
ಕಲಬುರಗಿ,ಜು.8-ಕಟ್ಟಡ ಕಾರ್ಮಿಕರ ನೈಜ ಸಮಸ್ಯೆಗಳನ್ನು ಬಗೆಹರಿಸಬೇಕು, ಕಲ್ಯಾಣ ನಿಧಿಯ ದುರುಪಯೋಗವನ್ನು ತಕ್ಷಣ ನಿಲ್ಲಿಸಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ವತಿಯಿಂದ ಕಲಬುರಗಿ ವಿಭಾಗದ ಉಪ ಕಾರ್ಮಿಕ ಆಯುಕ್ತರ ಮೂಲಕ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದ ಲಕ್ಷಾಂತರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ದುಡಿದು ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಆದರೆ ಕಾರ್ಮಿಕರ ಬೆವರಿನ ದುಡಿಮೆಯಿಂದ ಸಂಗ್ರಹವಾಗಿರುವ ಕಲ್ಯಾಣ ನಿಧಿಯನ್ನು ಕಾರ್ಮಿಕರ ಹಕ್ಕುಗಳಿಗಾಗಿ ಬಳಸುವ ಬದಲು, ಸರ್ಕಾರ ಮತ್ತು ಕಲ್ಯಾಣ ಮಂಡಳಿಯು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾದ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ಕಲ್ಯಾಣ ಮಂಡಳಿಯ ನಿಧಿಯು ಕಟ್ಟಡ ಕಾರ್ಮಿಕರ ಸ್ವತ್ತಾಗಿದೆ. ಈ ನಿಧಿಯನ್ನು ಕಾರ್ಮಿಕರ ಸಾಮಾಜಿಕ ಭದ್ರತೆ, ಶಿಕ್ಷಣ, ಆರೋಗ್ಯ, ನಿವೃತ್ತಿ ಬದುಕು ಹಾಗೂ
ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕೇ ಹೊರತು, ಸರ್ಕಾರದ ಪ್ರಚಾರ, ಅನ್ಯ ಯೋಜನೆಗಳು ಅಥವಾ ಕಾರ್ಮಿಕರ ಆದ್ಯತೆಯಲ್ಲದ ಕಾರ್ಯಕ್ರಮಗಳಿಗೆ ಬಳಸಲು ಯಾವುದೇ ನೈತಿಕ ಅಥವಾ ಕಾನೂನುಬದ್ಧ ಸಮರ್ಥನೆ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ನೇರ ಆರ್ಥಿಕ ನೆರವು ಮತ್ತು ಶೈಕ್ಷಣಿಕ ಧನಸಹಾಯವನ್ನು ಕಡಿತಗೊಳಿಸಿ ವಿವಿಧ ಹೆಸರಿನ ಕಿಟ್‍ಗಳನ್ನು ವಿತರಿಸುವುದು, ಪಿಂಚಣಿಗೆ ಅನಗತ್ಯ ನಿಬರ್ಂಧಗಳನ್ನು ಹೇರುವುದು ಹಾಗೂ
ಕಾರ್ಮಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಸಿದುಕೊಳ್ಳುವ ಕ್ರಮಗಳು ಕಾರ್ಮಿಕ ವಿರೋಧಿ ನೀತಿಗಳಾಗಿವೆ. ಇದರಿಂದ ರಾಜ್ಯದ ಕಟ್ಟಡ ಕಾರ್ಮಿಕರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದೆ.
ಮೇಸನ್ ಕಿಟ್, ಸೇಫ್ಟಿ ಕಿಟ್,ಶೈಕ್ಷಣಿಕ ಕಿಟ್‍ಗಳು ಸೇರಿದಂತೆ ವಿವಿಧ ಹೆಸರಿನ ಕಿಟ್‍ಗಳ ವಿತರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಅದಕ್ಕಾಗಿ ಮೀಸಲಿಡುವ ಸಂಪೂರ್ಣ ಹಣವನ್ನು ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಬೇಕು, 2024ರಲ್ಲಿ ಜಾರಿಯಲ್ಲಿದ್ದ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಯೋಜನೆಯನ್ನು ಕೂಡಲೇ ಪುನಃ ಜಾರಿಗೊಳಿಸಬೇಕು, ಸ್ಕೂಲ್ ಕಿಟ್‍ಗಳಿಗೆ ಮೀಸಲಿಟ್ಟಿರುವ 115 ಕೋಟಿ ಹಣವನ್ನು ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯವಾಗಿ ವಿತರಿಸಬೇಕು, ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ರಾಜ್ಯದಾದ್ಯಂತ ಗುಣಮಟ್ಟದ ನಗದುರಹಿತ ವೈದ್ಯಕೀಯ ಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯವನ್ನು ಖಾತರಿಪಡಿಸಬೇಕು, 60 ವರ್ಷ ತುಂಬಿದ ನಂತರ 6 ತಿಂಗಳೊಳಗೆ ಪಿಂಚಣಿಗೆ ಅರ್ಜಿ ಸಲ್ಲಿಸಬೇಕೆಂಬ ಅನ್ಯಾಯದ ನಿಯಮವನ್ನು ತಕ್ಷಣವೇ ರದ್ದುಪಡಿಸಿ, 60 ವರ್ಷ ತುಂಬಿದ ಪ್ರತಿಯೊಬ್ಬ ನೋಂದಾಯಿತ ಕಟ್ಟಡ ಕಾರ್ಮಿಕರಿಗೂ ಯಾವುದೇ ತಾರತಮ್ಯವಿಲ್ಲದೆ ಪಿಂಚಣಿ ಮಂಜೂರು ಮಾಡಬೇಕು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು. ಕಾರ್ಮಿಕರ ನಿಧಿಯನ್ನು ಯಾವುದೇ ಅನ್ಯ ಉದ್ದೇಶಗಳಿಗೆ ಅಥವಾ ಸರ್ಕಾರದ ಇತರೆ ಯೋಜನೆಗಳಿಗೆ ವರ್ಗಾಯಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು, ಕಲ್ಯಾಣ ಮಂಡಳಿ ಘೋಷಿಸಿರುವ ಎಲ್ಲಾ ಕಲ್ಯಾಣ ಯೋಜನೆಗಳು ಮತ್ತು ಸೌಲಭ್ಯಗಳನ್ನು ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ಅರ್ಹ
ಕಟ್ಟಡ ಕಾರ್ಮಿಕರಿಗೆ ತಲುಪುವಂತೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಮೇಲ್ಕಂಡ ಬೇಡಿಕೆಗಳನ್ನು ಸರ್ಕಾರ ಮತ್ತು ಕಲ್ಯಾಣ ಮಂಡಳಿಯು ಕೂಡಲೇ ಈಡೇರಿಸದಿದ್ದಲ್ಲಿ, ರಾಜ್ಯದ ಕಟ್ಟಡ ಕಾರ್ಮಿಕರನ್ನು ಸಂಘಟಿಸಿ ರಾಜ್ಯವ್ಯಾಪಿ ಉಗ್ರ ಹೋರಾಟ, ಪ್ರತಿಭಟನೆ, ಧರಣಿ, ಮುತ್ತಿಗೆ ಸೇರಿದಂತೆ
ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿರುವ ವಿವಿಧ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಸಂಘದರ ರಾಜ್ಯ ಅಧ್ಯಕ್ಷ ದೇವಿದಾಸ ಎ.ಪಿ.ಎಸ್.ಷಣ್ಮುಗಮ್, ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ಶರ್ಮಾ, ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಎಂ.ಜಿ, ಶರಣು ಹೇರೂರ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.



























