Home Lead News ವಿಕ್ರಮ್-೧ ಉಡಾವಣೆ ಯಶಸ್ವಿ

ವಿಕ್ರಮ್-೧ ಉಡಾವಣೆ ಯಶಸ್ವಿ

ಶ್ರೀಹರಿಕೋಟಾ (ಆಂಧ್ರಪ್ರದೇಶ), ಜು.೧೮: ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಕ್ಷಣವೊಂದು ದಾಖಲಾಗಿದೆ. ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ, ದೇಶದ ಮೊದಲ ಖಾಸಗಿ ಆರ್ಬಿಟಲ್ ದರ್ಜೆಯ ರಾಕೆಟ್ ‘ವಿಕ್ರಮ್-೧ ಇಂದು ಮಧ್ಯಾಹ್ನ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿದೆ.


‘ಆಗಮನ್’ ಎಂದು ಹೆಸರಿಡಲಾದ ಈ ಐತಿಹಾಸಿಕ ಮಿಷನ್, ಜಾಗತಿಕ ವಾಣಿಜ್ಯ ಉಪಗ್ರಹ ಉಡಾವಣಾ ಮಾರುಕಟ್ಟೆಗೆ ಭಾರತೀಯ ಖಾಸಗಿ ವಲಯದ ಅಧಿಕೃತ ಪ್ರವೇಶವನ್ನು ಸಾರಿದೆ. ಇದರೊಂದಿಗೆ, ಜಾಗತಿಕವಾಗಿ ಕಕ್ಷೆಯ ರಾಕೆಟ್‌ಗಳನ್ನು ಯಶಸ್ವಿಯಾಗಿ ನಿರ್ಮಿಸಿ ಉಡಾವಣೆ ಮಾಡಿದ ಕೆಲವೇ ಕೆಲವು ಗಣ್ಯ ಕಂಪನಿಗಳ ಸಾಲಿಗೆ ಸ್ಕೈರೂಟ್ ಸೇರ್ಪಡೆಯಾಗಿದೆ.


ಕೊನೆ ಕ್ಷಣದ ರೋಮಾಂಚನ ತಾಂತ್ರಿಕ ಸವಾಲು


ನಿಗದಿತ ವೇಳಾಪಟ್ಟಿಯ ಪ್ರಕಾರ ರಾಕೆಟ್ ಇಂದು ಬೆಳಿಗ್ಗೆ ೧೧:೩೦ ಕ್ಕೆ ಉಡಾವಣೆಯಾಗಬೇಕಿತ್ತು. ಆದರೆ, ಉಡಾವಣೆಗೆ ಕೆಲವೇ ನಿಮಿಷಗಳ ಮುನ್ನ ಮಿಷನ್ ಕಂಟ್ರೋಲ್ ತಂಡವು ತಾಂತ್ರಿಕ ಕಾರಣಗಳಿಗಾಗಿ ಯೋಜಿತ ತಡೆ ವಿಧಿಸಿತು. ಇದರಿಂದಾಗಿ ಶ್ರೀಹರಿಕೋಟಾದ ಕಂಟ್ರೋಲ್ ರೂಂನಲ್ಲಿ ಕೆಲಕಾಲ ಆತಂಕ ಮತ್ತು ತಳಮಳದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಎಲ್ಲಾ ತಾಂತ್ರಿಕ ಸವಾಲುಗಳನ್ನು ಯಶಸ್ವಿಯಾಗಿ ನಿವಾರಿಸಿ, ಮಧ್ಯಾಹ್ನ ೧೨:೦೫:೩೦ ರ ಸುಮಾರಿಗೆ ಮುಗಿಲನ್ನು ಸೀಳಿ ರಾಕೆಟ್ ನಭಕ್ಕೆ ಜಿಗಿಯುತ್ತಿದ್ದಂತೆ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ಹರ್ಷೋದ್ಗಾರ ಮುಗಿಲುಮುಟ್ಟಿತು.

ವಿಕ್ರಮ್-೧ ರಾಕೆಟ್‌ನ ತಾಂತ್ರಿಕ ವೈಶಿಷ್ಟ್ಯಗಳು


ಏಳು ಅಂತಸ್ತಿನ ಎತ್ತರ: ಸಂಪೂರ್ಣವಾಗಿ ಕಾರ್ಬನ್ ಕಾಂಪೋಸಿಟ್ ಸಂರಚನೆಯಿಂದ ಮಾಡಲ್ಪಟ್ಟಿರುವ ಈ ರಾಕೆಟ್ ಸುಮಾರು ೭ ಅಂತಸ್ತುಗಳಷ್ಟು ಎತ್ತರವಿದೆ.ಇದು ನಾಲ್ಕು ಹಂತಗಳ ರಾಕೆಟ್ ಆಗಿದ್ದು, ಮೂರು ಘನ ಇಂಧನ ಹಂತಗಳನ್ನು ಹೊಂದಿದೆ. ಕೊನೆಯ ಹಂತದಲ್ಲಿ ಕಕ್ಷೆ ಹೊಂದಾಣಿಕೆಗಾಗಿ ಸಂಸ್ಥೆಯೇ ಸ್ವತಂತ್ರವಾಗಿ ಅಭಿವೃದ್ಧಿಪಡಿಸಿದ ಆಧುನಿಕ ೩ಆ-ಪ್ರಿಂಟೆಡ್ ದ್ರವ ಇಂಧನ ಎಂಜಿನ್ ಅನ್ನು ಬಳಸಲಾಗಿದೆ. ಭೂಮಿಯ ಕೆಳ ಕಕ್ಷೆಗೆ ಗರಿಷ್ಠ ೩೫೦ ಕೆಜಿ ತೂಕದ ಸಣ್ಣ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ. ಪ್ರಸ್ತುತ ಮೊದಲ ಪರೀಕ್ಷಾರ್ಥ ಹಾರಾಟದಲ್ಲಿ ೬೦-ಡಿಗ್ರಿ ಇಳಿಜಾರಿನಲ್ಲಿ ೪೫೦ ಕಿಲೋಮೀಟರ್ ಕಕ್ಷೆಯನ್ನು ಗುರಿಯಾಗಿಸಲಾಗಿದೆ.


ವಿಕ್ರಮ್-೧ ರಾಕೆಟ್ ಕೇವಲ ತಾಂತ್ರಿಕ ಉಪಗ್ರಹಗಳನ್ನಷ್ಟೇ ಅಲ್ಲದೆ ವೈವಿಧ್ಯಮಯ ಪೇಲೋಡ್‌ಗಳನ್ನು ಹೊತ್ತೊಯ್ದಿದೆ ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳು: ಗ್ರಾಹಾ ಸ್ಪೇಸ್ ಕಾಸ್ಮೋಸರ್ವ್, ಡಿ-ಕ್ಯೂಬ್ಡ್ ಮತ್ತು ಸ್ಕೈರೂಟ್ ಸಂಸ್ಥೆಯ ಸ್ವಂತ ’ಸ್ಕೋಪ್’ ತಂತ್ರಜ್ಞಾನ ಪ್ರಾತ್ಯಕ್ಷಿಕೆ ಪೇಲೋಡ್‌ಗಳು. ಕಾಸ್ಮೋಸ್ ಡೈಮಂಡ್ಸ್ ಸಂಸ್ಥೆಯ “ಕಾಸ್ಮಿಕ್ ಬ್ಲೂಮ್” ಕಲಾಕೃತಿಯೊಂದಿಗೆ, ಭಾರತದ ಹೆಮ್ಮೆಯ ವಿಜ್ಞಾನಿಗಳಾದ ಸರ್ ಸಿ.ವಿ. ರಾಮನ್, ಡಾ. ವಿಕ್ರಮ್ ಸಾರಾಭಾಯ್ ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸೂಕ್ಷ್ಮ ಕಲಾಕೃತಿಗಳನ್ನು ರಾಕೆಟ್‌ನಲ್ಲಿ ಇರಿಸಲಾಗಿದೆ.


ಈ ಮಹತ್ವದ ರಾಕೆಟ್ ನಿರ್ಮಾಣದಲ್ಲಿ ಶ್ರಮಿಸಿದ ಪ್ರತಿಯೊಬ್ಬ ಇಂಜಿನಿಯರ್, ತಂತ್ರಜ್ಞ ಹಾಗೂ ತಂಡದ ಸದಸ್ಯರ ಸಹಿಗಳನ್ನು ರಾಕೆಟ್‌ನ ಮೇಲೆ ಮುದ್ರಿಸುವ ಮೂಲಕ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ.

ಸ್ಕೈರೂಟ್‌ಗೆ ಮೋದಿ ಅಭಿನಂದನೆ


ದೇಶದ ಮೊದಲ ಖಾಸಗಿ ನಿರ್ಮಿತ ಆರ್ಬಿಟಲ್ ಕ್ಲಾಸ್ ರಾಕೆಟ್ ‘ವಿಕ್ರಮ್-೧’ ಯಶಸ್ವಿಯಾಗಿ ಉಡಾವಣೆಗೊಂದ ಬೆನ್ನಲ್ಲೇ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ಸಂಸ್ಥಾಪಕರಾದ ಪವನ್ ಕುಮಾರ್ ಚಂದನಾ ಮತ್ತು ನಾಗ ಭರತ್ ಡಾಕಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

ಈ ಯಶಸ್ವಿ ಉಡಾವಣೆಯ ನಂತರ ಸಂಸ್ಥಾಪಕರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಈ ಇತಿಹಾಸ ಪ್ರಸಿದ್ಧ ಕಾರ್ಯಾಚರಣೆಯನ್ನು ತಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾಗಿ ತಿಳಿಸಿದರು. “ಪವನ್ ಕುಮಾರ್ ಚಂದನಾ ಮತ್ತು ನಾಗ ಭರತ್ ಡಾಕಾ ಅವರೇ, ನೀವು ಕೇವಲ ಬಾಹ್ಯಾಕಾಶದಲ್ಲಿ ಒಂದು ಹೊಸ ಮರವನ್ನು ನೆಟ್ಟಿಲ್ಲ, ಬದಲಿಗೆ ಮುಂದಿನ ಯುವ ಪೀಳಿಗೆಗೆ ಪ್ರೇರಣೆ ನೀಡುವಂತಹ ಹೊಸ ಬೇರುಗಳನ್ನು ನಮ್ಮ ನೆಲದಲ್ಲಿ ಗಟ್ಟಿಗೊಳಿಸಿದ್ದೀರಿ” ಎಂದು ಪ್ರಧಾನಿ ಮೋದಿ ಗುಣಗಾನ ಮಾಡಿದ್ದಾರೆ.

“ದೇಶದ ಬಾಹ್ಯಾಕಾಶ ಮಹತ್ವಾಕಾಂಕ್ಷೆಯ ಈ ಸಾಧನೆ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಇದು ಕೇವಲ ಒಂದು ರಾಕೆಟ್ ಉಡಾವಣೆಯಲ್ಲ, ಭಾರತದ ಯುವ ನಾವೀನ್ಯಕಾರರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಎಂದು ಪ್ರಧಾನಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.


ಭಾರತದಲ್ಲಿ ಸಂಪೂರ್ಣವಾಗಿ ಖಾಸಗಿ ಸಂಸ್ಥೆಯೊಂದರಿಂದ ಅಭಿವೃದ್ಧಿಪಡಿಸಲಾದ ಮೊದಲ ಆರ್ಬಿಟಲ್ ಕ್ಲಾಸ್ ರಾಕೆಟ್ ಎಂಬ ಹೆಗ್ಗಳಿಕೆಗೆ ವಿಕ್ರಮ್-೧ ಪಾತ್ರವಾಗಿದೆ.ಸಾಮಾನ್ಯವಾಗಿ ರಾಕೆಟ್ ಉಡಾವಣೆಗಳ ಮೊದಲ ಪ್ರಯೋಗಗಳಲ್ಲಿ ತಾಂತ್ರಿಕ ಸವಾಲುಗಳು ಎದುರಾಗುತ್ತವೆ. ಆದರೆ ಸ್ಕೈರೂಟ್ ಸಂಸ್ಥೆಯ ವಿಕ್ರಮ್-೧ ಯಾವುದೇ ಅಡೆತಡೆಗಳಿಲ್ಲದೆ ಮೊದಲ ಬಾರಿಗೇ ಅತ್ಯಂತ ಯಶಸ್ವಿಯಾಗಿ ನಭಕ್ಕೆ ಜಿಗಿದಿದೆ.


ಇಸ್ರೋ ಬೆಂಬಲದೊಂದಿಗೆ ದೇಶದಲ್ಲಿ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಭವಿಷ್ಯದಲ್ಲಿ ಈ ಯಶಸ್ಸು ಹೊಸ ದಾರಿ ದೀಪವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಈ ಯಶಸ್ಸಿನಿಂದ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು, ಜಾಗತಿಕ ವಾಣಿಜ್ಯ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಖಾಸಗಿ ಸಂಸ್ಥೆಗಳ ಮುನ್ನಡೆಗೆ ದಾರಿಯಾಗಿದೆ.