
ಕಲಬುರಗಿ:ಇಂದಿನ ಡಿಜಿಟಲ್ ಆರ್ಥಿಕತೆಯಲ್ಲಿ ಡೇಟಾ ಅತ್ಯಂತ ಮೌಲ್ಯಯುತ ಆಸ್ತಿಯಾಗಿ ಪರಿಣಮಿಸಿದ್ದು, ಕಚ್ಚಾ ಡೇಟಾವನ್ನು ಅರ್ಥಪೂರ್ಣ ಮಾಹಿತಿಯನ್ನಾಗಿ ಪರಿವರ್ತಿಸುವ ಸಾಮಥ್ರ್ಯ ಹೊಂದಿರುವ ವೃತ್ತಿಪರರಿಗೆ ಡಿಜಿಟಲ್ ಜಗತ್ತಿನಲ್ಲಿ ಉಜ್ವಲ ಭವಿಷ್ಯವಿದೆ ಎಂದು ರೇವಾ ವಿಶ್ವವಿದ್ಯಾಲಯದ ಡಿಜಿಟಲ್ ಆರ್ಥಿಕತೆಯ ತಜ್ಞೆ ಪೆÇ್ರ. ಪಿ. ಪ್ರಿಯಾಂಕಾ ಅಭಿಪ್ರಾಯಪಟ್ಟರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಕಂಪ್ಯೂಟರ್ ಅಪ್ಲಿಕೇಶನ್ ನಿಕಾಯದ ಎಂ.ಸಿ.ಎ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಐದು ದಿನಗಳ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಹಾಗೂ “ಪವರ್ ಬಿಐ ಫಾರ್ ಡಾಟಾ ವಿಜುವಲೈಜೆಷನ್ ಆಂಡ್ ಬುಸಿನಸ್ ಅನಾಲಿಟಿಕ್ಸ್” ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿಶ್ಲೇಷಣಾತ್ಮಕ ಚಿಂತನೆ ಬೆಳೆಸಿಕೊಳ್ಳುವುದರ ಜೊತೆಗೆ ಪವರ್ ಬಿಐನಂತಹ ಕೈಗಾರಿಕಾ ಗುಣಮಟ್ಟದ ತಂತ್ರಾಂಶಗಳ ಪ್ರಾಯೋಗಿಕ ಅನುಭವವನ್ನು ಪಡೆದುಕೊಳ್ಳಬೇಕು. ವೇಗವಾಗಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿರಲು ತಮ್ಮ ತಾಂತ್ರಿಕ ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳುವುದು ಅಗತ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಡೇಟಾ ದೃಶ್ಯೀಕರಣ ಹಾಗೂ ವ್ಯವಹಾರ ವಿಶ್ಲೇಷಣೆ ವಿಷಯಗಳಲ್ಲಿ ಪರಿಣತಿ ಹೊಂದುವುದರಿಂದ ವಿವಿಧ ಕೈಗಾರಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ. ಈ ಕಾರ್ಯಾಗಾರದ ತಾಂತ್ರಿಕ ಅಧಿವೇಶನಗಳನ್ನು ರೇವಾ ವಿಶ್ವವಿದ್ಯಾಲಯದ ಪೆÇ್ರ. ಪಿ. ಪ್ರಿಯಾಂಕಾ ಹಾಗೂ ಪೆÇ್ರ. ಎ. ಸಹನಾ ನಡೆಸಿಕೊಡುತ್ತಿದ್ದು, ಡೇಟಾ ಪರಿವರ್ತನೆ, ದೃಶ್ಯೀಕರಣ ತಂತ್ರಗಳು, ಸಂವಾದಾತ್ಮಕ ಡ್ಯಾಶ್‍ಬೋರ್ಡ್‍ಗಳು, ವರದಿ ಸಿದ್ಧಪಡಿಸುವಿಕೆ ಹಾಗೂ ವ್ಯವಹಾರ ವಿಶ್ಲೇಷಣೆಯ ಅನ್ವಯಿಕೆಗಳ ಕುರಿತು ಪವರ್ ಬಿಐನಲ್ಲಿ ಭಾಗವಹಿಸುವವರಿಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಹಾಗೂ ಹಿರಿಯ ಪ್ರಾಧ್ಯಾಪಕರಾದ ಪೆÇ್ರ. ಬಿ. ವಿ. ಧಾಂದ್ರಾ ಮಾತನಾಡಿ, ಪವರ್ ಬಿಐ ಇಂದು ವಿವಿಧ ಕೈಗಾರಿಕೆಗಳಲ್ಲಿ ಅತ್ಯಂತ ಬೇಡಿಕೆಯಿರುವ ಬಿಸಿನೆಸ್ ಇಂಟೆಲಿಜೆನ್ಸ್ ಸಾಧನಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಡೇಟಾ ದೃಶ್ಯೀಕರಣ ಮತ್ತು ವಿಶ್ಲೇಷಣೆಯಲ್ಲಿ ಪರಿಣಿತಿ ಗಳಿಸುವುದರಿಂದ ವಿದ್ಯಾರ್ಥಿಗಳ ತಾಂತ್ರಿಕ ಸಾಮಥ್ರ್ಯ ಹೆಚ್ಚುವುದಲ್ಲದೆ, ಅವರ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಹಾಗೂ ಉದ್ಯೋಗಾರ್ಹತೆಯೂ ವೃದ್ಧಿಯಾಗುತ್ತದೆ. ಇಂತಹ ಕೈಗಾರಿಕಾ ಆಧಾರಿತ ಕಾರ್ಯಾಗಾರಗಳನ್ನು ಆಯೋಜಿಸಿರುವುದು ಅತ್ಯಂತ ಸಮಯೋಚಿತ ಕ್ರಮವಾಗಿದ್ದು, ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಕಂಪ್ಯೂಟರ್ ಅಪ್ಲಿಕೇಶನ್ ನಿಕಾಯದ ಡೀನ್ ಡಾ. ಶ್ರೀಕಾಂತ್ ಪಾಟೀಲ, ಉದ್ಯೋಗ ಮಾರುಕಟ್ಟೆಯಲ್ಲಿ ಡೇಟಾ ಅನಾಲಿಟಿಕ್ಸ್ ವೃತ್ತಿಪರರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸಂಪೂರ್ಣ ಪ್ರಯೋಜನ ಪಡೆದು ತಮ್ಮ ಪ್ರಾಯೋಗಿಕ ಜ್ಞಾನವನ್ನು ವೃದ್ಧಿಸಿಕೊಳ್ಳುವ ಮೂಲಕ ಉದ್ಯೋಗಾರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಂ.ಸಿ.ಎ ವಿಭಾಗದ ಬೋಧಕ ಸಿಬ್ಬಂದಿ ಹಾಗೂ ವಿಭಾಗದ ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.



























