Home ಜಿಲ್ಲೆ ಬೆಂಗಳೂರು ಅಂಗನವಾಡಿ ಕೇಂದ್ರಕ್ಕೆ ಮಳೆ ನೀರು ನುಗ್ಗಿ ಅವ್ಯವಸ್ಥೆ

ಅಂಗನವಾಡಿ ಕೇಂದ್ರಕ್ಕೆ ಮಳೆ ನೀರು ನುಗ್ಗಿ ಅವ್ಯವಸ್ಥೆ

ಕೋಲಾರ, ಅ. ೧೭: ತಾಲೂಕಿನಾದ್ಯಂತ ಜೋರು ಮಳೆಯಿಂದಾಗಿ ನದಂಬಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿ ತೀವ್ರವಾದ ಅಸ್ಥವ್ಯಸ್ತಗೊಂಡ ಘಟನೆ ಸಂಭವಿಸಿದೆ.


ಅಂಗನವಾಡಿ ಕೇಂದ್ರದಲ್ಲಿ ಊಟ ಮಾಡಬೇಕಾದ ಮಕ್ಕಳು ನಿಂತುಕೊಂಡು ಊಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ತಗ್ಗು ಪ್ರದೇಶದಲ್ಲಿ ಅಂಗನವಾಡಿ ಕೇಂದ್ರ ಇರುವುದೇ ಕಾರಣವಾಗಿದೆ.


ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಮಳೆ ನೀರನ್ನು ಅಂಗನವಾಡಿ ಸಹಾಯಕರು ಅಡುಗೆಗೆ ಬಳಿಸುವ ಪಾತ್ರೆಗಳಿಂದ ಹೊರ ಹಾಕಿದ್ದರೂ ಸಹ ಪ್ರಯೋಜನವಾಗಲಿಲ್ಲ.

ಸಂಬಂಧಿಸಿದ ಗ್ರಾಮದಲ್ಲಿ ರಸ್ತೆ ಬದಿಗಳಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ರಸ್ತೆಯ ಮೇಲೆ ಬಿದ್ದ ನೀರು ತಗ್ಗು ಪ್ರದೇಶಗಳಿಗೆ ಹರಿಯತೊಡಗಿದೆ.


ತಗ್ಗು ಪ್ರದೇಶದಲ್ಲಿದ್ದ ಅಂಗನವಾಡಿ ಕೇಂದ್ರದ ಕಟ್ಟಡದೊಳಗೆ ನೀರು ನುಗ್ಗಿದ್ದ ಪರಿಣಾಮ, ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಪಂಚಾಯಿತಿಯವರಿಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.