಮ್ಮ ಧ್ಯೇಯ

ಹೈನುಗಾರರಿಗೆ ಆರ್ಥಿಕ ಬಲ ತುಂಬುವುದೇ ನಮ್ಮ ಧ್ಯೇಯ

ಕೋಲಾರ.ಸೆ.೧- ರಾತ್ರಿ, ಹಗಲು, ಬಿಸಿಲು, ಮಳೆಯೆನ್ನದೆ ಹೈನುಗಾರಿಕೆಯನ್ನೇ ತಮ್ಮ ಮುಖ್ಯ ಜೀವನೋಪಾಯ ಮಾಡಿಕೊಂಡಿರುವ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವುದು ಹಾಗೂ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ಕೋಮುಲ್ ನಿರ್ದೇಶಕ ವಡಗೂರು ಡಿ.ವಿ. ಹರೀಶ್ ಹೇಳಿದರು.


ತಾಲೂಕಿನ ಭಟ್ರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಾಣಿಜ್ಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳ ಆದಾಯ ಹೆಚ್ಚಿದಾಗ ಮಾತ್ರ ರೈತರಿಗೆ ಮತ್ತು ಹಾಲು ಉತ್ಪಾದಕರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.


ಈ ನೂತನ ವಾಣಿಜ್ಯ ಕಟ್ಟಡವನ್ನು ಕೋಮುಲ್ ನಿರ್ದೇಶಕ ವಡಗೂರು ಡಿ.ವಿ. ಹರೀಶ್ ಅವರ ವೈಯಕ್ತಿಕ ಧನಸಹಾಯ ಹಾಗೂ ಭಟ್ರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ ಅವರ ವಿಶೇಷ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ಈ ಕಟ್ಟಡದಿಂದ ಬರುವ ಬಾಡಿಗೆ ಹಾಗೂ ಇತರ ಆದಾಯವು ನೇರವಾಗಿ ಹಾಲು ಉತ್ಪಾದಕರ ಸಹಕಾರ ಸಂಘದ ಖಾತೆಗೆ ಜಮೆಯಾಗಲಿದ್ದು, ಸಂಘದ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮತ್ತು ಸದಸ್ಯರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ನೆರವಾಗಲಿದೆ.


ಕಾರ್ಯಕ್ರಮದಲ್ಲಿ ಕೋಮುಲ್ ಉಪ ವ್ಯವಸ್ಥಾಪಕರಾದ ಡಾ. ಆರ್. ಮಹೇಶ್, ವಿಸ್ತರಣಾಧಿಕಾರಿ ಎಸ್. ರಾಮಾಂಜಿನಪ್ಪ, ಸಂಘದ ಉಪಾಧ್ಯಕ್ಷ ಎನ್. ಶ್ರೀನಿವಾಸ್, ನಿರ್ದೇಶಕರುಗಳಾದ ಜಿ. ಶ್ರೀರಾಮಯ್ಯ, ಎನ್. ಕೃಷ್ಣಪ್ಪ, ಬಿ.ಎಂ. ಸುಬ್ರಮಣಿ, ಎನ್. ನಾಗೇಂದ್ರಬಾಬು, ಆರ್. ರಾಕೇಶ್, ಬಿ.ವಿ. ಗೋಪಾಲಕೃಷ್ಣ, ರತ್ನಮ್ಮ, ಬೈಯಮ್ಮ, ಸಿಬ್ಬಂದಿಯಾದ ಎಸ್. ಸಹನ, ಇಂದ್ರಮ್ಮ ಹಾಗೂ ಗ್ರಾಮದ ಹಾಲು ಉತ್ಪಾದಕರು ಮತ್ತು ಮುಖಂಡರು ಉಪಸ್ಥಿತರಿದ್ದರು.