
ಕಲಬುರಗಿ,ಜು.8-ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ವತಿಯಿಂದ ಅಧ್ಯಕ್ಷ ಶರಣಬಸಪ್ಪ ಎಂ.ಪಪ್ಪಾ ಹಾಗೂ ಗೌರವ ಕಾರ್ಯದರ್ಶಿ ಶಿವರಾಜ್ ವಿ.ಇಂಗಿನಶೆಟ್ಟಿ ಅವರ ನೇತೃತ್ವದ ನಿಯೋಗವು ಕಲಬುರಗಿ ಪ್ರವಾಸದಲ್ಲಿದ್ದ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕಲ್ಯಾಣ ಕರ್ನಾಟಕ ಭಾಗದ ಸವಾರ್ಂಗೀಣ ಅಭಿವೃದ್ಧಿಗಾಗಿ ಸಮಗ್ರ ಮನವಿಪತ್ರವನ್ನು ಸಲ್ಲಿಸಿತು.
ಕಲ್ಯಾಣ ಕರ್ನಾಟಕವು ಸಂವಿಧಾನದ 371(ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿದ್ದರೂ, ಇನ್ನೂ ಕೈಗಾರಿಕೆ, ಮೂಲಸೌಕರ್ಯ ಹಾಗೂ ಉದ್ಯೋಗ ಸೃಷ್ಟಿ ಕ್ಷೇತ್ರಗಳಲ್ಲಿ ಹೆಚ್ಚಿನ ಸರ್ಕಾರಿ ಗಮನ
ಮತ್ತು ಹೂಡಿಕೆಯ ಅಗತ್ಯವಿದೆ ಎಂದು ತಿಳಿಸಿ, ಈ ಭಾಗವನ್ನು ಕರ್ನಾಟಕದ ಮುಂದಿನ ಕೈಗಾರಿಕಾ ಹಾಗೂ ಹೂಡಿಕೆ ಕೇಂದ್ರವನ್ನಾಗಿ ರೂಪಿಸುವಂತೆ ಮುಖ್ಯಮಂತ್ರಿಗಳಿಗೆ ಕೆಕೆಸಿಸಿಐ ಮನವಿ ಮಾಡಿತು.
ಕಲ್ಯಾಣ ಕರ್ನಾಟಕ ಗ್ರೋತ್ ಮಿಷನ್ ಆರಂಭಿಸಿ ಬೃಹತ್ ಕೈಗಾರಿಕೆಗಳು ಹಾಗೂ ಹೂಡಿಕೆಗಳನ್ನು ಆಕರ್ಷಿಸುವುದು, ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಕಾಮಗಾರಿಯನ್ನು ತ್ವರಿತಗೊಳಿಸುವುದು,
ಕಲಬುರಗಿ ಎರಡನೇ ವರ್ತುಲ ರಸ್ತೆ (ಸೆಕೆಂಡ್ ಔಟರ್ ರಿಂಗ್ ರಸ್ತೆ) ನಿರ್ಮಾಣ, ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕದ ಶಾಶ್ವತ ವಿಶೇಷ ಕಾರ್ಯಾಲಯ ಸ್ಥಾಪನೆ, ಗೋವಿಂದರಾವ್ ಸಮಿತಿ ಶಿಫಾರಸುಗಳ ಶೀಘ್ರ ಜಾರಿ ಹಾಗೂ ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಕಲ್ಯಾಣ ಕರ್ನಾಟಕಕ್ಕೆ ಅತ್ಯುನ್ನತ ಆದ್ಯತೆ ನೀಡುವಂತೆ ಒತ್ತಾಯಿಸಲಾಯಿತು.
ಇದರ ಜೊತೆಗೆ, ಹೊಸ ಕರ್ನಾಟಕ ಎಂಎಸ್‍ಎಂಇ ನೀತಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವುದು, ವಿಶೇಷ ಆರ್ಥಿಕ ವಲಯಗಳು (SಇZ) ಸ್ಥಾಪಿಸುವುದು, ಕಲಬುರಗಿಯಲ್ಲಿ ನೂತನ ಎಪಿಎಂಸಿ ಮಾರುಕಟ್ಟೆ ನಿರ್ಮಿಸುವುದು, ಕಲಬುರಗಿ ರೈಲ್ವೆ ವಿಭಾಗ ಸೇರಿದಂತೆ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಕಲಬುರಗಿ ವಿಮಾನ ನಿಲ್ದಾಣದ ವಾಯು ಸಂಪರ್ಕ ಹಾಗೂ ಮೂಲಸೌಕರ್ಯ ವಿಸ್ತರಣೆ, ಕಡೇಚೂರು ಫಾರ್ಮಾ ಹಬ್ ಅಭಿವೃದ್ಧಿ, ಐಟಿ, ಜಿಸಿಸಿ, ಎಐ ಹಾಗೂ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಗೆ ವಿಶೇಷ ಉತ್ತೇಜನ ನೀಡುವಂತೆ ಮನವಿ ಮಾಡಲಾಯಿತು.
ಅದೇ ರೀತಿ, ಕಲ್ಯಾಣ ಕರ್ನಾಟಕ ಸಮಗ್ರ ಪ್ರವಾಸೋದ್ಯಮ ವಲಯ ಅಭಿವೃದ್ಧಿ, ಕಲಬುರಗಿಯಲ್ಲಿ ಹೊಸ ಅಗ್ನಿಶಾಮಕ ಕೇಂದ್ರಗಳ ಸ್ಥಾಪನೆ, ನಗರದ ಪ್ರವೇಶ ಮತ್ತು ನಿರ್ಗಮನ ಭಾಗಗಳಲ್ಲಿ ಉಪಗ್ರಹ ಬಸ್ ನಿಲ್ದಾಣಗಳ ನಿರ್ಮಾಣ ಹಾಗೂ ಅಪ್ಪರ್ ಕೃಷ್ಣಾ ಯೋಜನೆಯನ್ನು ಕಲಬುರಗಿವರೆಗೆ ವಿಸ್ತರಿಸಿ ಶೀಘ್ರ ಪೂರ್ಣಗೊಳಿಸುವಂತೆ ಸರ್ಕಾರವನ್ನು ಕೆಕೆಸಿಸಿಐ ಒತ್ತಾಯಿಸಿತು.
ಈ ಎಲ್ಲ ಯೋಜನೆಗಳನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸಿದರೆ ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ವೇಗ ಪಡೆದು, ಹೆಚ್ಚಿನ ಹೂಡಿಕೆಗಳು, ಉದ್ಯೋಗಾವಕಾಶಗಳು, ಉತ್ತಮ ಮೂಲಸೌಕರ್ಯ ಹಾಗೂ ಸಮತೋಲನ ಪ್ರಾದೇಶಿಕ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯಲಿದೆ ಎಂದು ಕೆಕೆಸಿಸಿಐ ವಿಶ್ವಾಸ ವ್ಯಕ್ತಪಡಿಸಿತು.
ಮುಖ್ಯಮಂತ್ರಿಗಳು ಮನವಿಪತ್ರವನ್ನು ಸ್ವೀಕರಿಸಿ, ಅದರಲ್ಲಿ ಪ್ರಸ್ತಾಪಿಸಲಾದ ವಿಷಯಗಳನ್ನು ಸಕಾರಾತ್ಮಕವಾಗಿ ಪರಿಗಣಿಸುವ ಭರವಸೆ ನೀಡಿದರು ಎಂದು ಕೆಕೆಸಿಸಿಐ ತಿಳಿಸಿದೆ.



























