Home ಜಿಲ್ಲೆ ಪಿಯುಸಿ ಪರೀಕ್ಷಾ ಶುಲ್ಕ ಶೇ. 50ರಷ್ಟು ಹೆಚ್ಚಳ: ಎಐಡಿಎಸ್‍ಒ ತೀವ್ರ ಖಂಡನೆ

ಪಿಯುಸಿ ಪರೀಕ್ಷಾ ಶುಲ್ಕ ಶೇ. 50ರಷ್ಟು ಹೆಚ್ಚಳ: ಎಐಡಿಎಸ್‍ಒ ತೀವ್ರ ಖಂಡನೆ

ವಿಜಯಪುರ, ಸೆ. 21: ಪದವಿ ಪೂರ್ವ (ಪಿಯುಸಿ) ಪರೀಕ್ಷಾ ಶುಲ್ಕವನ್ನು ಶೇ. 50ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎಐಡಿಎಸ್‍ಒ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದ್ದು, ಕೂಡಲೇ ಶುಲ್ಕ ಹೆಚ್ಚಳದ ಆದೇಶವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಎಐಡಿಎಸ್‍ಒ ವಿಜಯಪುರ ಜಿಲ್ಲಾ ಸಂಚಾಲಕ ಗೋವಿಂದ ಯಳವಾರ, ಈಗಾಗಲೇ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರು, ಕೃಷಿ ಕೂಲಿಕಾರರು ಹಾಗೂ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಸರ್ಕಾರದ ಶುಲ್ಕ ಹೆಚ್ಚಳ ಮತ್ತೊಂದು ಆರ್ಥಿಕ ಹೊರೆ ಹೇರಿದೆ ಎಂದು ಆಕ್ಷೇಪಿಸಿದ್ದಾರೆ.
ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಕ್ಷಣಕ್ಕೆ ಉತ್ತೇಜನ ನೀಡುವ ಬದಲು ಪರೀಕ್ಷಾ ಶುಲ್ಕ ಹೆಚ್ಚಿಸುವ ಮೂಲಕ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ಸರ್ಕಾರ ಅಡ್ಡಿಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
2026-27ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ದ್ವಿತೀಯ ಪಿಯುಸಿ ಪರೀಕ್ಷಾ ಶುಲ್ಕವನ್ನು 400ರಿಂದ 600ಕ್ಕೆ ಹೆಚ್ಚಿಸಲಾಗಿದೆ. ಒಂದು ವಿಷಯದ ಪರೀಕ್ಷಾ ಶುಲ್ಕ 140ರಿಂದ 210ಕ್ಕೆ, ಎರಡು ವಿಷಯಗಳ ಶುಲ್ಕ 270ರಿಂದ 405ಕ್ಕೆ ಹಾಗೂ ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳ ಶುಲ್ಕ 400ರಿಂದ 600ಕ್ಕೆ ಏರಿಕೆಯಾಗಿದೆ. ದಂಡ ಶುಲ್ಕ 1,320ರಿಂದ 1,980ಕ್ಕೆ ಹೆಚ್ಚಿಸಲಾಗಿದೆ.
ಅದೇ ರೀತಿ, ಪ್ರಾಯೋಗಿಕ ಪರೀಕ್ಷೆಯ ಪ್ರತಿ ವಿಷಯದ ಶುಲ್ಕ 110ರಿಂದ 165ಕ್ಕೆ, ಅಂಕಪಟ್ಟಿ ಶುಲ್ಕ 50ರಿಂದ 75ಕ್ಕೆ ಹಾಗೂ ಪರೀಕ್ಷಾ ಕೇಂದ್ರ ಬದಲಾವಣೆಯ ಶುಲ್ಕ 2,000ರಿಂದ 3,000ಕ್ಕೆ ಹೆಚ್ಚಿಸಲಾಗಿದೆ. ಅಂಕಪಟ್ಟಿಯ ದ್ವಿತೀಯ ಪ್ರತಿಗೆ 2,400, ತೃತೀಯ ಪ್ರತಿಗೆ 4,755 ಹಾಗೂ ತತ್ಕಾಲ್ ಅಂಕಪಟ್ಟಿಗೆ 11,880 ನಿಗದಿಪಡಿಸಲಾಗಿದೆ. ದ್ವಿತೀಯ ಪಿಯುಸಿ ಅಂಕಪಟ್ಟಿ ಪರಿಶೀಲನೆಗೆ ಹೊಸದಾಗಿ 2,000 ಶುಲ್ಕ ವಿಧಿಸಲಾಗಿದೆ. ಪರೀಕ್ಷಾ ಅಂಕ ಸುಧಾರಣೆಯ ಶುಲ್ಕವನ್ನೂ 262ರಿಂದ 525ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಉಚಿತ ಶಿಕ್ಷಣ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಪರೀಕ್ಷಾ ನೋಂದಣಿ, ಪ್ರಾಯೋಗಿಕ ಪರೀಕ್ಷೆ, ಅಂಕಪಟ್ಟಿ, ಮರುಮೌಲ್ಯಮಾಪನ ಸೇರಿದಂತೆ ವಿವಿಧ ಶುಲ್ಕಗಳನ್ನು ಹೆಚ್ಚಿಸಿರುವುದು ಶಿಕ್ಷಣ ವಿರೋಧಿ ಧೋರಣೆಯಾಗಿದೆ. ಈ ದುಬಾರಿ ಶುಲ್ಕ ಹೆಚ್ಚಳದಿಂದ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕೂಡಲೇ ವಿದ್ಯಾರ್ಥಿ ವಿರೋಧಿ ಆದೇಶವನ್ನು ವಾಪಸ್ ಪಡೆದು, ಪರೀಕ್ಷಾ ಶುಲ್ಕ ಹೆಚ್ಚಳವನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಎಐಡಿಎಸ್‍ಒ ರಾಜ್ಯ ಸಮಿತಿಯ ಪರವಾಗಿ ಗೋವಿಂದ ಯಳವಾರ ಆಗ್ರಹಿಸಿದ್ದಾರೆ.