
ನವದೆಹಲಿ, ಜು. ೨೦- ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾಪಕ್ಷ ಇಂದು ಸಂಸತ್ ಚಲೋ ನಡೆಸಲು ಮುಂದಾದಾಗ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಉದ್ವಿಗ್ನಗೊಂಡಿದ್ದು, ಘರ್ಷಣೆಯಲ್ಲಿ ಕೆಲ ಪೊಲೀಸರು ಹಾಗೂ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿಂದು ಹೈ ಡ್ರಾಮಾವೇ ನಡೆದಿದ್ದು, ಕೆಲ ದಿನಗಳಿಂದ ನೀಟ್ ಅಕ್ರಮ ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇದ್ರ ಪ್ರದಾನ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಾಕ್ರೋಚ್ ಜನತಾಪಕ್ಷದ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಪೊಲೀಸರ ಭದ್ರ ಕೋಟೆಯನ್ನು ಮುರಿದು, ಬ್ಯಾರಿಕೇಡ್‌ಗಳನ್ನು ತಳ್ಳಿ ಮೆರವಣಿಗೆ ಮೂಲಕ ತೆರಳಲು ಮುಂದಾದಾಗ ದೆಹಲಿ ಪೊಲೀಸರು ಮತ್ತು ಆರ್‌ಪಿಎಫ್ ಪೊಲೀಸರು ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಈ ಘರ್ಷಣೆಯಲ್ಲ ದೆಹಲಿ ಪೊಲೀಸರೊಬ್ಬರು ಗಾಯಗೊಂಡಿದ್ದು, ವಿದ್ಯಾರ್ಥಿಗಳು ಲಾಠಿ ಪ್ರಹಾರದಿಂದ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಸಂಸತ್ ಭವನದವರೆಗೆ ಮೆರವಣಿಗೆ ನಡೆಸಲು ಕಾಕ್ರೋಚ್ ಜನತಾಪಕ್ಷದ ಕಾರ್ಯಕರ್ತರು ಮುಂದಾದಾಗ ಪ್ರತಿಭಟನಾಕಾರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದ್ದು, ಪ್ರತಿಭಟನಾಕಾರರ ಮೇಲೆ ಆರ್‌ಪಿಎಫ್ ಸಿಬ್ಬಂದಿ ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸಿದರು.
ಸಂಸತ್‌ನ ಮುಂಗಾರು ಅಧಿನವೇಶನದ ಮೊದಲ ದಿನವೆ ಕಾಕ್ರೋಚ್ ಜನತಾಪಕ್ಷ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಂಸತ್ ಚಲೋ ಮೆರವಣಿಗೆ ನಡೆಸುವುದಾಗಿ ಹೇಳಿತ್ತು. ಆದರಂತೆ ಇಂದು ಜಂತರ್ ಮಂತರ್‌ನಿಂದ ಕಾಕ್ರೋಚ್ ಜನತಾಪಕ್ಷದ ಕಾರ್ಯಕರ್ತರು ಪೊಲೀಸರ ಅಡೆತಡೆಗಳನ್ನು ನಿವಾರಿಸಿಕೊಂಡು ಬ್ಯಾರಿಕೇಡ್‌ಗಳನ್ನು ತಳ್ಳಿ ಮೆರವಣಿಗೆಗೆ ಮುಂದಾದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಮೆರವಣಿಗೆಗೆ ಅನುಮತಿ ಕೋರಿಲ್ಲವಾದರೂ ಪ್ರತಿಭಟನಾಕಾರರು ಸಂಸತ್ ಭವನದವರೆಗೆ ಮೆರವಣಿಗೆ ನಡೆಸಲು ಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನದ ವಾತಾವರಣ ಉಂಟಾಯಿತು.
ಈ ಪ್ರತಿಭಟನೆಗೆ ಭಾರಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮಾವಣೆಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳಾಗದಂತೆ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದರಾದರೂ ಅದನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ಸಂಸತ್ ಭವನ ಚಲೋ ನಡೆಸಲು ಮುಂದಾದರು. ಇದರಿಂದ ಘರ್ಷಣೆಯ ವಾತಾವರಣ ರೂಪುಗೊಂಡು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು.
ಕಾಕ್ರೋಚ್ ಜನತಾಪಕ್ಷದ ಸಂಸತ್ ಚಲೋ ಹಿನ್ನೆಲೆಯಲ್ಲಿ ಸಂಸತ್‌ನ ಸುತ್ತ ಭದ್ರತೆಯನ್ನು ಮತ್ತಷ್ಟು ಬಿಗಿ ಗೊಳಿಸಲಾಗಿದ್ದು, ಬಿಎನ್‌ಎಸ್ ಸೆಕ್ಷನ್ ೧೬೩ರಡಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.
ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಭದ್ರತಾ ಕಾರ್ಯಗಳಿಗ ದೆಹಲಿ ಮೆಟ್ರೋ ರೈಲು ನಿಗಮವು ಇಂದು ರಾಜೀವ್ ಚೌಕ್ ಜನಪತ್ ಪಟೇಲ್ ಚೌಕ್ ಸೆಂಟ್ರೆಲ್ ಸೇಕ್ರೇಟಿ ಯೇಟ್ ಮತ್ತು ಸೇವಾ ತೀರ್ಥ ಸೇರಿದಂತೆ ಐದು ನಿಲ್ದಾಣಗಳನ್ನು ಮುಚ್ಚಿದೆ. ಮುಂದಿನ ಸೂಚನೆವರೆಗೆ ಈ ಐದು ನಿಲ್ದಾಗಳು ಮುಚ್ಚಲ್ಪಟ್ಟಿರುವತ್ತೆ ಎಂದು ದಹೆಲಿ ಮೆಟ್ರೋ ನಿಗಮ ತಿಳಿಸಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪದ್ರಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾಪಕ್ಷದ ಪರವಾಗಿ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಚುಕ್ ಅವರನ್ನು ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಇದಾದ ಬಳಿಕ ಕಾಕ್ರೋಚ್ ಜನತಾಪಕ್ಷದ ಸಂಸ್ಥಾಪಕ ಅಭಿಜಿತ್ ದೀಬ್ಕೆ ನಿರಶನ ಆರಂಭಿಸಿ ಇಂದು ಸಂಸತ್ ವರೆಗೆ ಪ್ರತಿಭಟನೆ ಮೆವರಣಿಗೆ ನಡೆಸುವುದಾಗಿ ಹೇಳಿದ್ದರು. ಅದರಂತೆ ಕಾಕ್ರೋಚ್ ಜನತಾಪಕ್ಷದ ಕಾರ್ಯಕರ್ತರು ಮೆರವಣಿಗೆಗೆ ಮುಂದಾದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಸಂಸತ್ ಭವನ ಚಲೋವನ್ನು ವಿಫಲಗೊಳಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ನಿರಶನ ಅಂತ್ಯಗೊಳಿಸಲು ಸೋನಂ ವಾಂಚುಕ್ ಮೂರು ಷರತ್ತುಗಳನ್ನು ಒಳಗೊಂಡ ಪತ್ರವನ್ನು ಸರ್ಕಾರಕ್ಕೆ ಬರೆದಿದ್ದಾರೆ.
ಈ ಪತ್ರದ ಪ್ರಕಾರ ಪ್ರಶ್ನೆ ಪತ್ರಿಕೆ ಸೋರಿಕೆಯ ವೈಫಲ್ಯದ ಹೊಣೆಯನ್ನು ಕೇಂದ್ರ ಸರ್ಕಾರ ಹೊರಬೇಕು. ಸಂಸತ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷದ ಬೇಡಿಕೆಗಳನ್ನು ಚರ್ಚೆಗೆ ತೆಗೆದುಕೊಳ್ಳಲು ಸಂಸತ್ ಸದಸ್ಯರು ಒಪ್ಪಿಕೊಳ್ಳಬೇಕು ಎಂಬ ಎರಡನೇ ಷರತ್ತನ್ನು ಇಟ್ಟು, ಸಂಸತ್‌ನವರೆಗೆ ಈ ಷರತ್ತುಗಳನ್ನು ಒಪ್ಪಿಕೊಂಡ ಬಗ್ಗೆ ಭರವಸೆ ನೀಡಲು ಸಂಸದರು ಸಫ್ದರ್ ಜಂಗ್ ಆಸ್ಪತ್ರೆಗೆ ಬರಬೇಕು ಮೂರನೇ ಷರತ್ತನ್ನು ವಿಧಿಸಿದ್ದರು.
ಸಂಸತ್‌ನಲ್ಲಿ ಕೋಲಾಹಲ, ಗದ್ದಲ ಕಲಾಪಕ್ಕೆ ಅಡ್ಡಿ
ಸಂಸತ್‌ನ ಮುಂಗಾರು ಅಧಿವೇಶನದ ಮೊದಲ ದಿನವೇ ಗದ್ದಲ, ಕೋಲಾಹಲ ನಡೆದು ಕಲಾಪವನ್ನು ಕೆಲ ಗಂಟೆ ಕಾಲ ಮುಂದೂಡುವಂತಾಯಿತು.
ಸಂಸತ್ ಅಧಿವೇಶನದ ಮೊದಲ ದಿನವೇ ಲೋಕಸಭೆಯಲ್ಲಿ ಪ್ರತಿ ಪಕ್ಷಗಳು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಚರ್ಚೆಗೆ ಪಟ್ಟು ಹಿಡಿದು ಘೋಷಣೆಗಳನ್ನು ಕೂಗಿ, ಗದ್ದಲ ಎಬ್ಬಿಸಿದರು. ಇದರಿಂದಾಗಿ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಸದನವನ್ನು ೧೨.೩೦ ಕ್ಕೆ ಮುಂದೂಡಿದರಾದರೂ ಮಧ್ಯಾಹ್ನ ೧.೩೦ ನಿಮಿಷವಾದರೂ ಸದನ ಮತ್ತೆ ಸಮಾವೇಶಗೊಂಡಿರಲಿಲ್ಲ.
ಇಂದು ಬೆಳಗ್ಗೆ ೧೧ ಗಂಟೆಗೆ ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆಯೇ ಲೋಕಸಭಾಧ್ಯಕ್ಷರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಕಲಾಪವನ್ನು ನಡೆಸಿದರು. ಸಂತಾಪ ಕಲಾಪ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಸಭಾಧ್ಯಕ್ಷರ ಮುಂದಿನ ಬಾವಿಗೆ ಆಗಮಿಸಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಘೋಷಣೆಗಳನ್ನು ಕೂಗಿದರು.
ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ರೂಪುಗೊಂಡು ಲೋಕಸಭಾಧ್ಯಕ್ಷರು ಸದನವನ್ನು ಮಧ್ಯಾಹ್ನ ಮಧ್ಯಾಹ್ನ ೨ ಗಂಟೆಗೆ ಮುಂದೂಡಿದರು.
ರಾಜ್ಯಸಭೆಯಲ್ಲೂ ಗದ್ದಲ ಕಲಾಪ ಮುಂದೂಡಿಕೆ
ರಾಜ್ಯ ಸಭೆಯಲ್ಲೂ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಪ್ರತಿಧ್ವನಿಸಿ ಸದನದಲ್ಲಿ ಗದ್ದಲ ನಡೆದು ಸಭಾಪತಿ ರಾಧಾಕೃಷ್ಣನ್ ಅವರು ಸದನವನ್ನು ೧೨ ಗಂಟೆಗೆ ಮುಂದೂಡಿದರು.
ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನಖರ್ಗೆ ಅವರು ನೀಟ್ ಪ್ರಶ್ನೆ ಪತ್ರಿಕೆ ವಿಚಾರವನ್ನು ಪ್ರಸ್ತಾಪಿಸಿ ಚರ್ಚೆಗೆ ಮುಂದಾಗುತ್ತಿದ್ದಂತೆಯೇ ಗದ್ದಲದ ವಾತಾವರಣ ರೂಪುಗೊಂಡು ಸದನವನ್ನು ಮುಂದೂಡವಂತಾಯಿತು.
ಇದಕ್ಕೂ ಮೊದಲು ನೀಟ್ ಅಕ್ರಮದ ಬಗ್ಗೆ ಚರ್ಚೆಗೆ ಅವಕಾಶ ಕೋರಿ ಸಿಪಿಐನ ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಅವರು ನಿಯಮ ೨೬೯ ರಡಿಯಲ್ಲಿ ಪ್ರಸ್ತಾವನೆಯನ್ನು ಮಂಡಿಸಿದರು.
ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಸದಸ್ಯರ ಪ್ರಮಾಣ ವಚನ ಸ್ವೀಕಾರದ ಬಳಿಕ ವಿಪಕ್ಷಗಳು ನೀಟ್ ಅಕ್ರಮದ ಬಗ್ಗೆ ಧ್ವನಿ ಎತ್ತಿ ಚರ್ಚೆಗೆ ಪಟ್ಟು ಹಿಡಿದರು.
ಈ ಮಧ್ಯೆ ಸಂಸದ ಸಂತೋಷ್ ಕುಮಾರ್ ಚರ್ಚೆಗೆ ಅವಕಾಶ ಕೋರಿ ಪ್ರಸ್ತಾವನೆಯನ್ನು ಮಂಡಿಸಿದರು.
ವಿದ್ಯಾರ್ಥಿಗಳ ಪಟ್ಟಿಗೆ ಮಣಿದ ಸರ್ಕಾರ: ಚರ್ಚೆಗೆ ಮುಂದು
ಜಂತರ್ ಮಂತರ್‌ನಲ್ಲಿ ಕಾಂಗ್ರೆಸ್ ಜನತಾಪಕ್ಷ ನೀಟ್ ಅಕ್ರಮವನ್ನು ಖಂಡಿಸಿ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರ್ಕಾರ ಕಾಕ್ರೋಚ್ ಜನತಾಪಕ್ಷದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ಮುಂದಾಗಿದೆ.
ಈ ಬಗ್ಗೆ ಕಾಕ್ರೋಚ್ ಜನತಾಪಕ್ಷದ ವಕ್ತಾರ ಸೌರವ್ ದಾಸ್ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ ನಮ್ಮೊಂದಿಗೆ ಮಾತುಕತೆಗೆ ಮುಂದಾಗಿದೆ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಕಾಕ್ರೋಚ್ ಜನತಾಪಕ್ಷದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದರು.
ಸರ್ಕಾರ ನಮ್ಮೊಂದಿಗೆ ಮಾತುಕತೆ ನಡೆಸಲಿದೆ. ನಾನು ಮತ್ತು ಅಸುತೋಷ್ ರಾಂಕಾ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಿದ್ದವೆ. ನಮ್ಮ ಬೇಡಿಕೆಗಳು ಸ್ಪಷ್ಟವಾಗಿದ್ದು, ಯುವಜನ ಬೆಂಬಲ ನಮಗಿದೆ ಎಂದು ಸೌರವ್ ದಾಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.


































