
ಕೆಜಿಎಫ್,ಸೆ.೧೫ –ತಾಲ್ಲೂಕಿನಲ್ಲಿ ವಾಡಿಕೆ ಮಳೆಯ ಕೊರತೆಯಿಂದಾಗಿ ರೈತರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ, ಗಣೇಶ ಗೌರಿ ಹಬ್ಬದ ದಿನವೇ ಉತ್ತಮ ಮಳೆಯಾಗಿರುವುದು ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುವ ಶುಭ ಸೂಚನೆಯಾಗಿದೆ ಎಂದು ಆರ್.ಕೆ. ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜಸೇವಕ ಮೋಹನ್ ಕೃಷ್ಣ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಈ ವರ್ಷ ತಾಲ್ಲೂಕಿನಲ್ಲಿ ವಾಡಿಕೆ ಮಳೆಯಾಗದ ಹಿನ್ನೆಲೆಯಲ್ಲಿ ಕೆರೆ-ಕುಂಟೆಗಳು ಬರಿದಾಗಿವೆ.ಕುಡಿಯುವ ನೀರಿನ ಕೊರತೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಜಾನುವಾರುಗಳಿಗೂ ನೀರು ಹಾಗೂ ಮೇವಿನ ಸಮಸ್ಯೆ ಎದುರಾಗಿದ್ದು, ಕೃಷಿ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಇದರಿಂದ ರೈತರು ಜೀವನ ನಡೆಸಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕೆಜಿಎಫ್ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದರೂ,ಇದುವರೆಗೆ ರೈತರಿಗೆ ಅಗತ್ಯ ಪರಿಹಾರ ಒದಗಿಸುವ ಯೋಜನೆಗಳು ಹಾಗೂ ಬರ ನಿರ್ವಹಣೆಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ಆರಂಭವಾಗಿಲ್ಲ ಎಂದು ಆರೋಪಿಸಿದರು.
ತಾಲ್ಲೂಕಿನ ರೈತರ ಸಂಕಷ್ಟದ ಬಗ್ಗೆ ಸ್ಥಳೀಯ ಶಾಸಕಿ ರೂಪಾ ಶಶಿಧರ್ ಅವರು ಹೆಚ್ಚಿನ ಕಾಳಜಿ ವಹಿಸಿ, ಸರ್ಕಾರದಿಂದ ಅಗತ್ಯ ಪರಿಹಾರ ಹಾಗೂ ಬರ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು.
ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಬೇಕು.ಜಾನುವಾರುಗಳು ಮತ್ತು ಸಾರ್ವಜನಿಕರಿಗೆ ನೀರಿನ ಸಮಸ್ಯೆ ದೂರವಾಗಬೇಕು ಎಂಬ ಆಶಯದಿಂದ ಆರ್.ಕೆ. ಫೌಂಡೇಷನ್ ವತಿಯಿಂದ ಬೇತಮಂಗಲ ಸಮೀಪದ ತಾತೇನಹಳ್ಳಿ ಗ್ರಾಮದ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಅರ್ಚಕರ ಮೂಲಕ ವಿಶೇಷ ಹೋಮ, ಹವನ ಹಾಗೂ ಪ್ರಾರ್ಥನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ತಿಳಿಸಿದರು.
































