Home ಮುಖಪುಟ ಸುದ್ದಿ ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ

ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ

ನವದೆಹಲಿ, ಸೆ. ೨೪: ಹಬ್ಬದ ಋತು ಆರಂಭಕ್ಕೂ ಮುನ್ನ ಕೇಂದ್ರ ಸರ್ಕಾರ ಅಡುಗೆ ಎಣ್ಣೆಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಿದೆ. ತಾಳೆ ಎಣ್ಣೆ, ಸೋಯಾಬೀನ್ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆ ಸೇರಿದಂತೆ ಪ್ರಮುಖ ಖಾದ್ಯ ತೈಲಗಳ ಆಮದು ಸುಂಕ ಪರಿಷ್ಕರಣೆ ಸೆ.೨೪ರಿಂದಲೇ ಜಾರಿಗೆ ಬಂದಿದೆ.


ಕೇಂದ್ರ ಸರ್ಕಾರದ ಅಧಿಸೂಚನೆಯ ಪ್ರಕಾರ, ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ.೧೦ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಸಂಸ್ಕರಿತ ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕವನ್ನು ಶೇ.೩೨.೫ರಿಂದ ಶೇ.೨೨.೫ಕ್ಕೆ ಕಡಿತ ಮಾಡಲಾಗಿದೆ.


ಅದೇ ರೀತಿ, ಕಚ್ಚಾ ತಾಳೆ ಎಣ್ಣೆ ಹಾಗೂ ಕಚ್ಚಾ ಸೋಯಾಬೀನ್ ಎಣ್ಣೆಯ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ.೧೦ರಿಂದ ಶೇ.೫ಕ್ಕೆ ಇಳಿಸಲಾಗಿದೆ. ಸಂಸ್ಕರಿತ ತಾಳೆ ಎಣ್ಣೆ ಮತ್ತು ಸಂಸ್ಕರಿತ ಸೋಯಾಬೀನ್ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇ.೩೨.೫ರಿಂದ ಶೇ.೨೭.೫ಕ್ಕೆ ಇಳಿಸಲಾಗಿದೆ.

೨೦೨೫ರಲ್ಲಿ ಕೇಂದ್ರ ಸರ್ಕಾರ ಕಚ್ಚಾ ಖಾದ್ಯ ತೈಲಗಳ ಮೇಲಿನ ಸುಂಕವನ್ನು ಶೇ.೨೦ರಿಂದ ಶೇ.೧೦ಕ್ಕೆ ಇಳಿಸಿತ್ತು. ಇದೀಗ ಮತ್ತೊಮ್ಮೆ ಸುಂಕ ಕಡಿತ ಮಾಡಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗುವ ನಿರೀಕ್ಷೆ ಮೂಡಿದೆ.


ಹಬ್ಬದ ಸಂದರ್ಭದಲ್ಲಿ ಮನೆ ಬಳಕೆಯ ಜೊತೆಗೆ ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಮತ್ತು ಸಿಹಿತಿಂಡಿ ತಯಾರಿಕಾ ವಲಯಗಳಲ್ಲಿ ಖಾದ್ಯ ತೈಲದ ಬೇಡಿಕೆ ಹೆಚ್ಚಾಗಲಿದೆ. ಈ ಸಂದರ್ಭದಲ್ಲಿ ಸುಂಕ ಕಡಿತವಾಗಿರುವುದು ಆಮದು ಮಾಡಿಕೊಳ್ಳುವ ಎಣ್ಣೆಗಳ ಇಳಿದ ವೆಚ್ಚಕ್ಕೆ ಕಾರಣವಾಗಿ, ಚಿಲ್ಲರೆ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಭಾರತೀಯ ಸಸ್ಯಜನ್ಯ ತೈಲ ಉತ್ಪಾದಕರ ಸಂಘ ತಿಳಿಸಿದೆ.

ಸಂಘದ ಅಧ್ಯಕ್ಷ ಸುಧಾಕರ್ ದೇಸಾಯಿ ಅವರ ಪ್ರಕಾರ, ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕ ಕಡಿತವು ವಿಶೇಷವಾಗಿ ಗಮನಾರ್ಹವಾಗಿದ್ದು, ಸೂರ್ಯಕಾಂತಿ ಎಣ್ಣೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ದಕ್ಷಿಣ ಭಾರತದಲ್ಲಿ ಇದರ ಪರಿಣಾಮ ಕಂಡುಬರುವ ಸಾಧ್ಯತೆ ಇದೆ. ಆದರೆ, ಗ್ರಾಹಕರಿಗೆ ನಿಜವಾದ ಬೆಲೆ ಇಳಿಕೆಯ ಪ್ರಮಾಣವು ಜಾಗತಿಕ ಖಾದ್ಯ ತೈಲ ಬೆಲೆ, ಸಾಗರ ಸಾಗಣೆ ವೆಚ್ಚ, ರೂಪಾಯಿ ಡಾಲರ್ ವಿನಿಮಯ ದರ ಹಾಗೂ ಮಾರುಕಟ್ಟೆಯಲ್ಲಿರುವ ಹಳೆಯ ದಾಸ್ತಾನು ಸೇರಿದಂತೆ ಹಲವು ಅಂಶಗಳ ಮೇಲೆ ಅವಲಂಬಿತವಾಗಿರಲಿದೆ ಎಂದು IಗಿPಂ ಎಚ್ಚರಿಸಿದೆ.

ಸುಂಕ ಪರಿಷ್ಕರಣೆ ಮುಖ್ಯಾಂಶಗಳು
ಕಚ್ಚಾ ಸೂರ್ಯಕಾಂತಿ ಎಣ್ಣೆ: ೧೦% ೦%
ಸಂಸ್ಕರಿತ ಸೂರ್ಯಕಾಂತಿ ಎಣ್ಣೆ: ೩೨.೫% ೨೨.೫%
ಕಚ್ಚಾ ತಾಳೆ ಎಣ್ಣೆ: ೧೦% ೫%
ಕಚ್ಚಾ ಸೋಯಾಬೀನ್ ಎಣ್ಣೆ: ೧೦% ೫%
ಸಂಸ್ಕರಿತ ತಾಳೆ ಎಣ್ಣೆ: ೩೨.೫% ೨೭.೫%
ಸಂಸ್ಕರಿತ ಸೋಯಾಬೀನ್ ಎಣ್ಣೆ: ೩೨.೫% ೨೭.೫%
ಪರಿಷ್ಕೃತ ದರಗಳು ಸೆ.೨೪ರಿಂದ ಜಾರಿ.