
ಬೆಂಗಳೂರು: ದಸರಾ ಹಬ್ಬದ ಮುನ್ನಾದಿನ ಪುಲಕೇಶಿನಗರದ ಬಳಿಯ ನಿರ್ಮಾಣ ಹಂತದ ಐದಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣವನ್ನು ಭೇದಿಸಿರುವ ಪೂರ್ವ ವಿಭಾಗದ ಪೊಲೀಸರುಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಸ್ಸೋಂನ ದೀನಾನಾಥಪುರ ಮೂಲದ ಜಾಹಿದ್ ಉಲ್ ಹುಸೇನ್ ಬರ್ಭುಯ್ಯ (27), ಸಾಜಿದ್ ಉಲ್ ಲಷ್ಕರ್ (22) ಹಾಗೂ ಬುರ್ಹಾನ್ ಅಹಮದ್ ಬರ್ಭುಯ್ಯ (20) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಭಾನುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೈಯಕ್ತಿಕ ದ್ವೇಷ ಕೌಟುಂಬಿಕ ಕಲಹ
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವೈಷಮ್ಯವೇ ಸ್ಫೋಟಕ್ಕೆ ಕಾರಣವಾಗಿದ್ದು, ಕಟ್ಟಡದ ಸೆಕ್ಯೂರಿಟಿ ಗಾರ್ಡ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದರು.
ಸ್ಫೋಟದ ಹಿಂದೆ ಯಾವುದೇ ಉಗ್ರಗಾಮಿ ಕೃತ್ಯದ ಉದ್ದೇಶವಿದೆಯೇ ಎಂಬ ಅನುಮಾನಗಳ ನಡುವೆ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಪ್ರಕರಣದ ಪ್ರಮುಖ ಆರೋಪಿ ಜಾಹಿದ್ ಉಲ್ ಹುಸೇನ್ ಹಾಗೂ ಸ್ಫೋಟ ಸಂಭವಿಸಿದ ಕಟ್ಟಡದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅಲ್ಲಾವುದ್ದೀನ್ ಸಂಬಂಧಿಕರಾಗಿದ್ದಾರೆ. ಜಮೀನು ಮತ್ತು ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ವೈಷಮ್ಯವಿತ್ತು ಎನ್ನಲಾಗಿದೆ. ಅಲ್ಲದೆ, ಜಾಹಿದ್ ಉಲ್ ಹುಸೇನ್‌ನ ಸಹೋದರಿಯ ಮದುವೆ ಮುರಿದು ಬೀಳಲು ಅಲ್ಲಾವುದ್ದೀನ್ ಕಾರಣ ಎಂಬ ಆರೋಪವೂ ಇತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಹತ್ಯೆ ಮಾಡಲು ಜಾಹಿದ್ ಸಂಚು ರೂಪಿಸಿದ್ದ ಎಂದು ತಿಳಿಸಿದರು.
ಪ್ರತೀಕಾರ ತೀರಿಸಿಕೊಳ್ಳಲು ಜಾಹಿದ್ ತನ್ನ ಸ್ನೇಹಿತರಾದ ಸಾಜಿದ್ ಹಾಗೂ ಬುರ್ಹಾನ್ ಜೊತೆ ಸೇರಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡಿದ್ದು ಎಂಟನೇ ತರಗತಿವರೆಗೆ ಓದಿದ್ದ ಬುರ್ಹಾನ್, ರಾಯಚೂರಿನ ಮಸ್ಕಿಯಲ್ಲಿ ವೆಲ್ಡಿಂಗ್ ಮತ್ತು ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದನು.
ಈತ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್‌ಗಳ ಮೂಲಕ ಬಾಂಬ್ ತಯಾರಿಸುವ ತಂತ್ರಗಾರಿಕೆ ಕಲಿತು, ಜಾಹಿದ್ ಸೂಚನೆಯಂತೆ ಐಇಡಿ ಸ್ಫೋಟಕವಿದ್ದ ಪಾರ್ಸೆಲ್ ಸಿದ್ಧಪಡಿಸಿದ್ದ ಎಂದು ವಿವರಿಸಿದರು.
ಬಳಿಕ ರಾಯಚೂರಿನಿಂದ ಬಸ್ ಮೂಲಕ ಬೆಂಗಳೂರಿಗೆ ಬಂದಿದ್ದ ಬುರ್ಹಾನ್, ಸಾಜಿದ್ ಒದಗಿಸಿದ್ದ ಆಶ್ರಯದಲ್ಲಿ ಉಳಿದುಕೊಂಡಿದ್ದ. ನಂತರ ನಿರ್ಮಾಣ ಹಂತದ ಕಟ್ಟಡಕ್ಕೆ ತೆರಳಿ ಪಾರ್ಸೆಲ್ ಇಟ್ಟು, ಬೇರೆ ಫೋನ್ ಬಳಸಿ ಅಲ್ಲಾವುದ್ದೀನ್‌ಗೆ ಕರೆ ಮಾಡಿ ಅದನ್ನು ಸ್ವೀಕರಿಸುವಂತೆ ತಿಳಿಸಿದ್ದನು.
ಅಲ್ಲಾವುದ್ದೀನ್ ಪಾರ್ಸೆಲ್ ಸ್ವೀಕರಿಸಿ, ಕಟ್ಟಡದಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಸೂರಜ್ ಕುಮಾರ್‌ಗೆ ನೀಡಿದ್ದ. ಮರುದಿನ ಪಾರ್ಸೆಲ್ ತೆರೆಯಲು ಯತ್ನಿಸಿದಾಗ ಸ್ಫೋಟ ಸಂಭವಿಸಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
1,500 ಸಿಸಿಟಿವಿ ಕ್ಯಾಮೆರಾ:
ದಸರಾ ಹಬ್ಬದ ಹಿಂದಿನ ದಿನ ರಾತ್ರಿ ಸ್ಫೋಟ ಸಂಭವಿಸಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗಿದೆ. ಇದಕ್ಕಾಗಿ 10ಕ್ಕೂ ಹೆಚ್ಚು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ರಾಯಚೂರು ಹಾಗೂ ಅಸ್ಸಾಂ ಪೊಲೀಸರೂ ತನಿಖೆಗೆ ಸಹಕರಿಸಿದ್ದಾರೆ ಎಂದು ಕಮೀಷನರ್ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 1,500 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ನೂರಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಅಂತಿಮವಾಗಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸ್ಫೋಟ ನಡೆಸಿರುವುದು ಪತ್ತೆಯಾಗಿದೆ ಎಂದು ಅವರು ಹೇಳಿದರು.
ಸೆಕ್ಯೂರಿಟಿ ಗಾರ್ಡ್ ಸ್ಫೋಟಕ್ಕೆ ಸಂಚು:
ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್‌ನನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲು ಆರೋಪಿಗಳು ಯೋಜಿಸಿದ್ದರು ಎನ್ನಲಾಗಿದೆ. ಆದರೆ, ಅಲ್ಲಾವುದ್ದೀನ್‌ಗೆ ನೀಡಲು ತಂದಿದ್ದ ಬಾಕ್ಸ್ ಅನ್ನು ಆತನೊಂದಿಗೆ ಇದ್ದ ಸೂರಜ್ ಎಂಬಾತ ತೆರೆದಿದ್ದರಿಂದ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಸೂರಜ್ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳು ಹಾಳಾಗಿವೆ ಎಂದು ಹೇಳಿ ಸಾರ್ವಜನಿಕರಿಂದ ಮೊಬೈಲ್ ಪಡೆದು ಬಳಸಿದ್ದರೆಂಬ ಮಾಹಿತಿಯೂ ತನಿಖೆಯಲ್ಲಿ ಲಭ್ಯವಾಗಿದೆ. ಅಪರಿಚಿತರಿಗೆ ಮೊಬೈಲ್ ನೀಡುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಆಯುಕ್ತರು ಸಲಹೆ ನೀಡಿದ್ದಾರೆ.
ಬಸ್‌ನಲ್ಲಿ ಬಾಂಬ್ ಸಾಗಣೆ:
ತನಿಖೆಯ ಪ್ರಕಾರ, ಬುರ್ಹಾನ್ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಬಾಂಬ್ ತಯಾರಿಸಿದ್ದ ಎನ್ನಲಾಗಿದೆ. ಬಳಿಕ ಸೈದುಲಾ ಇಸ್ಲಾಂ ಹಾಗೂ ಜಲಾಲುದ್ದೀನ್ ಮೂಲಕ ಅದನ್ನು ಬೆಂಗಳೂರಿಗೆ ತರಿಸಲಾಗಿತ್ತು. ಫ್ಯೂಸ್ ಅಳವಡಿಸದ ಸ್ಥಿತಿಯಲ್ಲಿ ಬಾಂಬ್ ಅನ್ನು ಬಸ್‌ನಲ್ಲಿ ಬೆಂಗಳೂರಿಗೆ ಸಾಗಿಸಿ, ನಂತರ ಫ್ಯೂಸ್ ಅಳವಡಿಸಿ ಅಲ್ಲಾವುದ್ದೀನ್‌ಗೆ ನೀಡಲು ವ್ಯವಸ್ಥೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಬಾಕ್ಸ್ ಅನ್ನು ಸೂರಜ್ ತೆರೆದು ಸ್ವಿಚ್ ಆನ್ ಮಾಡಿದಾಗ ಸ್ಫೋಟ ಸಂಭವಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಎಐ ಬಳಸಿ ಬಾಂಬ್ ತಯಾರಿಕೆ:
ಪ್ರಕರಣದ ಪ್ರಮುಖ ಆರೋಪಿ ಜಲಾಲುದ್ದೀನ್ ಎಲೆಕ್ಟ್ರಿಕಲ್ ಹಾಗೂ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಎಂಟನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದರೂ, ಇಂಟರ್‌ನೆಟ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಬಾಂಬ್ ತಯಾರಿಸುವ ವಿಧಾನವನ್ನು ಕಲಿತಿದ್ದ ಎನ್ನಲಾಗಿದೆ.
ಬಾಂಬ್ ತಯಾರಿಕೆಗೆ ಬಳಸಿದ ವಸ್ತುಗಳು, ಸರ್ಕ್ಯೂಟ್ ಹಾಗೂ ಇತರ ಉಪಕರಣಗಳ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಬಾಂಬ್ ತಯಾರಿಸಿದ ಸ್ಥಳ ಮತ್ತು ಅದಕ್ಕೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸಿದ ಸ್ಥಳಗಳಿಗೂ ತೆರಳಿ ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.ಪ್ರಕರಣವನ್ನು ಭೇದಿಸಲು ಶ್ರಮಿಸಿದ ತನಿಖಾ ತಂಡಕ್ಕೆ ₹3 ಲಕ್ಷ ಬಹುಮಾನ ಘೋಷಿಸಲಾಗಿದೆ ಎಂದು ಹೇಳಿದರು. ಪೂರ್ವ ವಿಭಾಗದ ಡಿಸಿಪಿ ಡಾ.ವಿಕ್ರಂ ಅಮಟೆ ಅವರಿದ್ದರು.


























