
ಬೆಂಗಳೂರು, ಜೂ. ೧೧-ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ರಸ್ತೆಯಲ್ಲಿರುವ ಐಶ್ವರ್ಯ ಮಾಲ್ ಕಟ್ಟಡಕ್ಕೆ ಸಂಬಂಧಿಸಿದಂತೆ ಭಾರೀ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಹಾಗೂ ಮಾಜಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ರಮೇಶ್ ಎನ್.ಆರ್., ಸಂಬಂಧಿತ ಅಧಿಕಾರಿಗಳು ಮತ್ತು ನಿರ್ಮಾಣ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆ, ಜಿಬಿಎ ಮುಖ್ಯ ಆಯುಕ್ತರು ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ, ಮಾಲ್ ನಿರ್ಮಾಣದಲ್ಲಿ ಅಕ್ರಮ, ಮಂಜೂರಾತಿ ಪಡೆದ ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ, ಆಸ್ತಿ ತೆರಿಗೆ ವಂಚನೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ರಮೇಶ್ ಎನ್.ಆರ್. ಅವರ ಪ್ರಕಾರ, ಕೆ.ಜಿ. ರಸ್ತೆಯಲ್ಲಿರುವ ಮಾಜಿ ಗುಪ್ತಾ ಮಾರ್ಕೆಟ್ ಜಾಗವು ಮೂಲತಃ ಸರ್ಕಾರದ ಸ್ವತ್ತಾಗಿದ್ದು, ೧೯೫೩-೫೪ರಲ್ಲಿ ೯೯ ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಲಾಗಿತ್ತು. ಬಳಿಕ ಈ ಸ್ವತ್ತನ್ನು ಕಾನೂನುಬಾಹಿರವಾಗಿ ಖರೀದಿಸಿ, ಐಶ್ವರ್ಯ ಹೇರಿಹೈಟ್ಸ್ ಇನ್ಪೋ ಪ್ರವೇಟ್ ಲಿಮಿಟೆಡ್ ಹೆಸರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಪ್ರಕಾರ, ೫ ತಳಮಹಡಿ, ನೆಲ ಅಂತಸ್ತು ಹಾಗೂ ೫ ಮೇಲಂತಸ್ತುಗಳೊಂದಿಗೆ ಒಟ್ಟು ೧೧ ಅಂತಸ್ತಿನ ಕಟ್ಟಡಕ್ಕೆ ಮಾತ್ರ ಅನುಮತಿ ದೊರೆತಿದ್ದರೂ, ಪ್ರಸ್ತುತ ೫ ತಳಮಹಡಿ, ನೆಲ ಅಂತಸ್ತು ಮತ್ತು ೭ ಮೇಲಂತಸ್ತುಗಳೊಂದಿಗೆ ೧೩ ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ.
ಮಂಜೂರಾತಿ ಪ್ರಕಾರ ೩.೨೮ ಲಕ್ಷ ಚದರ ಅಡಿ ನಿರ್ಮಾಣಕ್ಕೆ ಅವಕಾಶವಿದ್ದರೂ, ಸುಮಾರು ೩.೮೬ ಲಕ್ಷ ಚದರ ಅಡಿ ಕಟ್ಟಡ ನಿರ್ಮಿಸಲಾಗಿದ್ದು, ೫೭,೭೮೧ ಚದರ ಅಡಿ ಹೆಚ್ಚುವರಿ ನಿರ್ಮಾಣ ನಡೆದಿದೆ ಎಂದು ಅವರು ಹೇಳಿದ್ದಾರೆ.
ಬಿದರಹಳ್ಳಿ, ರಾಂಪುರ ಹಾಗೂ ಬಿ.ಕೆ.ಹಳ್ಳಿ ಪ್ರದೇಶಗಳಿಂದ ಪಡೆದ ಆಖಅ ಗಳನ್ನು ಮೆಜೆಸ್ಟಿಕ್‌ನ `A’ ವಲಯದಲ್ಲಿ ಬಳಸಲಾಗಿದೆ. ‘C’ ವಲಯದ DRCಗಳನ್ನು ‘A’ ವಲಯದಲ್ಲಿ ಬಳಸುವಾಗ ಶೇ.೩೦ ರಷ್ಟು ಕಡಿತ ಅನ್ವಯಿಸಬೇಕಾಗಿದ್ದರೂ, ಅದನ್ನು ಪಾಲಿಸದೆ ಸುಮಾರು ೩೫೨.೭೨ ಶೇಕಡಾ ವ್ಯತಿರಿಕ್ತ ನಿರ್ಮಾಣ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸ್ವಾಧೀನ ಪತ್ರ ನೀಡದಂತೆ ಮನವಿ
ಈ ಕುರಿತು ೨೦೧೮ರಿಂದಲೇ ಹಲವು ಬಾರಿ ದೂರುಗಳನ್ನು ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿರುವ ರಮೇಶ್ ಎನ್.ಆರ್., ಕಟ್ಟಡಕ್ಕೆ ಯಾವುದೇ ಕಾರಣಕ್ಕೂ ಸ್ವಾಧೀನ ಪತ್ರ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಆದರೆ, ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಜಂಟಿ ಆಯುಕ್ತರು ೨೦೨೬ರ ಮಾರ್ಚ್ ೭ರಂದು ಸುಮಾರು ೨೭.೯೧ ಕೋಟಿ ಮೊತ್ತದ ಡಿಮ್ಯಾಂಡ್ ನೋಟಿಸ್ ನೀಡಿ, ಹಣ ಪಾವತಿಸಿ ಔಅ ಪಡೆಯುವಂತೆ ಸೂಚಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ದೂರಿದ್ದಾರೆ.
ಆಸ್ತಿ ತೆರಿಗೆ ವಂಚನೆ ಆರೋಪ
ಸುಮಾರು ೩.೮೬ ಲಕ್ಷ ಚದರ ಅಡಿ ನಿರ್ಮಾಣವಾಗಿದ್ದರೂ, ಕೇವಲ ೬,೫೦೦ ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಮಾತ್ರ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ದಾಖಲಿಸಿ ತೆರಿಗೆ ಪಾವತಿಸಲಾಗಿದೆ. ಇದರಿಂದ ಪಾಲಿಕೆಗೆ ಭಾರೀ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ED, ಲೋಕಾಯುಕ್ತ ಮತ್ತು ಹೈಕೋರ್ಟ್ ಮೆಟ್ಟಿಲು
ನಗರ ಯೋಜನೆ ಹಾಗೂ ಕಂದಾಯ ವಿಭಾಗದ ಕೆಲ ಹಿರಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸುವಂತೆ ED ಮತ್ತು ಲೋಕಾಯುಕ್ತಕ್ಕೆ ದಾಖಲೆಗಳೊಂದಿಗೆ ದೂರು ಸಲ್ಲಿಸಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.
ಅಲ್ಲದೆ, ಕಟ್ಟಡಕ್ಕೆ OC ನೀಡಲು ಮುಂದಾಗಿರುವ ಅಧಿಕಾರಿಗಳ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.


























