
ಮಾಲೂರು,ಸೆ೧:ತಾಲ್ಲೂಕಿನ ಟೇಕಲ್ ಹೋಬಳಿಯ ಯಲುವಗುಳಿ ಗ್ರಾಮದ ಮೂಲಕ ಮಾಲೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿದ್ದ ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿದ್ದ ಸೇತುವೆಯ ಜಾಗದಲ್ಲಿ, ಲೋಕೋಪಯೋಗಿ ಇಲಾಖೆಯ ೧.೫೦ ಕೋಟಿ ಅನುದಾನದಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ವೈ. ನಂಜೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ತಾಲ್ಲೂಕಿನ ಸವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ? ಅನುದಾನ ತರಲಾಗುತ್ತಿದೆ. ಈಗಾಗಲೇ ತಾಲ್ಲೂಕಿನಲ್ಲಿ ೩,೨೦೦ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ಹಾಗೂ ಲೋಕಾರ್ಪಣೆ ನೆರವೇರಿಸಿದ್ದಾರೆ. ಸೇತುವೆಗಳ ಅಭಿವೃದ್ಧಿಗಾಗಿ ೧೦ ಕೋಟಿ ವಿಶೇಷ ಅನುದಾನ ತರಲಾಗಿದೆ.
ಇದರಲ್ಲಿ ಲಕ್ಕೂರು-ಕೋಡಿಹಳ್ಳಿ ನಡುವೆ ೪.೫ ಕೋಟಿ, ಕೊಂಡಶೆಟ್ಟಹಳ್ಳಿಯಲ್ಲಿ ೪ ಕೋಟಿ ಹಾಗೂ ಯಲುವಗುಳಿಯಲ್ಲಿ ೧.೫೦ ಕೋಟಿ ವೆಚ್ಚದ ಸೇತುವೆ ಕಾಮಗಾರಿಗಳು ಸೇರಿವೆ. ಯಲುವಗುಳಿ ಸೇತುವೆ ಕಾಮಗಾರಿಯು ಮುಂದಿನ ೩ ತಿಂಗಳಲ್ಲಿ ಅತ್ಯಂತ ಗುಣಮಟ್ಟದೊಂದಿಗೆ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಇನ್ನೂ ನನ್ನ ರಾಜಕೀಯ ಗುರುಗಳಲ್ಲಿ ಒಬ್ಬರಾದ ಯಲುವಗುಳಿ ರಾಜಣ್ಣ ಅವರ ಗ್ರಾಮವಾದ ಯಲುವಗುಳಿ ಗ್ರಾಮವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಬದ್ಧರಾಗಿದ್ದು, ಗ್ರಾಮಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು.
ಇನ್ನೂ ತಾಲ್ಲೂಕಿನ ಅಭಿವೃದ್ಧಿಯನ್ನು ಸಹಿಸದ ವಿರೋಧಪಕ್ಷದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಟೀಕೆ-ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ. ಟೀಕೆ ಮಾಡುವವರು ಮಾಡುತ್ತಲೇ ಇರಲಿ, ನಾವು ಕ್ಷೇತ್ರದ ಜನತೆಯ ಹಿತದೃಷ್ಟಿಯಿಂದ ನಮ್ಮ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ರಾಜಣ್ಣ, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಮೂರ್ತಿ, ಲೋಕೋಪ ಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾರಾಯಣಸ್ವಾಮಿ, ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.































