
ಕಲಬುರಗಿ,ಜು.8-ಮಳೆ ಬಾರದ ಕಾರಣ ಬರ ಪರಿಸ್ಥಿತಿ ಎದುರಿಸುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಜಿಲ್ಲೆಯಾದ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯ ಎಂದು ಘೋಷಿಸಬೇಕು ಎಂದು ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ಮಾರುತಿ ಎಂ ಕಮ್ಮರವರು ಒತ್ತಾಯಿಸಿದ್ದಾರೆ.
ಮುಂಗಾರು ಮಳೆ ಸಂಪೂರ್ಣ ವಿಫಲವಾಗಿದೆ. ಈ ಕಾರಣದಿಂದ ತೊಗರಿ, ಹೆಸರು, ಉದ್ದು ಬಿತ್ತನೆಗೆ ಹಾಕಿದ ಬೀಜ, ಗೊಬ್ಬರಕ್ಕೆ ಹಾಕಿದ ಹಣ ನಷ್ಟವಾಗಿದೆ. ಎಳ್ಳು ಸೋಯಾಬಿನ್ ಇನ್ನಿತರ ಬೆಳೆಗಳು ಮಳೆ ಕಾರಣಗಳಿಂದ ಸಂಪೂರ್ಣ ಬೆಳೆದಿರುವುದಿಲ್ಲ. ಬೆಳೆ ಮೊಳಕೆಯಲ್ಲೇ ಒಣಗಿ ಹೋಗಿದ್ದು, ಇಳುವರಿ ಶೂನ್ಯ ಅಥವಾ ತೀರಾ ಕಡಿಮೆಯಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆಯುಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಅಂತರ್ಜಲ ಮಟ್ಟ ಕುಸಿದು ಕೊಳವೆಬಾವಿಗಳು ಬತ್ತಿಹೋಗುತಿವೆ. ಬ್ಯಾಂಕ್, ಸಹಕಾರ ಸಂಘ, ಖಾಸಗಿ ಸಾಲ ತೀರಿಸಲು ಆಗದೇ ಬಡ್ಡಿ ಹೆಚ್ಚಾಗುತ್ತಾ ಹೋಗುತ್ತದೆ. ಕೆಲಸವಿಲ್ಲದೆ ಕುಟುಂಬ ಸಮೇತ ನಗರಗಳಿಗೆ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ಸರ್ಕಾರ ಬರ ಪರಿಹಾರ, ಮೇವು ಶಿಬಿರ, ಕುಡಿಯುವ ನೀರು ಯೋಜನೆ, ಬೆಳೆ ವಿಮೆ ಮೂಲಕ ನೆರವು ನೀಡಲು ಪ್ರಯತ್ನಿಸಬೇಕು. ರೈತರು ಬ್ಯಾಂಕುಗಳಲ್ಲಿ ಅಥವಾ ಸಹಕಾರ ಸಂಘಗಳಲ್ಲಿ ಪಡೆದಿರುವ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಕಮ್ಮಾರ ಒತ್ತಾಯಿಸಿದ್ದಾರೆ.



























