
ಬೆಂಗಳೂರು, ಆ.೮-ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿಯಾಗಿದ್ದ ೪೦ ವರ್ಷ ಹಳೆಯ ಶಿಥಿಲಗೊಂಡ ಓವರ್‌ಹೆಡ್ ನೀರಿನ ಟ್ಯಾಂಕ್‌ನ್ನು ಬೆಂಗಳೂರು ಪೂರ್ವ ನಗರ ಪಾಲಿಕೆ ಅಧಿಕಾರಿಗಳು ಇಂದು ಸುರಕ್ಷಿತವಾಗಿ ತೆರವುಗೊಳಿಸಿದರು.
ಹೂಡಿ ವಾರ್ಡ್‌ನ ಭೈರತಿ ಬಂಡೆ ಪ್ರದೇಶದಲ್ಲಿದ್ದ ಈ ಟ್ಯಾಂಕ್ ಕಳೆದ ೧೦ ವರ್ಷಗಳಿಂದ ಬಳಕೆಯಲ್ಲಿರಲಿಲ್ಲ. ನಿರ್ವಹಣೆ ಕೊರತೆಯಿಂದ ಟ್ಯಾಂಕ್‌ನ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಬ್ಬಿಣದ ಸರಳುಗಳು ಹೊರಗೆ ಕಾಣಿಸುವಷ್ಟು ರಚನೆ ದುರ್ಬಲಗೊಂಡಿತ್ತು. ತಾಂತ್ರಿಕ ಅಧಿಕಾರಿಗಳ ಪರಿಶೀಲನೆಯಲ್ಲಿ ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆ ಇದೆ ಎಂದು ವರದಿ ಬಂದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.
ಟ್ಯಾಂಕ್ ಸುತ್ತಮುತ್ತ ವಾಸಿಸುತ್ತಿದ್ದ ೫೦ಕ್ಕೂ ಹೆಚ್ಚು ಕುಟುಂಬಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿತ ಇಲಾಖೆಗಳ ಸಮನ್ವಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ತಜ್ಞರ ಮೇಲ್ವಿಚಾರಣೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆಯಿಂದ ಟ್ಯಾಂಕ್ ತೆರವುಗೊಳಿಸಲಾಯಿತು.
ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಮಾತನಾಡಿ, ಸಾರ್ವಜನಿಕರಿಗೆ ಅಪಾಯ ಉಂಟುಮಾಡುವ ಶಿಥಿಲಗೊಂಡ ಕಟ್ಟಡಗಳು, ಬಳಕೆಯಲ್ಲಿಲ್ಲದ ನೀರಿನ ಟ್ಯಾಂಕ್‌ಗಳು ಹಾಗೂ ಇತರ ಅಪಾಯಕಾರಿ ರಚನೆಗಳನ್ನು ಗುರುತಿಸಿ ತಾಂತ್ರಿಕ ಪರಿಶೀಲನೆ ನಡೆಸಲಾಗುವುದು. ಅಗತ್ಯವಿರುವ ಕಡೆ ನಿಯಮಾನುಸಾರ ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಪಾಯಕಾರಿ ಕಟ್ಟಡಗಳು ಹಾಗೂ ಶಿಥಿಲಗೊಂಡ ಸಾರ್ವಜನಿಕ ಮೂಲಸೌಕರ್ಯಗಳ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದಿಲ್ಲ. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ಯಾವುದೇ ರಚನೆಯ ವಿರುದ್ಧ ಕಾನೂನುಬದ್ಧ ಹಾಗೂ ತಾಂತ್ರಿಕ ಕ್ರಮ ಮುಂದುವರಿಸಲಾಗುವುದು ಎಂದರು.
ತಮ್ಮ ಸುತ್ತಮುತ್ತ ಶಿಥಿಲಗೊಂಡ ಕಟ್ಟಡಗಳು, ಹಳೆಯ ನೀರಿನ ಟ್ಯಾಂಕ್‌ಗಳು ಅಥವಾ ಅಪಾಯಕಾರಿ ಸಾರ್ವಜನಿಕ ರಚನೆಗಳು ಕಂಡುಬಂದಲ್ಲಿ ಪಾಲಿಕೆಯ ಗಮನಕ್ಕೆ ತರುವಂತೆ ರಮೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

































