Home ಜಿಲ್ಲೆ ಬೆಂಗಳೂರು ಕರಾವಳಿಯಲ್ಲಿ ಮಳೆ ಚುರುಕು; ಗೋಕರ್ಣದಲ್ಲಿ ಗುಡ್ಡ ಕುಸಿತ

ಕರಾವಳಿಯಲ್ಲಿ ಮಳೆ ಚುರುಕು; ಗೋಕರ್ಣದಲ್ಲಿ ಗುಡ್ಡ ಕುಸಿತ

ಬೆಂಗಳೂರು,ಜು.೧೭ : ರಾಜ್ಯದ ಕರಾವಳಿ ಪ್ರದೇಶದಲ್ಲಿ ವಾರದ ಮಳೆಯ ನಂತರ ಇದೀಗ ಮಳೆ ಕೊಂಚ ಚುರುಕಾಗಿದೆ.


ಸದ್ಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಕಡೆ ಮಳೆಯಾಗುತ್ತಿದ್ದು,ಉತ್ತರ ಕನ್ನಡದ ಅಂಕೋಲಾದಲ್ಲಿ ಅತ್ಯಧಿಕ ೨೭೫ ಮಿ.ಮೀ ವರೆಗೆ ಮಳೆ ದಾಖಲಾಗಿದೆ. ಕೆಲವು ಭಾಗಗಳಲ್ಲಿ ಬಿಸಿಲಿನ ವಾತಾವರಣದ ನಡುವೆಯೂ ತಂಪಾದ ಗಾಳಿ ಬೀಸುತ್ತಿದೆ.


ಇನ್ನು ಕೆಲ ದಿನಗಳಿಂದ ಬಿಸಿಲು ಆವರಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಇಂದು ಬೆಳಗ್ಗೆ ಅಲ್ಲಲ್ಲಿ ಮಳೆ ಸುರಿದಿದೆ.ಅದರಲ್ಲೂ ಅಂಕೋಲಾ, ಭಟ್ಕಳ, ಕಾರವಾರ, ಕುಮುಟಾಗಳಲ್ಲಿ ಭಾರೀ ಮಳೆಯಾಗಿದೆ. ಉಳಿದಂತೆ ಉಡುಪಿಯ ಕಾಪು, ಕುಂದಾಪುರ, ದಕ್ಷಿಣ ಕನ್ನಡದ ನೀರಮಾರ್ಗ, ಮುಲ್ಕಿಗಳಲ್ಲಿ ವರ್ಷಧಾರೆಯಾಗಿದೆ.ಅಲ್ಲದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲೂ ಕೂಡ ಭಾರೀ ಮಳೆ ಸುರಿದಿದೆ.
ಈ ನಡುವೆ ಮಳೆ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಗುಡ್ಡ ಕುಸಿತವಾಗಿ ರಸ್ತೆ ಸಂಚಾರ ಬಂದ್ ಆಗಿದೆ.


ಸಾಣೆಕಟ್ಟ ತದಡಿ ಸಾಗುವ ಮಾರ್ಗದಲ್ಲಿ ರಸ್ತೆ ಮೇಲೆ ಗುಡ್ಡ ಕುಸಿತವಾಗಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಗಳಾಗಿಲ್ಲ. ದೊಡ್ಡ ಪ್ರಮಾಣದಲ್ಲಿ ಮಣ್ಣು ರಸ್ತೆ ಮೇಲೆ ಬಿದ್ದ ಪರಿಣಾಮ ಈ ಭಾಗದ ಸಂಚಾರವೇ ಸಂಪೂರ್ಣ ಬಂದ್ ಆಗಿದೆ.


ಸ್ಥಳಕ್ಕೆ ಗೋಕರ್ಣ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸದ್ಯ ರಸ್ತೆಯಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.


ಇದಲ್ಲದೆ, ಅಂಕೋಲಾ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ.