
ಬೀದರ್: ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಹಾಗೂ ಬೆಂಗಳೂರಿನ ಕಥ್‌ಪುತ್ಲಿಯಾನ್ ಥಿಯೇಟರ್ ಗ್ರೂಪ್ (KTG) ಸಂಯುಕ್ತವಾಗಿ “ಮಹಮೂದ್ ಗವಾನ್” ಎಂಬ ಭವ್ಯ ಐತಿಹಾಸಿಕ ನಾಟಕವನ್ನು ಈ ತಿಂಗಳ 11ರಂದು ಸಂಜೆ 7.30 ಗಂಟೆಗೆ ನಗರದ ಹೊರವಲಯದಲ್ಲಿರುವ ಶಹಾಪುರ ಗೇಟ್ ಬಳಿ ಇರುವ ಶಾಹಿನ್ ನಗರದಲ್ಲಿನ ಅಬ್ದುಲ್ ರಹೆಮಾನ್ ಸಭಾಂಗಣದಲ್ಲಿ ಪ್ರಸ್ತುತಪಡಿಸುತ್ತಿವೆ ಎಂದು ಶಾಹಿನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ.ಅಬ್ದುಲ್ ಖದೀರ್ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ರಚಿಸಿರುವ ಈ ನಾಟಕವನ್ನು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಫರ್ ಮೊಹಿಯುದ್ದೀನ್ ಅವರು ನಿರ್ದೇಶಿಸುತ್ತಿದ್ದಾರೆ ಎಂದು ಹೇಳಿದರು.
ಈ ನಾಟಕವನ್ನು ಬೀದರ್‌ನಲ್ಲಿ ಪ್ರದರ್ಶಿಸುತ್ತಿರುವುದು ವಿಶೇಷ ಐತಿಹಾಸಿಕ ಮಹತ್ವವನ್ನು ಹೊಂದಿದೆ. 15ನೇ ಶತಮಾನದ ಮಹಾನ್ ರಾಜಕಾರಣಿ, ವಿದ್ವಾಂಸ ಹಾಗೂ ಶಿಕ್ಷಣ ಡಪ್ರೇಮಿ ಖ್ವಾಜಾ ಮಹಮೂದ್ ಗವಾನ್ ಅವರ ಭವ್ಯ ಮದರಸಾ ಇಂದಿಗೂ ಬೀದರ್‌ನ ಐತಿಹಾಸಿಕ ಪರಂಪರೆಯ ಸಂಕೇತವಾಗಿ ಉಳಿದಿದೆ. ಈ ನಾಟಕವು 15ನೇ ಶತಮಾನದ ಬಹುಮನಿ ಸುಲ್ತಾನರ ಕಾಲ ಘಟ್ಟದಲ್ಲಿನ ಅಧಿಕಾರ, ಜ್ಞಾನ, ಸುಧಾರಣೆ, ಮಹತ್ವಾಕಾಂಕ್ಷೆ ಹಾಗೂ ದ್ರೋಹಗಳ ನಡುವಿನ ಸಂಘರ್ಷವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ ಎಂದವರು ಹೇಳಿದರು.
ಕಥ್‌ಪುತ್ಲಿಯಾನ್ ಥಿಯೇಟರ್ ಗ್ರೂಪ್‌ನ ಸಂಸ್ಥಾಪಕರೂ ಆಗಿರುವ ಝಫರ್ ಮೊಹಿಯುದ್ದೀನ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ತಾನು 1979ರಿಂದ ಉರ್ದು ಹಾಗೂ ಹಿಂದಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು, ಅವರ ಸೇವೆಗಾಗಿ 2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಡಾ.ಗಿರಿಶ ಕಾರ್ನಾಡ ಅವರ ಜೊತೆ ಹಲವಾರು ವರ್ಷಗಳ ಕಾಲ ರಂಗಭೂಮಿಯಲ್ಲಿ ತೋಡಗಿದ್ದಾಗಿ ಹೇಳಿದರು.
ಈ ನಾಟಕದಲ್ಲಿ ಸಾಗ್ನಿಕ್ ಸಿನ್ಹಾ ಅವರು ‘ಮಹಮೂದ್ ಗವಾನ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರತೀಕ ಸುಲ್ತಾನಿಯಾ (ಟರ್ಕ್), ಅಶೋಕ ಧಾರಿವಾಲ್ (ಸೂತ್ರಧಾರ), ರಕ್ಷಿತ ರಾವ್ (ನಿಜಾಮ್-ಉಲ್-ಮುಲ್ಕ್), ಹಾಗೂ ಡಾ. ಕವಿತಾ ಅಗರ್ವಾಲ್ (ಬೇಗಂ ನರ್ಗಿಸ್) ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಸೃಜನಾತ್ಮಕ ತಂಡದಲ್ಲಿ ಹಿರಿಯ ರಂಗಸಜ್ಜಿಕೆ ತಜ್ಞ ಶಶಿಧರ್ ಅಡಪ, ಬೆಳಕು ವಿನ್ಯಾಸಕಾರ ಪ್ರದೀಪ್ ಬೆಳವಾಡಿ ಮತ್ತು ಸಂಗೀತ ನಿರ್ದೇಶಕ ಉಸ್ತಾದ್ ಫಯಾಜ್ ಖಾನ್ ಕಾರ್ಯನಿರ್ವಹಿಸಿದ್ದು, ಪ್ರೇಕ್ಷಕರಿಗೆ ಅದ್ಭುತ ದೃಶ್ಯ ಹಾಗೂ ಸಂಗೀತದ ಅನುಭವವನ್ನು ನೀಡಲಿದ್ದಾರೆ ಎಂದರು.
ಶಾಹಿನ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಅಫ್ರಾನಾಝ್ ಮಾತನಾಡಿದರು. ಪ್ರಾಧ್ಯಾಪಕ ಡಾ.ಸಿರಾಜುಲ್ ಹಸನ್ ಪತ್ರಿಕಾಗೋಷ್ಟಿಯಲ್ಲಿದ್ದರು.



























