Home ಜಿಲ್ಲೆ ತುಮಕೂರು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸಂಪೂರ್ಣಕ್ಕೆ ಆಗ್ರಹಿಸಿ ಸೆ. ೨೯ಕ್ಕೆ ಪ್ರತಿಭಟನೆ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸಂಪೂರ್ಣಕ್ಕೆ ಆಗ್ರಹಿಸಿ ಸೆ. ೨೯ಕ್ಕೆ ಪ್ರತಿಭಟನೆ

ಸಿರಾ, ಸೆ. ೨೬- ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ನಾಲೆಯ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸುವಂತೆ ಆಗ್ರಹಿಸಿ ಸೆ. ೨೯ ರಂದು ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕೆ.ಎಸ್.ಧನಂಜಯರಾಧ್ಯ ತಿಳಿಸಿದರು.


ನಗರದ ಎಪಿಎಂಸಿ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಕಳೆದ ೨೬ ವರ್ಷ ಕಳೆದರೂ ಪೂರ್ಣಗೊಳಿಸಿ ನೀರು ಕೊಡಲು ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು. ತುಮಕೂರು ನಾಲೆಯ ಯೋಜನೆಗೆ ಒಳಪಡುವ ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಸಿರಾ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿಯುವ ನೀರು ಮತ್ತು ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಕಷ್ಟವಾಗಿದೆ. ಈ ವರ್ಷ ಸಮರ್ಪಕ ಮಳೆ ಬಾರದೆ ಮುಂಗಾರು ವಿಫಲವಾಗಿದೆ ಎಂದು ಆರೋಪಿಸಿದರು.


ಭೀಕರ ಬರ ಆವರಿಸಿದೆ. ನೂರಾರು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ೫೩೦೦ ಕೋಟಿ ಅನುದಾನ ಘೋಷಣೆ ಮಾಡಿ ೩ ವರ್ಷ ಕಳೆದರೂ ಹಣ ಬಿಡುಗಡೆ ಮಾಡಿಲ್ಲ. ಆದ್ದರಿಂದ ಕುಂಟುತ್ತ ಸಾಗುತ್ತಿರುವ ಭದ್ರ ಮೇಲ್ದಂಡೆ ಯೋಜನೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿ ಅಡೆತಡೆಗಳನ್ನು ನಿವಾರಿಸಿ ನೀರು ಹರಿಸಲು ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.


ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಹಂತೇಶ್.ಬಿ ಮಾತನಾಡಿ, ತುಮಕೂರು ನಾಲೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಈ ಯೋಜನೆಯಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಹಣ ಬಿಡುಗಡೆ ಮಾಡಬೇಕು. ಯೋಜನೆಯಲ್ಲಿ ಸೇರದೆ ಕೈಬಿಟ್ಟಿರುವ ಕೆರೆಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸಬೇಕು. ಹೇಮಾವತಿ ನಾಲೆಯಿಂದ ಕಳ್ಳಂಬೆಳ್ಳ ಕಾಲುವೆಗೆ ನೀರು ಬಿಡುಗಡೆ ಮಾಡಿ ಕಳ್ಳಂಬೆಳ್ಳ, ಸಿರಾ, ಮದಲೂರು ಸೇರಿದಂತೆ ೧೫ ಕೆರೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಗಿರೀಶ್.ಬಿ.ಟಿ., ಕಸಬಾ ಯೋಬಳಿ ಅಧ್ಯಕ್ಷ ನಾಗರಾಜು, ಎಐಬಿಎಸ್‌ಪಿ ಜಿಲ್ಲಾ ಸಂಯೋಜಕ ಜಿ.ಎಸ್.ಮಂಜುನಾಥ್, ತಾಲ್ಲೂಕು ಅಧ್ಯಕ್ಷ ವೀರಕ್ಯಾತಯ್ಯ, ಉಪಾಧ್ಯಕ್ಷೆ ರಂಗಮ್ಮ, ರೈತ ಮುಖಂಡರಾದ ಹನುಮಂತಪ್ಪ, ಚಿಕ್ಕಗೂಳ ನಾಗ ರಾಜು, ತೇರುಮಲ್ಲಪ್ಪ, ಕಳ್ಳಂಬೆಳ್ಳ ನಾಗರಾಜು, ಕುದುರೇ ಕುಂಟೆ ಲಕ್ಕಣ್ಣ, ರಾಜಣ್ಣ ಬುಕ್ಕಾಪಟ್ಟಣ, ಎಂ.ಮುದ್ದರಾಜು, ರೇಣುಕಾರಾಧ್ಯ, ರಮೇಶ್ ಉಪಸ್ಥಿತರಿದ್ದರು.