Home ಜಿಲ್ಲೆ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ರೈತರ ಸಾಲಮನ್ನಾ ಮಾಡಿ: ನಡಹಳ್ಳಿ

ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ರೈತರ ಸಾಲಮನ್ನಾ ಮಾಡಿ: ನಡಹಳ್ಳಿ

ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೨೧:ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಸಚಿವರು, ಶಾಸಕರು ಹಾಗೂ ಉನ್ನತ ಅಧಿಕಾರಿಗಳು ತಮ್ಮ ಸಂಬಳ ಮತ್ತು ಎಲ್ಲ ರೀತಿಯ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಕನಿಷ್ಠ ಶೇ.೧೦ರಷ್ಟು ಧುಂಧು ವೆಚ್ಚ ಕಡಿತಗೊಳಿಸಿದರೂ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಲಿದ್ದು, ಅದರಿಂದ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗಬಹುದು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಸರ್ಕಾರ ದುಂದು ವೆಚ್ಚ ಕಡಿತಗೊಳಿಸುವ ನಿರ್ಧಾರವನ್ನು ನಾಳೆಯೇ ಪ್ರಕಟಿಸಬೇಕು. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಿದ್ದು, ಅನ್ನದಾತರನ್ನು ಸಾಮೂಹಿಕ ಆತ್ಮಹತ್ಯೆಯಂತಹ ದುರಂತದ ಅಂಚಿಗೆ ತಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಯಾರಿಗೇ ಬೇಕಿದೆ ಈಗ ನಿಮ್ಮ ರಸ್ತೆ? ಮೊದಲು ಅನ್ನ ನೀಡುವ ಅನ್ನದಾತನಿಗೆ ಅನ್ನ ನೀಡಿ” ಎಂದು ಸರ್ಕಾರದ ವಿರುದ್ಧ ಗುಡುಗಿದರು.
೨೦೨೩ರಲ್ಲಿ ದುಬೈನಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದ ಸಮಾವೇಶ ಹಾಗೂ ಪ್ಯಾರಿಸ್‌ನಲ್ಲಿ ಕಂದಾಯ ಸಚಿವರು ಭಾಗವಹಿಸಿದ್ದ ಸಮಾವೇಶಗಳಲ್ಲಿಯೂ ರಾಜ್ಯದ ಬರಗಾಲದ ಗಂಭೀರತೆ ಚರ್ಚೆಯಾಗಿದ್ದರೂ, ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಕೃಷಿ ಸಂಶೋಧನಾ ಕೇಂದ್ರಗಳು ಮತ್ತು ತಂತ್ರಜ್ಞರು ರೈತರ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ತಾಳಿಕೋಟೆ, ಚಡಚಣ, ಇಂಡಿಯನ್ನು ಬರಪೀಡಿತ ಎಂದು ಘೋಷಿಸಿ

ಬೆಳೆ ವಿಮೆ ವಿಷಯದಲ್ಲಿಯೂ ರೈತರಿಗೆ ಅನ್ಯಾಯವಾಗುತ್ತಿದ್ದು, ಈ ಶೋಷಣೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ತಾಳಿಕೋಟೆ ತಾಲೂಕಿನಲ್ಲಿ ಒಂದು ಎಕರೆ ಪ್ರದೇಶಕ್ಕೂ ಶಾಶ್ವತ ನೀರಾವರಿ ಇಲ್ಲ. ತಿಕೋಟಾ ತಾಲೂಕಿಗೆ ಹೋಲಿಸಿದರೆ ತಾಳಿಕೋಟೆಯಲ್ಲಿ ಮಳೆಯ ಪ್ರಮಾಣವೂ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ಯಾವ ಮಾನದಂಡದ ಆಧಾರದ ಮೇಲೆ ತಾಳಿಕೋಟೆಯನ್ನು ಬರಪೀಡಿತ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪ್ರಶ್ನಿಸಿದರು.
“ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಬರದ ತೀವ್ರತೆ ಇರುವಾಗ ಈ ತಾರತಮ್ಯವೇಕೆ? ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬಹುದಿತ್ತು. ಕೇಂದ್ರ ಸರ್ಕಾರದ ಮೇಲೆ ಜವಾಬ್ದಾರಿ ಹಾಕಿ ರಾಜ್ಯ ಸರ್ಕಾರ ನುಣುಚಿಕೊಳ್ಳಲು ಪ್ರಯತ್ನಿಸಿದರೆ ಸುಮ್ಮನಿರುವುದಿಲ್ಲ” ಎಂದು ಎಚ್ಚರಿಸಿದರು.
ಚಡಚಣ, ತಾಳಿಕೋಟೆ ಹಾಗೂ ಇಂಡಿ ಭಾಗಗಳನ್ನು ನಾಳೆಯೇ ಬರಪೀಡಿತ ಎಂದು ಘೋಷಿಸಬೇಕು. ‘ಮೈಲ್ಡ್, ಮಾಡರೇಟ್, ಸಿವಿಯರ್’ ಎಂಬ ಪದಗಳ ಬಳಕೆಯಿಂದ ರೈತರನ್ನು ದಿಕ್ಕು ತಪ್ಪಿಸಬಾರದು. ರೈತರ ಪರವಾಗಿ ಸ್ಪಷ್ಟ ನಿರ್ಧಾರ ಕೈಗೊಂಡು ತೀವ್ರ ಬರಗಾಲ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಪ್ರತಿ ಎಕರೆಗೆ ?೫೦ ಸಾವಿರ ಪರಿಹಾರ ನೀಡಿ

ಸರ್ಕಾರದ ಉನ್ನತ ಹಂತದಲ್ಲಿರುವವರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ವೈಭೋಗದ ಜೀವನ ನಡೆಸುತ್ತಿರುವುದಕ್ಕೆ ತಕ್ಷಣ ಕಡಿವಾಣ ಹಾಕಬೇಕು. ಮುಂಗಾರು ಮತ್ತು ಹಿಂಗಾರು ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರು ಮುಂದಿನ ಒಂದು ವರ್ಷದವರೆಗೆ ಜೀವನ ಸಾಗಿಸಲು ಪ್ರತಿ ಎಕರೆಗೆ ?೫೦ ಸಾವಿರ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ

ರೈತರ ಪರವಾದ ನಿರ್ಧಾರಗಳು ಅಧಿವೇಶನದಲ್ಲಿ ಪ್ರಕಟವಾಗದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದ ನಡಹಳ್ಳಿ, ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾವಿರಾರು ರೈತರ ಸಮ್ಮುಖದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು. ಧರಣಿಯ ನಂತರವೂ ಸರ್ಕಾರ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.

ಉಸ್ತುವಾರಿ ಸಚಿವರಿಗೆ ಬರದ ಗಂಭೀರತೆ ಅರಿವಾಗಿಲ್ಲ

ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಶಾಸಕರು ಕಾಣಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳ ಸಭೆಗಳನ್ನೂ ನಡೆಸುತ್ತಿಲ್ಲ. ಇದೇನಾ ಬರಗಾಲದ ಬಗ್ಗೆ ನಿಮ್ಮ ಗಂಭೀರತೆ ಎಂದು ಪ್ರಶ್ನಿಸಿದ ಅವರು, ತಮಗೆ ಬೇಕಾದ ಕ್ಷೇತ್ರಗಳನ್ನು ಮಾತ್ರ ಬರಪೀಡಿತ ಎಂದು ಘೋಷಣೆ ಮಾಡಿಸಲಾಗಿದೆ ಎಂಬ ಸ್ವಪಕ್ಷೀಯ ಶಾಸಕರ ಆರೋಪ ನಿಜವೇ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಒಂದಾದರೂ ಮೇವು ಬ್ಯಾಂಕ್ ತೋರಿಸಿ

ರೈತರ ಸಂಕಷ್ಟದ ಜತೆಗೆ ಮೂಕಪ್ರಾಣಿಗಳ ನೋವೂ ಗಂಭೀರವಾಗಿದೆ. ಜಿಲ್ಲೆಯಲ್ಲಿ ಒಂದೇ ಒಂದು ಮೇವು ಬ್ಯಾಂಕ್ ಸ್ಥಾಪಿಸಿಲ್ಲ ಎಂದು ಆರೋಪಿಸಿದ ನಡಹಳ್ಳಿ, ಜಿಲ್ಲೆಯಲ್ಲಿ ಮೇವು ಬ್ಯಾಂಕ್ ಇರುವುದನ್ನು ತೋರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಸಾವಯವ ಬೀಜ ಪ್ರಮಾಣನ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ್ ರೆಡ್ಡಿ, ಮುಖಂಡರಾದ ಉಮೇಶ ಕಾರಜೋಳ, ಕಾಸುಗೌಡ ಬಿರಾದಾರ, ಶಿಲ್ಪಾ ಕುದರಗೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.