Home ಜಿಲ್ಲೆ ಜೆಇಇ ಅಡ್ವಾನ್ಸ್‍ನಲ್ಲಿ ಯಾದಗಿರಿ ಜಿಲ್ಲೆಯ ಗ್ರಾಮೀಣ ಪ್ರತಿಭೆಯ ಸಾಧನೆ

ಜೆಇಇ ಅಡ್ವಾನ್ಸ್‍ನಲ್ಲಿ ಯಾದಗಿರಿ ಜಿಲ್ಲೆಯ ಗ್ರಾಮೀಣ ಪ್ರತಿಭೆಯ ಸಾಧನೆ

ಯಾದಗಿರಿ: ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳ ಪೈಕಿ ಅತ್ಯಂತ ಪ್ರತಿಷ್ಠಿತವೆಂದು ಪರಿಗಣಿಸಲ್ಪಡುವ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ತಾಂಡದ ವಿದ್ಯಾರ್ಥಿ ಶುಭಂ ರಾಠೋಡ ಗಮನಾರ್ಹ ಸಾಧನೆ ಮಾಡಿ ಐಐಟಿ ಪ್ರವೇಶಕ್ಕೆ ಅರ್ಹತೆ ಗಳಿಸುವ ಮೂಲಕ ಯಾದಗಿರಿ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದ್ದಾನೆ.

ಕಲಬುರಗಿಯ ಶ್ರೀಶರಣಬಸವೇಶ್ವರ ವಸತಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಶುಭಂ, ಮೊದಲು ಜೆಇಇ ಮೇನ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅರ್ಹತೆ ಪಡೆದ ನಂತರ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಆಯ್ಕೆಯಾಗಿದ್ದ. ಇದೀಗ ಅಡ್ವಾನ್ಸ್ ಪರೀಕ್ಷೆಯಲ್ಲಿ ಶೇ.72 ಅಂಕಗಳನ್ನು ಗಳಿಸಿ ಭಾರತೀಯ ತಾಂತ್ರಿಕ ಸಂಸ್ಥೆಗಳಾದ (ಐಐಟಿ) ಪ್ರವೇಶಕ್ಕೆ ಅರ್ಹತೆ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಶುಭಂ, ಆರ್ಥಿಕ ಸಂಕಷ್ಟಗಳನ್ನು ಮೆಟ್ಟಿನಿಂತು ಶಿಸ್ತು, ಪರಿಶ್ರಮ ಹಾಗೂ ದೃಢ ಸಂಕಲ್ಪದೊಂದಿಗೆ ಓದಿನಲ್ಲಿ ತೊಡಗಿಸಿಕೊಂಡ ಪರಿಣಾಮ ಈ ಮಹತ್ವದ ಸಾಧನೆ ಸಾಧ್ಯವಾಗಿದೆ. ಅವರ ತಂದೆ ಸೇವಲಾಲ ರಾಠೋಡ ಅವರು ಕೆಕೆಆರ್‍ಟಿಸಿ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದು, ಕುಟುಂಬದ ಆರ್ಥಿಕ ಸವಾಲುಗಳ ನಡುವೆಯೂ ಮಗನ ಶಿಕ್ಷಣಕ್ಕೆ ಯಾವುದೇ ಕೊರತೆಯಾಗದಂತೆ ಶ್ರಮಿಸಿದ ಪೆÇೀಷಕರ ತ್ಯಾಗ ಇಂದು ಸಾರ್ಥಕವಾಗಿದೆ.

ಶುಭಂ ಅವರ ಈ ಸಾಧನೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೊಸ ಆತ್ಮವಿಶ್ವಾಸ ತುಂಬಿದ್ದು, ಸೂಕ್ತ ಗುರಿ, ನಿರಂತರ ಪರಿಶ್ರಮ ಹಾಗೂ ದೃಢ ಮನೋಬಲ ಇದ್ದರೆ ಯಾವುದೇ ಸವಾಲನ್ನು ಜಯಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ.

ವಿದ್ಯಾರ್ಥಿಯ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸಿದ್ದು, ಐಐಟಿಯಲ್ಲಿ ಉನ್ನತ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಶ್ರೇಷ್ಠ ಇಂಜಿನಿಯರ್ ಆಗಿ ಹೊರಹೊಮ್ಮುವಂತೆ ಶುಭ ಹಾರೈಸಿದ್ದಾರೆ.