
ಬೆಂಗಳೂರು,ಜೂ.೧೧- ಆರೋಪಗಳು ಎಷ್ಟೇ ಗಂಭೀರವಾಗಿದ್ದರೂ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕ ಮಾಹಿತಿಯಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಒಬ್ಬ ವ್ಯಕ್ತಿಯು ಸರ್ಕಾರಿ ಅಧಿಕಾರಿಯಾಗಿದ್ದ ಮಾತ್ರಕ್ಕೆ ಆತನ ವೈಯಕ್ತಿಕ ಆಸ್ತಿ ಮತ್ತು ಜವಾಬ್ದಾರಿಗಳ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ)ಯಡಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.
ಅಲ್ಲದೆ, ಸಾರ್ವಜನಿಕ ಹಿತಾಸಕ್ತಿ ಇಲ್ಲದ ವೈಯಕ್ತಿಕ ಮಾಹಿತಿಗಳನ್ನು ಆರ್ಟಿಐ ಕಾಯ್ದೆಯ ಸೆಕ್ಷನ್ ೮(೧)(ಜೆ) ಅಡಿಯಲ್ಲಿ ವಿನಾಯಿತಿ ನೀಡಲಾಗಿದ್ದು, ಇಂತಹ ಮಾಹಿತಿಗಳನ್ನು ಒದಗಿಸುವಂತೆ ಒತ್ತಾಯಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಸರ್ಕಾರಿ ನೌಕರನ ಖಾಸಗಿ ಮಾಹಿತಿ ಒದಗಿಸಲು ನಿರಾಕರಿಸಿದ್ದ ಮಾಹಿತಿ ಆಯೋಗದ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿಯಾಗಿರುವ ಎಸ್ ಸಾವಿತ್ರಮ್ಮ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ಪೀಠ, ಈ ಆದೇಶ ನೀಡಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಒಬ್ಬ ವ್ಯಕ್ತಿ ಸರ್ಕಾರಿ ನೌಕರನಾದ ತಕ್ಷಣ ಆತನ ಪ್ರತಿಯೊಂದು ವೈಯಕ್ತಿಕ ಮಾಹಿತಿಯೂ ಸಾರ್ವಜನಿಕ ಆಸ್ತಿಯಾಗುವುದಿಲ್ಲ. ಅವರ ಉದ್ಯೋಗದ ಕಾರಣಕ್ಕೆ ಸಂಸತ್ತು ನೀಡಿದ ಗೌಪ್ಯತೆಯ ಹಕ್ಕಿನ ರಕ್ಷಣೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಅರ್ಜಿದಾರರು ಮತ್ತು ಸದರಿ ಅಧಿಕಾರಿಯ ನಡುವೆ ಇರುವುದು ಖಾಸಗಿ ಜಮೀನು ವಿವಾದ. ಅರ್ಜಿದಾರರ ವೈಯಕ್ತಿಕ ಕಾನೂನು ಹೋರಾಟಕ್ಕೆ ಪೂರಕವಾಗುವ ಉದ್ದೇಶ ’ಬೃಹತ್ ಸಾರ್ವಜನಿಕ ಹಿತಾಸಕ್ತಿ’ ವ್ಯಾಪ್ತಿಗೆ ಬರುವುದಿಲ್ಲ. ಕೇವಲ ಒಬ್ಬ ವ್ಯಕ್ತಿಯ ಮೇಲೆ ಗಂಭೀರ ಆರೋಪಗಳನ್ನು ಮಾಡಿದ ತಕ್ಷಣ ಅವರ ವೈಯಕ್ತಿಕ ದಾಖಲೆಗಳನ್ನು ಆರ್ಟಿಐ ಮೂಲಕ ಪಡೆಯಲು ಅವಕಾಶ ನೀಡಿದರೆ, ಕಾಯ್ದೆಯ ಮೂಲ ಉದ್ದೇಶವೇ ಬುಡಮೇಲಾಗಲಿದೆ ಎಂದು ಎಚ್ಚರಿಸಿದೆ. ಅಲ್ಲದೆ, ಈ ರೀತಿಯ ಮಾಹಿತಿಯನ್ನು ಬಿಡುಗಡೆ ಮಾಡಲು ಭ್ರಷ್ಟಾಚಾರ ಬಯಲಿಗೆಳೆಯುವ ಅಥವಾ ಸಾರ್ವಜನಿಕ ಹಣದ ದುರುಪಯೋಗ ಸಾಬೀತುಪಡಿಸುವ ಬಲವಾದ ಸಾಕ್ಷ್ಯಗಳು ಇರಬೇಕು. ಈ ಪ್ರಕರಣದಲ್ಲಿ ಅಂತಹ ಸಂದರ್ಭಗಳಿಲ್ಲ. ಆದ್ದರಿಂದ ಅರ್ಜಿದಾರರು, ಸಿವಿಲ್ ಇಲ್ಲವೇ ಕ್ರಿಮಿನಲ್ ಪ್ರಕ್ರಿಯೆ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
ಅರ್ಜಿದಾರರು ಕೋರಿರುವ ಆಸ್ತಿ ವಿವರಗಳು ಸಂಪೂರ್ಣವಾಗಿ ವೈಯಕ್ತಿಕ ಮಾಹಿತಿಯಾಗಿದ್ದು, ಆರ್?ಟಿಐ ಕಾಯ್ದೆಯ ಸೆಕ್ಷನ್ ೮(೧)(ಜಿ) ಅಡಿಯಲ್ಲಿ ರಕ್ಷಣೆ ಪಡೆದಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕರ್ನಾಟಕ ಮಾಹಿತಿ ಆಯೋಗ ಮತ್ತು ಕೆಎಸ್ಆರ್ಟಿಸಿ ಅಧಿಕಾರಿಗಳು ಮಾಹಿತಿ ನಿರಾಕರಿಸಿ ಹೊರಡಿಸಿದ ಆದೇಶದಲ್ಲಿ ಯಾವುದೇ ಕಾನೂನು ಲೋಪವಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ದಲ್ಲಿ ೧೯೯೦ ರಿಂದ ೨೦೦೨ರ ಅವಧಿಯಲ್ಲಿ ಕೇಂದ್ರ ಕಚೇರಿಯ ಡೆಪ್ಯುಟಿ ಕಂಟ್ರೋಲರ್ ಆಗಿ ಸೇವೆ ಸಲ್ಲಿಸುತ್ತಿದ್ದ ಎಸ್.ಪಿ. ಜಯಪಾಲ್ ಅವರು ಅರ್ಜಿದಾರರಾದ ಸಾವಿತ್ರಮ್ಮ ಅವರ ಆಸ್ತಿಗೆ ಸಂಬಂಧಿಸಿದಂತೆ ವಂಚನೆ ಮಾಡುವ ಮೂಲಕ ಮಾರಾಟ ಮಾಡಿದ್ದಾರೆ ಎಂದು ಆರೋಪವಿದೆ.
ಈ ಬಗ್ಗೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಬಾಕಿ ಇದೆ, ಈ ಹಿನ್ನೆಲೆಯಲ್ಲಿ ಜಯಪಾಲ್ ಅವರ ಆಸ್ತಿಯ ವಿವರಗಳನ್ನು ನೀಡಬೇಕು ಎಂದು ಕೋರಿ ಅರ್ಜಿದಾರರಾದ ಸಾವಿತ್ರಮ್ಮ ಅವರು, ಜಯಪಾಲ್ ಅವರಿಗೆ ಸಂಬಂಧಿಸಿದಂತೆ ೧೯೯೭ ರಿಂದ ೨೦೦೫ರವರೆಗಿನ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಗಳನ್ನು ನೀಡುವಂತೆ ಕೆಎಸ್ಆರ್?ಟಿಸಿ ಮಾಹಿತಿ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.
ಆಸ್ತಿ ವಿವರ ವಯಕ್ತಿಕ:
ಅರ್ಜಿಗೆ ಉತ್ತರಿಸಿದ್ದ ಕೆಎಸ್ಆರ್ಟಿಸಿ ಮಾಹಿತಿ ಅಧಿಕಾರಿ, ಜಯಪಾಲರ ಆಸ್ತಿಯ ವಿವರ ವೈಯಕ್ತಿಕವಾಗಿದೆ. ಅಲ್ಲದೆ, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿಲ್ಲ. ಆದ ಕಾರಣ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಈ ಕ್ರಮವನ್ನು ಕರ್ನಾಟಕ ಮಾಹಿತಿ ಆಯೋಗ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಸಾವಿತ್ರಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದರರು ಕೋರಿರುವ ಈ ಮಾಹಿತಿಯನ್ನು ಜಯಪಾಲ್ ಅವರು ಸಲ್ಲಿಸಿರುವ ಆದಾಯ ತೆರಿಗೆಯಲ್ಲಿ ಬಹಿಂಗ ಪಡಿಸಿರಲಿಲ್ಲ. ಆದ್ದರಿಂದ ಅವರ ಆಸ್ತಿಯ ವಿವರವನ್ನು ವೈಯಕ್ತಿಕ ಎಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಮಾಹಿತಿ ಒದಗಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದರು.


























