
ಬೆಂಗಳೂರು, ಸೆ.೨೪ – ರಾಜ್ಯದ ೧೬ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಬೇಡಿಕೆಗೆ ಮಣಿದಿರುವ ರಾಜ್ಯ ಸರ್ಕಾರ ಹಾಲಿನ ದರವನ್ನು ಲೀಟರ್ ಗೆ ೪ ರಿಂದ ೫ ರೂಪಾಯಿ ಹೆಚ್ಚಿಸಲು ಸಾಧ್ಯತೆ ಇದ್ದು, ನಾಳಿನ ಕರ್ನಾಟಕ ಹಾಲು ಮಹಾಮಂಡಳಿ ಸಭೆಯ ನಂತರ ದರ ಹೆಚ್ಚಳದ ಅಧಿಕೃತ ಆದೇಶ ಹೊರಬೀಳುವ ನೀರಿಕ್ಷೆ ಇದೆ.
ಹಾಲಿನ ದರ ಪರಿಷ್ಕರಣೆ ಸಂಬಂಧ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಕ್ಕೆ ಸೂಚಿಸಿದ್ದಾರೆನ್ನಲಾಗಿದೆ, ಇದರ ಹಿನ್ನೆಲೆಯಲ್ಲಿ ನಾಳಿನ ಕರ್ನಾಟಕ ಹಾಲು ಮಹಾಮಂಡಳಿ ಸಭೆಯಲ್ಲಿ ದರ ಹೆಚ್ಚಳದ ರೂಪುರೇಷೆ ಕುರಿತು ಚರ್ಚೆಯಾಗಲಿದ್ದು,ಸಭೆಯಲ್ಲಿ ನಿರ್ಣಯ ಕೈಗೊಂಡ ಬಳಿಕ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಿದ್ದು, ಕೆಎಂಎಫ್ನ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದ ನಂತರವೇ ಹೊಸ ದರ ಜಾರಿಗೆ ಬರುವ ದಿನಾಂಕ ಹಾಗೂ ಪರಿಷ್ಕೃತ ದರದ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ.
ಹಾಲಿನ ಮಾರಾಟ ದರವನ್ನು ಲೀಟರ್ ಗೆ ೮ ರಿಂದ ೧೦ ರೂ. ಮತ್ತು ಹೈನುಗಾರರಿಗೆ ನೀಡುವ ಪ್ರೊತ್ಸಾಹಧನವನ್ನು ೮ ರೂ.ಗೆ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಪ್ರತಿನಿಧಿಗಳು ರೈತರೊಂದಿಗೆ ಪ್ರತಿಭಟನೆ ನಡೆಸಿ ಬಳಿಕ ಸಿಎಂ ಡಿಕೆ ಶಿವಕುಮಾರ್ಗೂ ಮನವಿ ಮಾಡಿದ್ದರು. ಅಲ್ಲದೆ, ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಶೇ.೭೦ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದ ಹುಲ್ಲಿನ ಕೊರತೆಯಾಗಿದ್ದು, ಪಶು ಆಹಾರದ ಕಚ್ಚಾ ಸಾಮಗ್ರಿ, ಮೆಕ್ಕೆಜೋಳ, ಇಂಡಿ-ಬೂಸಾದ ದರ ಶೇ.೨೫ರಷ್ಟು ಏರಿಕೆಯಾಗಿದೆ. ರಾಸುಗಳಿಗೆ ಬಳಸುವ ನೆಲಹಾಸು ದರ ಹೆಚ್ಚಳವಾಗಿದ್ದು, ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಿದೆ. ಹೀಗಾಗಿ ದರ ಏರಿಕೆ ಮಾಡಬೇಕು ಎಂದು ಒಕ್ಕೂಟ ಪ್ರಸ್ತಾವನೆ ಇಟ್ಟಿತ್ತು. ಹೀಗಾಗಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ದರ ಏರಿಕೆ ಬೇಡಿಕೆಗೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ಹಾಲಿನ ದರವನ್ನು ಲೀಟರ್ ಗೆ ೪ ರಿಂದ ೫ ರೂಪಾಯಿ ಹೆಚ್ಚಳ ಮಾಡುವುದು ಬಹುತೇಕ ಖಚಿತವಾಗಿದೆ.
ನಂದಿನಿ ಹಾಲಿನ ಮಾರಾಟ ದರವನ್ನು ಕೊನೆಯ ಬಾರಿಗೆ ೨೦೨೫ರ ಏಪ್ರಿಲ್ನಲ್ಲಿ ಲೀಟರ್ಗೆ ೪ ರೂ. ಹೆಚ್ಚಳ ಮಾಡಲಾಗಿತ್ತು. ಇದೀಗ ನಂದಿನಿ ಹಾಲಿನ ದರ ೪೬ ರೂ. ಇದ್ದು, ಬೆಲೆ ಹೆಚ್ಚಳವಾದರೆ ಪರಿಷ್ಕೃತ ದರ ಲೀಟರ್ಗೆ ೫೦ ಅಥವಾ ೫೧ ರೂ. ಆಗಲಿದೆ. ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ಈ ಹೆಚ್ಚುವರಿ ಮೊತ್ತವನ್ನು ರೈತರು ಮತ್ತು ಹಾಲು ಒಕ್ಕೂಟಗಳಿಗೆ ೭೦:೩೦ರ ಅನುಪಾತದಲ್ಲಿ ಹಂಚಿಕೆ ಮಾಡಲಾಗುತ್ತದೆ. ಪಶು ಆಹಾರ, ಮೇವು, ಸಾಗಣೆ ಮತ್ತು ಪ್ಯಾಕೇಜಿಂಗ್ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಒಕ್ಕೂಟಗಳು ತಿಳಿಸಿವೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈಗಲೂ ಹಾಲಿನ ದರ ಕಡಿಮೆ ಇದೆ ಎನ್ನುವ ವಾದ ರೈತರದ್ದಾಗಿದೆ.
ತುಮಕೂರು (ಮಧುಗಿರಿ), ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನ ಫ್ರೀಡಂ ಪಾರ್ಕ್ ಸೇರಿದಂತೆ ರಾಜ್ಯದ ವಿವಿಧೆಡೆ ರೈತರು ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ನಡೆಸಿದ್ದರು. ಪ್ರತಿ ಲೀಟರ್ ಹಾಲಿನ ಖರೀದಿ ದರವನ್ನು ಮತ್ತು ಸರ್ಕಾರದ ಪ್ರೋತ್ಸಾಹ ಧನವನ್ನು ತಲಾ ೫ ರಿಂದ ೮ ರಷ್ಟು ಹೆಚ್ಚಿಸಬೇಕೆಂದು ರೈತ ಮುಖಂಡರು ಸರ್ಕಾರಕ್ಕೆ ಗಡುವು ನೀಡಿದ್ದರು.

























