Home Lead News ಬರ ನಿರ್ವಹಣೆ ಉದಾಸೀನ ಬೇಡ

ಬರ ನಿರ್ವಹಣೆ ಉದಾಸೀನ ಬೇಡ


ಬೆಂಗಳೂರು, ಜು. ೧೯- ರಾಜ್ಯದ ಬರ ಪರಿಸ್ಥಿತಿಯನ್ನು ಎದುರಿಸಲು ಒಂದಿಷ್ಟೂ ಉದಾಸೀನ ಮಾಡದೇ ಪರಿಸ್ಥಿತಿ ಗಂಭೀರತೆಯನ್ನು ಅರಿತು ಕಾರ್ಯೋನ್ಮುಖರಾಗುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಜನ ಗುಳೆ ಹೋಗುವುದನ್ನು ತಪ್ಪಿಸಲು ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.


ವಿಧಾನಸೌಧದಲ್ಲಿಂದು ರಾಜ್ಯದ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳ ಮೇವು, ಉದ್ಯೋಗ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಅಗತ್ಯವಿರುವ ಎಲ್ಲಾ ಅನುಕೂಲ, ಅನುದಾನಗಳನ್ನು ಹೇರಳವಾಗಿ ಕೊಡುತ್ತಿದೆ. ಇಷ್ಟಾದ ನಂತರವೂ ಕರ್ತವ್ಯ ಲೋಪದಿಂದ ಯಾವುದೇ ಜಿಲ್ಲೆಯಲ್ಲಿ ಅನಾಹುತ ಕಂಡು ಬಂದರೆ ಅದಕ್ಕೆ ನೀವೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.


ಪಶುಸಂಗೋಪನೆ ಇಲಾಖೆ, ಕೃಷಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಅತ್ಯಂತ ಸಕ್ರಿಯವಾಗಿ, ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಅವರ ವೇಗಕ್ಕೆ ಸ್ಪಂದಿಸಬೇಕು ಎಂದರು.
ಕೇವಲ ಕಾಗದದ ವರದಿ ನೀಡಿದರೆ ನಾನು ಕೇಳುವುದಿಲ್ಲ. ನನಗೆ ಫೀಲ್ಡ್ ರಿಪೋರ್ಟ್ ಮುಖ್ಯ. ಫೀಲ್ಡ್ ರಿಪೋರ್ಟ್ ನನಗೆ ಸಿಗುತ್ತದೆ. ನನಗೆ ಸಿಗುವ ಫೀಲ್ಡ್ ರಿಪೋರ್ಟ್, ನೀವು ಕೊಡುವ ಕಾಗದ ರಿಪೋರ್ಟ್‌ಗೂ ವ್ಯತ್ಯಾಸ ಇರಬಾರದು ಎಂದು ತಾಕೀತು ಮಾಡಿದರು.


ಮುಂದಿನ ೧೫ ದಿನಗಳಲ್ಲಿ ನಾನು ಕೇಂದ್ರ ಸರ್ಕಾರಕ್ಕೆ ಬರ ಪರಿಸ್ಥಿತಿ ಕುರಿತಂತೆ ವರದಿ ರವಾನಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಓಗಳು ತ್ವರಿತವಾಗಿ ಸಮಗ್ರ ಮಾಹಿತಿ ಸಂಗ್ರಹಿಸಿ ಕಳುಹಿಸಬೇಕು ಎಂದು ಸೂಚಿಸಿದರು.


ಗ್ರಾಮೀಣ ಭಾಗದ ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ತಲಾ ೧ ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಘೋಷಿಸಲಾಗಿದೆ. ಈಗಾಗಲೇ ಬೆಳಗಾವಿ ಮತ್ತು ಕಲ್ಬುರ್ಗಿ ವಿಭಾಗ ಮಟ್ಟದಲ್ಲಿ ಸಭೆ ನಡೆಸಿ ಸಮಗ್ರ ಪರಿಶೀಲನೆ ನಡೆಸಿದ್ದೇನೆ. ಅಲ್ಲಿ ನಾನು ಕೊಟ್ಟಿರುವ ಸೂಚನೆಗಳು ಕಾಲಮಿತಿಯಲ್ಲಿ ಜಾರಿಯಾಗುತ್ತಿವೆ ಎಂದರು.


ಥೀಮ್ ಕರ್ನಾಟಕ ಚಿಂತನೆಯಲ್ಲಿ ಕಾರ್ಯಕ್ಷಮತೆ ತೋರಿಸುತ್ತಿರುವ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ನಿಮ್ಮ ಅನುಭವ ಮತ್ತು ಕಾರ್ಯಕ್ಷಮತೆ ತೋರಿಸಿ, ಆಡಳಿತಾತ್ಮಕವಾಗಿ ಟೀಮ್ ವರ್ಕ್ ಪ್ರದರ್ಶಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.


ನಿವೃತ್ತ ಐಎಎಸ್ ಅಧಿಕಾರಿಗಳ ಅನುಭವ ಮತ್ತು ತಿಳುವಳಿಕೆಯನ್ನು ನಮ್ಮ ಸರ್ಕಾರ ಸದುಪಯೋಗ ಮಾಡಿಕೊಳ್ಳುತ್ತಿದೆ. ನೀವು ಈ ನಿಟ್ಟಿನಲ್ಲಿ ಸಕ್ರಿಯರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಸದ್ಯ ಶೇ. ೬೦ ರಷ್ಟು ಮಳೆ ಕೊರತೆ ಕಾಣುತ್ತಿದೆ. ೧೭೮ ತಾಲ್ಲೂಕುಗಳು ಮಳೆ ಕೊರತೆ ಅನುಭವಿಸುತ್ತಿವೆ. ೨ನೇ ಹಂತದ ಪರಿಶೀಲನೆ ಮಾಡುವ ಅಗತ್ಯವಿದೆ ಎಂದರು.


ಮಳೆಯ ಪ್ರಮಾಣ ಮತ್ತು ಅಣೆಕಟ್ಟೆಗಳಲ್ಲಿ ಶೇಖರಣೆಯಾಗಿರುವ ನೀರಿನ ಆಧಾರದಲ್ಲಿ ಕೃಷಿ ಚಟುವಟಿಕೆ ಮುಂದುವರೆಸಬೇಕು. ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಓಗಳು ಈ ಬಗ್ಗೆ ರೈತ ಸಮುದಾಯದ ಜತೆ ಸಂಪರ್ಕದಲ್ಲಿದ್ದು, ಮಾರ್ಗದರ್ಶನ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.


ಸಣ್ಣ ಮತ್ತು ಅತಿ ಸಣ್ಣ ರೈತರ ಹಿತವನ್ನು ನಿರ್ಲಕ್ಷಿಸಬಾರದು. ಇವರ ಹಿತವೇ ನಿಮ್ಮಗಳ ಮುಖ್ಯ ಆದ್ಯತೆಯಾಗಬೇಕು ಎಂದು ಹೇಳಿದರು.
ಕಲ್ಬುರ್ಗಿ ಮತ್ತು ಬೆಳಗಾವಿ ವಿಭಾಗದ ಪರಿಶೀಲನೆ ನಡೆಸುವಾಗ ಬೆಳೆ ವಿಮೆ ವಿಚಾರದಲ್ಲಿ ಬೇರೆ ವ್ಯವಹಾರ ನಡೆಯುತ್ತಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಪ್ರತ್ಯೇಕ ವರದಿ ಕೇಳಿದ್ದೇನೆ ಎಂದರು.


ಹೊಸ ಬೋರ್‌ವೆಲ್ ಕೊರೆಸುವಾಗ ಅದರ ವಿಡಿಯೋ ಆಗಬೇಕು. ಎಲ್ಲೋ ಬೋರ್ ಕೊರೆಸಿದೆ ಎಂದು ಕಥೆ ಹೇಳಿದರೆ ನಾವು ಕೇಳಲ್ಲ. ನಕಲಿ ಬೋರ್‌ವೆಲ್, ಬೋಗಸ್ ಬೋರ್‌ವೆಲ್ ಕಂಡು ಬಂದರೆ ಜಿ.ಪಂ. ಸಿಇಓಗಳೇ ನೇರ ಹೊಣೆಯಾಗುತ್ತೀರಿ, ಇದಕ್ಕೆ ಅವಕಾಶ ಕೊಡಬೇಡಿ ಎಂದು ಎಚ್ಚರಿಕೆ ನೀಡಿದರು.
ಟ್ರಾನ್ಸ್‌ಫಾರ್ಮರ್ ರಿಪೇರಿ ಕಡೆ ಗಮನ ಕೊಡಿ. ಹೆಚ್ಚುವರಿ ಟ್ರಾನ್ಸ್‌ಫಾಮರ್ ಸಿದ್ದ ಮಾಡಿಕೊಳ್ಳಿ. ಇದರ ವ್ಯವಸ್ಥೆಗಾಗಿ ಈಗಾಗಲೇ ೪ಜಿ ರಿಯಾಯ್ತಿಯನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.


ಯಾರು ಯಾವ ನೆಪ ಹೇಳದೆ ಇವತ್ತು ನಾನು ಏನೇನು ಹೇಳಿದ್ದೇನೋ ಅವೆಲ್ಲವನ್ನು ಕೆಳ ಹಂತಕ್ಕೆ ತಲುಪಿಸಿ ಬರ ಎದುರಿಸಲು ಸರ್ವ ಸನ್ನದ್ಧರಾಗುವಂತೆಯೂ ಸೂಚನೆ ನೀಡಿದರು.


ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಡಾ. ಯತೀಂದ್ರ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು, ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓಗಳು ಭಾಗಿಯಾಗಿದ್ದರು.