Home ಜಿಲ್ಲೆ ಬೆಂಗಳೂರು ಹೆಚ್‌ಡಿಕೆ ಪದ ಬಳಕೆ ಘನತೆಯಲ್ಲ

ಹೆಚ್‌ಡಿಕೆ ಪದ ಬಳಕೆ ಘನತೆಯಲ್ಲ

ಬೆಂಗಳೂರು, ಅ. ೧೯– ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿಯವರು ಇತ್ತೀಚಿನ ದಿನಗಳಲ್ಲಿ ಬಳಸುತ್ತಿರುವ ಅಸಂಬದ್ಧ ಹಾಗೂ ಅಸಂಸದೀಯ ಪದಪ್ರಯೋಗಗಳು ಅವರ ವ್ಯಕ್ತಿತ್ವಕ್ಕೆ ಮತ್ತು ಅವರು ಹೊಂದಿರುವ ಸಾಂವಿಧಾನಿಕ ಹುದ್ದೆಯ ಘನತೆಗೆ ಶೋಭೆ ತರುವುದಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ತಿಳಿಸಿದ್ದಾರೆ.

ಭ್ರಷ್ಟಾಚಾರ ಮತ್ತು ಸ್ಟಿಂಗ್ ಆಪರೇಷನ್ ಕುರಿತು ನಿರಂತರವಾಗಿ ಆರೋಪಗಳನ್ನು ಮಾಡುತ್ತಿರುವ ಕುಮಾರಸ್ವಾಮಿಯವರು, ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ನಿಖರವಾದ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹೋರಾಟ ನಡೆಸಲಿ. ಅದನ್ನು ಬಿಟ್ಟು, ರಾಜಕೀಯ ಲಾಭಕ್ಕಾಗಿ ಆರೋಪಗಳನ್ನು ಮಾಡುತ್ತಾ, ಬಿಜೆಪಿ ಜೊತೆ ಕೈಜೋಡಿಸಿರುವುದು ಮತ್ತು ತಮ್ಮ ರಾಜಕೀಯ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಕೆಳಮಟ್ಟದ ರಾಜಕಾರಣ ನಡೆಸುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡದ ಅವರು, ಸ್ಟಿಂಗ್ ಆಪರೇಷನ್ ಬಗ್ಗೆ ಪ್ರಶ್ನಿಸುವ ಕುಮಾರಸ್ವಾಮಿಯವರು ಮೊದಲು ತಮ್ಮ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಲಿ. ಆರೋಪ ಮಾಡುವುದು ಸುಲಭ; ಆದರೆ ಆರೋಪಗಳಿಗೆ ಸಾಕ್ಷ್ಯ ಒದಗಿಸಿ, ಸತ್ಯಾಂಶವನ್ನು ಜನತೆಯ ಮುಂದೆ ಇಡುವುದು ಜವಾಬ್ದಾರಿಯುತ ರಾಜಕಾರಣಿಯ ಕರ್ತವ್ಯವಾಗಿದೆ.

ಕುಮಾರಸ್ವಾಮಿಯವರ ರಾಜಕೀಯ ಇತಿಹಾಸ, ಬಿಜೆಪಿ ನಾಯಕರೊಂದಿಗಿನ ಹಿಂದಿನ ಸಂಘರ್ಷಗಳು, ಸಿಡಿ ಮತ್ತು ಪೆನ್‌ಡ್ರೈವ್‌ಗಳ ಕುರಿತಾದ ಆರೋಪಗಳು ಹಾಗೂ ಭ್ರಷ್ಟಾಚಾರದ ವಿಚಾರಗಳಲ್ಲಿ ಅವರ ನಿಲುವುಗಳ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೆಳಗಿನ ಹತ್ತು ಪ್ರಶ್ನೆಗಳಿಗೆ ಕುಮಾರಸ್ವಾಮಿಯವರು ನೇರ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಬೆಂಗಳೂರು ಕೇಂದ್ರ ಪ್ರಚಾರ ಸಮಿತಿ ಅಧ್ಯಕ್ಷರಾದ ಎಸ್. ಪ್ರಕಾಶ್, ಬೆಂಗಳೂರು ಉತ್ತರ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಕುಶಾಲ್ ಹರುವೇಗೌಡ, ಕೆಪಿಸಿಸಿ ಮಾಧ್ಯಮ ವಕ್ತಾರರಾದ ಆನಂದ್ ಕುಮಾರ್ ಎಂ.ಎಸ್. ಉಮೇಶ್,ಲಕ್ಷ್ಮೀನಾರಾಯಣ್, ಪುಟ್ಟರಾಜು,ರಂಜಿತ್,ಓಬಳೇಶ್ ಮಾರನ್,ಕಿಶೋರ್,ಪವನ್,ಅಭಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.