(ಸಂಜೆ ವಾಣಿ ವಾರ್ತೆ)
ಜಮಖಂಡಿ, ಜು.೧ : ವೀರ ಶಿರೋಮಣಿ ಮಹಾರಾಣಾ ಪ್ರತಾಪಸಿಂಹ ಹುಟ್ಟಿದ್ದೇ ಯುದ್ಧ ಮಾಡಲು. ಯುದ್ಧದಲ್ಲಿ ಗೆದ್ದರೆ ವಿಜಯ, ಮಡಿದರೆ ವೀರಸ್ವರ್ಗ ಎಂಬುದು ಅವರ ನೀತಿಯಾಗಿತ್ತು. ದೇಶ, ನಾಡು ಮತ್ತು ಸಮಾಜಕ್ಕಾಗಿ ಅವರು ಪ್ರಾಣತ್ಯಾಗ ಮಾಡಿದರು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಬಿ. ಮಟೋಳಿ ಹೇಳಿದರು.
ನಗರದ ಕುಡಚಿ ರಸ್ತೆಯ ಜಿಎಲ್‌ಬಿಸಿ ಕಚೇರಿ ಸಮೀಪದ ಹಜಾರೆ ಬಡಾವಣೆಯ ಬನ್ನಿಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಶ್ರೀ ಮಹಾರಾಣಾ ಪ್ರತಾಪಸಿಂಹ ರಾಜಪೂತ ಸಮಾಜ ಸೇವಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ವೀರ ಶಿರೋಮಣಿ ಶ್ರೀ ಮಹಾರಾಣಾ ಪ್ರತಾಪಸಿಂಹ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಹಾರಾಣಾ ಪ್ರತಾಪ ನೇತೃತ್ವದ ಸೈನ್ಯ ಮತ್ತು ಮಾನಸಿಂಗ್ ನೇತೃತ್ವದ ಮೊಘಲ್ ಸೈನ್ಯದ ನಡುವೆ ನಡೆದ ಹಳದಿಘಾಟಿ ಯುದ್ಧದಲ್ಲಿ ಪ್ರತಾಪ ಸೋತರೂ ಚಿತ್ತೂರ್‌ಗಢವನ್ನು ಬಿಟ್ಟುಕೊಟ್ಟಿರಲಿಲ್ಲ. ಮಹಾರಾಣಾ ಪ್ರತಾಪ ಮೊಘಲರ ವಿರುದ್ಧ ಹೋರಾಡಿದ್ದರೆ, ಛೋಟುಸಿಂಗ್ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು ಎಂದು ಹೇಳಿದರು.
ಅತಿಥಿಯಾಗಿ ಮಾತನಾಡಿದ ಸಂತೋಷಸಿAಗ್ ಹಲವಾಯಿ, ಮಹಾರಾಣಾ ಪ್ರತಾಪ ೮ ಅಡಿ ಎತ್ತರದ ನಿಲುವು ಹೊಂದಿದ್ದರು. ೮೦ ಕೆಜಿ ತೂಕದ ಖಡ್ಗವನ್ನು ಹಿಡಿದು ಕುದುರೆ ಮೇಲೆ ಯುದ್ಧ ಮಾಡುತ್ತಿದ್ದರು. ರಾಜಪೂತರೆಲ್ಲರೂ ಒಗ್ಗಟ್ಟಾಗಿದ್ದರೆ ದೇಶದ ಇತಿಹಾಸವೇ ಬೇರೆಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಮೌಂಟ್ ಅಬುವಿನ ಯೋಗಿರಾಜ ರಾಹುಲಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮವರೊಂದಿಗೆ ನಾವೇ ಇನ್ನೊಂದು ಯುದ್ಧ ಮಾಡಬೇಕಾದ ಸಂದರ್ಭ ಈಗ ಬಂದಿದೆ ಎಂದರು.
ಓಲೆಮಠದ ಆನಂದ ದೇವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ, ಸ್ವಾಭಿಮಾನಿಯಾಗಿ ಬದುಕಲು ಮಹಾರಾಣಾ ಪ್ರತಾಪಸಿಂಹ ಅವರ ಬದುಕು ನಮಗೆ ಮಾದರಿಯಾಗಬೇಕು ಎಂದು ಹೇಳಿದರು.
ಅಮೂಲ್ಯಾ ಹಜಾರೆ ಮಾತನಾಡಿದರು. ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಮೀರಾ ಸಾನ್ನಿಧ್ಯ ವಹಿಸಿದ್ದರು. ಗುರುಬಾಯಿ (ಬ್ರಿಟನ್), ಎ.ಎಂ. ಶಿವಮೂರ್ತಿ, ಶೋಭಾ ಶಿವಮೂರ್ತಿ, ಗಣಪತಿಸಿಂಗ್ ರಜಪೂತ, ರಮೇಶ ರಜಪೂತ ಹಾಗೂ ಪಾರ್ವತಿ ಗುಡಗುಂಟಿ ಉಪಸ್ಥಿತರಿದ್ದರು.
ಬಾಲಕಿ ಜಿಯಾ ರಜಪೂತ ಪ್ರಾರ್ಥನಾ ಗೀತೆ ಹಾಡಿದರು. ಸುನಂದಾ ರಜಪೂತ ಸ್ವಾಗತಿಸಿದರು. ರಜನಿ ಹಜಾರೆ ಹಾಗೂ ಲಕ್ಷ್ಮೀ ಹಜಾರೆ ಅತಿಥಿಗಳನ್ನು ಪರಿಚಯಿಸಿದರು. ಪದ್ಮಾ ಹಜಾರೆ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಅಧ್ಯಕ್ಷ ನಿಲೇಶ ಹಜಾರೆ ವಂದಿಸಿದರು.































