
ವಿಜಯಪುರ, ಜು. 8: ನಗರಕ್ಕೆ ಮತ್ತೊಂದು ಪ್ರಮುಖ ಸಂಪರ್ಕ ಕಲ್ಪಿಸಲಿರುವ ರಾಷ್ಟ್ರೀಯ ಹೆದ್ದಾರಿ-548ಬಿ (ಓಊ-548ಃ) ಕಾಮಗಾರಿ 2027ರ ಮಾರ್ಚ್ ವೇಳೆಗೆ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಹೆದ್ದಾರಿಯ ವಿವಿಧ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಬಳಿಕ ಅವರು ಈ ಮಾಹಿತಿ ನೀಡಿದರು.
ಮಹಾರಾಷ್ಟ್ರದ ಮುರಮ್ ನಿಂದ ವಿಜಯಪುರ ನಗರದ ಸುಭಾಷ್ ಚಂದ್ರ ಬೋಸ್ ವೃತ್ತದವರೆಗೆ ನಿರ್ಮಾಣಗೊಳ್ಳುತ್ತಿರುವ ಈ ಹೆದ್ದಾರಿ ಯೋಜನೆಗೆ 957.09 ಕೋಟಿ ರೂ. ವೆಚ್ಚ ನಿಗದಿಯಾಗಿದ್ದು, ಪ್ರಸ್ತುತ ಕಾಮಗಾರಿಯು ಶೇ. 65ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿಯೂ ವೇಗವಾಗಿ ಸಾಗುತ್ತಿದ್ದು, 2027ರ ಮಾರ್ಚ್‍ನಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
2025ರ ಜನವರಿ 16ರಂದು ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಯೋಜನೆ ಕಾರಣಾಂತರಗಳಿಂದ ವಿಳಂಬವಾಗಿದೆ. ಆದರೂ ನಿಗದಿತ ಅವಧಿಯೊಳಗೆ ಉಳಿದ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸುಮಾರು 102.303 ಕಿ.ಮೀ. ಉದ್ದದ ಈ ಹೆದ್ದಾರಿ ಮಹಾರಾಷ್ಟ್ರದ ಕರಜಗಿ, ಮಾಶ್ಯಾಳ, ಇಂಡಿ, ರೂಗಿ, ಅಥರ್ಗಾ ಹಾಗೂ ನಾಗಠಾಣ ಸೇರಿದಂತೆ ಒಟ್ಟು ಏಳು ಬೈಪಾಸ್‍ಗಳ ಮೂಲಕ ಸಾಗಲಿದೆ. ಯೋಜನೆಯಡಿ ನಾಲ್ಕು ಬೃಹತ್ ಸೇತುವೆಗಳು ಹಾಗೂ ಒಂದು ರೈಲ್ವೆ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ.
ಈ ಹೆದ್ದಾರಿ ಪೂರ್ಣಗೊಂಡ ಬಳಿಕ ವಿಜಯಪುರ ನಗರಕ್ಕೆ 7ನೇ ರಾಷ್ಟ್ರೀಯ ಹೆದ್ದಾರಿ ಸೇರ್ಪಡೆಯಾಗಲಿದ್ದು, ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಮತ್ತಷ್ಟು ಸುಗಮವಾಗುವುದರೊಂದಿಗೆ ವ್ಯಾಪಾರ, ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಸಾರಿಗೆ ಕ್ಷೇತ್ರಗಳಿಗೆ ಹೊಸ ಉತ್ತೇಜನ ದೊರೆಯಲಿದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.
ಪರಿಶೀಲನೆ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ವಿಜಯ ಪಾಟೀಲ, ಯೋಜನಾ ವ್ಯವಸ್ಥಾಪಕ ಮಾರುತಿರಾವ್ ಶಿಂದೆ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿವೇಕ ಮಠ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ ಸೇರಿದಂತೆ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.



























