Home ಸುದ್ದಿ ರಾಷ್ಟ್ರೀಯ ಬಂಗಾಳದಲ್ಲಿ 250 ಮದರಸಗಳಿಗೆ ಬೀಗ

ಬಂಗಾಳದಲ್ಲಿ 250 ಮದರಸಗಳಿಗೆ ಬೀಗ

ಕೋಲ್ಕತ್ತಾ, ಸೆ.24: ಕಡಿಮೆ ವಿದ್ಯಾರ್ಥಿ ದಾಖಲಾತಿ ಹಾಗೂ ಮೂಲಸೌಕರ್ಯಗಳ ಕೊರತೆಯನ್ನು ಆಧರಿಸಿ ಪಶ್ಚಿಮ ಬಂಗಾಳದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದಿರುವ ಸುಮಾರು 250 ಖಾಸಗಿ ಮದರಸಾಗಳನ್ನು ಡಿಸೆಂಬರ್ ಬಳಿಕ ಹಂತ ಹಂತವಾಗಿ ಮುಚ್ಚಲು ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ಈ ಮದರಸಾಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತಕ್ಷಣ ತೊಂದರೆಯಾಗದಂತೆ ಡಿಸೆಂಬರ್‍ವರೆಗೆ ತರಗತಿಗಳನ್ನು ಮುಂದುವರಿಸಲು ಅವಕಾಶ ನೀಡಲಾಗುವುದು. ಬಳಿಕ ಆಡಳಿತಾತ್ಮಕ ಪ್ರಕ್ರಿಯೆ ಪೂರ್ಣಗೊಳಿಸಿ ಮದರಸಾಗಳನ್ನು ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ರಾಜ್ಯದ ಅಲ್ಪಸಂಖ್ಯಾತ ವ್ಯವಹಾರ ಮತ್ತು ಮದರಸಾ ಶಿಕ್ಷಣ ಇಲಾಖೆಯು ನಡೆಸಿದ ರಾಜ್ಯವ್ಯಾಪಿ ಪರಿಶೀಲನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಪರಿಶೀಲನೆಯಲ್ಲಿ ಕೆಲವು ಮದರಸಾಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ಕಡಿಮೆ ಅಥವಾ ಅತಿ ಕ್ಷುಲ್ಲಕವಾಗಿರುವುದು ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಕಂಡುಬಂದಿದೆ.ಇದಕ್ಕೂ ಮುನ್ನ ಅಗತ್ಯ ಅನುಮತಿ ಹಾಗೂ ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ 252 ಮದರಸಾಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿತ್ತು. ಸುಮಾರು 100 ಮದರಸಾಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.


ಜೂನ್ ಆರಂಭದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ಸ್ಥಳ ಪರಿಶೀಲನೆಯಲ್ಲಿ ಮದರಸಾಗಳ ಮೂಲಸೌಕರ್ಯ, ಅನುಮತಿ, ಆಡಳಿತ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಲಾಗಿತ್ತು. ಅಗತ್ಯ ಅನುಮತಿ ಹೊಂದಿರುವ ಮದರಸಾಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ಅಲ್ಪಸಂಖ್ಯಾತ ವ್ಯವಹಾರ ಮತ್ತು ಮದರಸಾ ಶಿಕ್ಷಣ ಸಚಿವ ಕ್ಷುದಿರಾಮ್ ಟುಡು ತಿಳಿಸಿದ್ದಾರೆ.ಕಾರಣ ಕೇಳಿ ನೋಟಿಸ್ ಪಡೆದಿರುವ ಸಂಸ್ಥೆಗಳ ಉತ್ತರಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.


ರಾಜ್ಯದಲ್ಲಿ ಸರ್ಕಾರದ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಸುಮಾರು 2,500 ಮದರಸಾಗಳ ಮೇಲೂ ಸರ್ಕಾರದ ಗಮನವಿದೆ. ಮುಂದಿನ ಹಂತದಲ್ಲಿ ಇವುಗಳ ವಿರುದ್ಧವೂ ಹಂತ ಹಂತವಾಗಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಡಿಮೆ ದಾಖಲಾತಿ, ಮೂಲಸೌಕರ್ಯ ಕೊರತೆ, ಅನುಮತಿ ಹಾಗೂ ನೋಂದಣಿ ಸಮಸ್ಯೆಗಳು ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಮದರಸಾಗಳ ಕಾರ್ಯನಿರ್ವಹಣೆಯನ್ನು ಸರ್ಕಾರ ಪರಿಶೀಲಿಸುತ್ತಿದೆ.
ಮದರಸಾಗಳ ಕುರಿತ ನಿರ್ಧಾರದ ಜತೆಗೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಸುಮಾರು 1.51 ಲಕ್ಷ ಹುದ್ದೆಗಳ ನೇಮಕಾತಿಗೆ* ಸಚಿವ ಸಂಪುಟ ಅನುಮೋದನೆ ನೀಡಿದೆ.ಇದರಲ್ಲಿ ಪಶ್ಚಿಮ ಬಂಗಾಳ ಪೆÇಲೀಸ್ ಇಲಾಖೆಯಲ್ಲಿ 12,000 ಹಾಗೂ ಕೋಲ್ಕತ್ತಾ ಪೆÇಲೀಸ್ ಇಲಾಖೆಯಲ್ಲಿ 4,000 ಹುದ್ದೆಗಳು ಸೇರಿದ್ದು, ಒಟ್ಟು 16,000 ಪೆÇಲೀಸ್ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವಿಸಲಾಗಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸರ್ಕಾರಿ ಸೇವೆಗಳ ವಿತರಣೆಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ನೇಮಕಾತಿ ಪ್ರಕ್ರಿಯೆಗೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವಂತೆ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.


ಪೂರ್ವ ಮೇದಿನಿಪುರ ಜಿಲ್ಲೆಯ ನಿಮ್ತೌರಿಯಲ್ಲಿ ಹೊಸ ತಿದ್ದುಪಡಿ ಗೃಹ ಸ್ಥಾಪಿಸುವ ಪ್ರಸ್ತಾವನೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.ಇದಲ್ಲದೆ ಆಯುಷ್ ಇಲಾಖೆಗೆ ಪ್ರತ್ಯೇಕ ಇಲಾಖಾ ಸ್ಥಾನಮಾನ ನೀಡಲು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಗ್ರಂಥಾಲಯ ಅನುದಾನ ಯೋಜನೆಯಡಿ ಆಶ್ರಮ ವಸತಿ ನಿಲಯಗಳಿಗೆ ನೀಡಲಾಗುವ ಅನುದಾನವನ್ನು 1,800ರಿಂದ 3,300ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.