
ಬೆಂಗಳೂರು, ಸೆ. ೨೪- ರಾಜ್ಯದಲ್ಲಿರುವುದು ರೈತಪರ ಸರ್ಕಾರವಲ್ಲ, ರಿಯಲ್ ಎಸ್ಟೇಟ್ ಸರ್ಕಾರ ಎಂದು ಬಿಜೆಪಿ ಸದಸ್ಯ ಸುನೀಲ್‌ಕುಮಾರ್ ವಿಧಾನಸಭೆಯಲ್ಲಿಂದು ಹೇಳಿದರು.
ರಾಜ್ಯದ ಬರ ಪರಿಸ್ಥಿತಿಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸರ್ಕಾರದ ಆದ್ಯತೆ ಅನ್ನದಾತ ಅಲ್ಲ, ರಿಯಲ್ ಎಸ್ಟೇಟ್. ಈ ಸರ್ಕಾರ ಬಂದಾಗಿನಿಂದ ವ್ಯಾಪಾರ, ವ್ಯವಹಾರದಲ್ಲೇ ಮುಳುಗಿದೆ. ರೈತರು ಗುಳೆ ಹೋಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಗಮನವೇ ಕೊಟ್ಟಿಲ್ಲ ಎಂದು ದೂರಿದರು
ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕೆಟ್ಟಿದೆ. ಇದೊಂದು ಝಿರೋ ಬ್ಯಾಲೆನ್ಸ್ ಸರ್ಕಾರ. ಮುಂದಿನ ದಿನಗಳಲ್ಲಿ ಈ ಸರ್ಕಾರವನ್ನು ಜನ ಮನೆಗೆ ಕಳುಹಿಸುತ್ತಾರೆ ಎಂದು ಹೇಳಿದರು.
ದೇಶದಲ್ಲೇ ಅದರಲ್ಲೂ ರಾಜ್ಯದಲ್ಲಿ ಎಲ್‌ನಿನೋದಿಂದ ಮುಂಗಾರು ಮಳೆ ಕಡಿಮೆಯಾಗಿ ಬರ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂದು ಹವಾಮಾನ ತಜ್ಞರು ಏಪ್ರಿಲ್‌ನಲ್ಲೇ ಮುನ್ನೆಚ್ಚರಿಕೆ ಕೊಟ್ಟಿದ್ದರು. ಆದರೆ ರಾಜ್ಯ ಸರ್ಕಾರ ಅಧಿಕಾರ ಹಸ್ತಾಂತರ, ನೂತನ ಸಿಎಂ ಪ್ರಮಾಣ ವಚನ, ಸಚಿವ ಸಂಪುಟ ರಚನೆಯಲ್ಲೇ ಮೂರು ತಿಂಗಳು ಕಳೆದು ಬಿಟ್ಟಿತು. ಬರ ಪರಿಸ್ಥಿತಿ ಎದುರಿಸಲು ಯಾವ ಸಿದ್ಧತೆಯನ್ನೂ ಮಾಡಿಕೊಳ್ಳಲಿಲ್ಲ ಎಂದು ದೂರಿದರು
ಪಕ್ಕದ ರಾಜ್ಯವಾದ ತಮಿಳುನಾಡಿನ ಮುಖ್ಯಮಂತ್ರಿ ಬರಪರಿಸ್ಥಿತಿಯ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಹತ್ತು ಜನರ ಸಮಿತಿ ರಚಿಸಿ ಬರ ಎದುರಿಸಲು ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ವರದಿ ಪಡೆದುಕೊಂಡು ಅದರಂತೆ ಕ್ರಮ ಕೈಗೊಂಡಿದ್ದಾರೆ. ಆದರೆ ರಾಜ್ಯದಲ್ಲಿ ಮಾತ್ರ ಏನೂ ಆಗಿಲ್ಲ. ಎಲ್ಲ ಕೇಂದ್ರದ ಮೇಲೆ ಹೊರೆಸಿ ಕೈ ತೊಳೆದುಕೊಂಡು ಬಿಟ್ಟಿದ್ದಾರೆ. ಬರ ಎದುರಿಸಲು ಯಾವುದೇ ಪರಿಹಾರ ಕ್ರಮಗಳು ಇದುವರೆಗೂ ಆಗಿಲ್ಲ ಎಂದರು.
ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಸಂಶೋಧನಾ ಸಂಸ್ಥೆಗಳಿಇವೆ. ಯಾವ ಸಂಶೋಧನಾ ಸಂಸ್ಥೆಗಳು ಬರ ಪರಿಸ್ಥಿತಿಯಲ್ಲಿ ಯಾವ ಬೆಳೆ ಬೆಳೆಯಬೇಕು, ರೈತರಿಗೆ ಯಾವ ರೀತಿ ನೆರವಾಗಬೇಕು ಎಂಬ ಬಗ್ಗೆ ಏನನ್ನೂ ಹೇಳಿಲ್ಲ. ಕೋಟ್ಯಂತರ ರೂ. ಅನುದಾನ ಪಡೆಯುವ ಸಂಶೋಧನಾ ಸಂಸ್ಥೆಗಳು ಬಿಳಿ ಆನೆಯಾಗಿವೆ. ರೈತರಿಗೆ ಈ ಸಂಶೋಧನಾ ಸಂಸ್ಥೆಗಳಿಂದ ಯಾವುದೇ ಉಪಯೋಗ ಆಗಿಲ್ಲ. ಹೊಸ ತಳಿಗಳನ್ನು ಕೊಟ್ಟಿಲ್ಲ ಎಂದು ಟೀಕಿಸಿ, ಹತ್ತು ವರ್ಷಗಳಲ್ಲಿ ಕೃಷಿ ಸಂಶೋಧನಾ ಸಂಸ್ಥೆಗಳು ಏನು ಮಾಡಿವೆ ಎಂಬ ವರದಿಯನ್ನು ಮಂಡಿಸಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಪ್ರತಿವರ್ಷ ನೀರಾವರಿಗೆ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿದ್ದೇವೆ. ಆದರೆ ಕೃಷಿ ವಿಸ್ತರಣೆ ಆಗುತ್ತಿಲ್ಲ ಎಂದು ಹೇಳಿದರು.
ಬಿಜೆಪಿ ಪಕ್ಷದಿಂದ ಬರ ಅಧ್ಯಯನಕ್ಕೆ ತಂಡಗಳನ್ನು ಕಳುಹಿಸಲಾಗಿತ್ತು. ನಾನು ಅಧ್ಯಯನ ತಂಡದ ಭಾಗವಾಗಿ ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿಗೆ ಹೋಗಿದ್ದೆ. ಅಲ್ಲಿ ಕೃಷಿಕರು ೭ ಕೋಟಿ ಮೀನು ಮರಿಗಳನ್ನು ಉತ್ಪಾದಿಸುತ್ತಿದ್ದರು. ಅವುಗಳನ್ನು ಮೀನುಗಾರಿಕೆ ಇಲಾಖೆ ಖರೀದಿಸಿ ಕೆರೆ, ಅಣೆಕಟ್ಟುಗಳಿಗೆ ಬಿಡುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮೀನು ಖರೀದಿಯನ್ನು ಸ್ಥಗಿತಗೊಳಿಸಿ, ಬಡ ಜನರಿಗೆ ಅನ್ಯಾಯ ಮಾಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಬರ ಎದುರಿಸಲು ವ್ಯವಸ್ಥಿತ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ. ವಿಬಿಜಿ ರಾಮ್‌ಜಿ ಕಾಯ್ದೆಯನ್ನು ಸಮರೋಪವಾಗಿ ಬಳಸಿಕೊಂಡು ಜನ ಗುಳೆ ಹೋಗುವುದನ್ನು ತಪ್ಪಿಸಬಹುದಿತ್ತು. ಆದರೆ ರಾಜ್ಯ ಸರ್ಕಾರ ವಿಬಿಜಿ ರಾಮಜಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿಲ್ಲ. ೧೦೦ ರ ಸಂಭ್ರಮದಲ್ಲೇ ಜಾಹೀರಾತುಗಳನ್ನು ಕೊಟ್ಟು ಅದರಲ್ಲೇ ಮುಳುಗಿದೆ ಎಂದರು
ರಾಜ್ಯ ಸರ್ಕಾರ ಎಲ್ಲ ಯೋಜನೆಗಳನ್ನು ಕಡಿತ ಮಾಡುತ್ತಿದೆ. ವೃದ್ಧಾಪ್ಯ ಪಿಂಚಿಣಿ ೭ ತಿಂಗಳಿಂದ ನೀಡಿಲ್ಲ. ಬಿಪಿಎಲ್ ಕಾರ್ಡ್ ರದ್ದು ಮಾಡಿದೆ. ೯೪ ಸಿ, ೫೩ ಸಿ ಎಲ್ಲವೂ ರದ್ದಾಗಿದೆ. ಗೃಹ ಲಕ್ಷಿ ಯೋಜನೆಯ ಪರಿಷ್ಕರಣೆಯೂ ನಡೆದಿದೆ. ಈ ಸರ್ಕಾರ ರೈತ ಪರವಾಗಿ ಇಲ್ಲ. ರೈತರಿಗೆ ಆದ್ಯತೆಯೇ ಈ ಸರ್ಕಾರದಲ್ಲಿ ಇಲ್ಲ ಎಂದರು
ಸರ್ಕಾರದ ಮಂತ್ರಿಗಳಾಗಲಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿ ಯಾರೂ ತಾಲ್ಲೂಕುಗಳಿಗೆ ಭೇಟಿ ನೀಡಿಯೇ ಇಲ್ಲ. ರೈತರ ಸಂಕಷ್ಟವನ್ನು ಆಲಿಸಿಲ್ಲ ಎಂದು ಅವರು ಟೀಕಿಸಿದರು.
ಈ ಸರ್ಕಾರ ರೈತ ಪರ ಅಲ್ಲ, ಸರ್ಕಾರದಲ್ಲಿ ರೈತರಿಗೆ ಆದ್ಯತೆ ಇಲ್ಲ. ಈ ಸರ್ಕಾರ ಏನಿದ್ದರೂ ರಿಯಲ್ ಎಸ್ಟೇಟ್ ಸರ್ಕಾರ ಎಂದು ಅವರು ಹೇಳಿದರು.
ಈ ಸರ್ಕಾರದಿಂದ ನಾವು ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ. ಬರ ಪರಿಹಾರ, ರೈತರ ಸಂಕಷ್ಟ ಪರಿಹಾರಕ್ಕೂ ಈ ಸರ್ಕಾರ ಏನು ಮಾಡುತ್ತದೆ ಎಂಬ ನಿರೀಕ್ಷೆಯೂ ನಮಗಿಲ್ಲ ಎಂದು ಅವರು ಹೇಳಿದರು.
ಬರಪೀಡಿತ ತಾಲ್ಲೂಕುಗಳ ಘೋಷಣೆ ವಿಚಾರದಲ್ಲೂ ರಾಜ್ಯ ಸರ್ಕಾರ ಸರಿಯಾದ ತೀರ್ಮಾನಗಳನ್ನು ಮಾಡುತ್ತಿಲ್ಲ. ಬರ ಮಾರ್ಗಸೂಚಿ ಪ್ರಕಾರ ತೀರ್ಮಾನಗಳು ಆಗುತ್ತಿಲ್ಲ. ರಾಜಕೀಯ ಪ್ರಭಾವ, ಒತ್ತಡ, ರಾಜೀನಾಮೆ ಇವುಗಳಿಗೆ ಮಣಿದು ಬರಪೀಡಿತ ತಾಲ್ಲೂಕು ಘೋಷಣೆ ಆಗುತ್ತಿದೆ. ಜಗಳೂರಿನಲ್ಲಿ ಬರ ಘೋಷಣೆಯಾಗಿದ್ದಕ್ಕೆ ಶಾಸಕರೊಬ್ಬರು ಸಂಭ್ರಮೋತ್ಸವ ನಡೆಸಿದ್ದಾರೆ. ಬರ ಸಂಭ್ರಮೋತ್ಸವವೇ. ರೈತರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಆಗಬೇಕು. ಅದು ಈ ಸರ್ಕಾರದಿಂದ ಆಗುತ್ತಿಲ್ಲ ಎಂದರು.

























