
ತುಮಕೂರು, ನ. ೨೯- ತುಮಕೂರು ನಗರ ನೂರಾರು ಪ್ರತಿಭಾವಂತ ಕಲಾವಿದರ ಬೀಡಾಗಿದ್ದು, ಇಲ್ಲಿನ ಕಲಾವಿದರ ಕೃತಿಗಳ ಪ್ರದರ್ಶನ ಹಾಗೂ ಕಲಾ ಚಟುವಟಿಕೆಗಳಿಗೆ ಪೂರಕವಾಗಿ ಒಂದು ಶಾಶ್ವತವಾದ ಕಲಾ ಗ್ಯಾಲರಿಯ ಅಗತ್ಯವಿದೆ ಎಂದು ಹಿರಿಯ ಸಾಹಿತಿ, ಚಿಂತಕ ಎಸ್. ನಟರಾಜ್ ಬೂದಾಳ್ ಹೇಳಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಆಲದ ಮರದ ಪಾರ್ಕ್ನಲ್ಲಿರುವ ಪ್ರೆಸ್ಕ್ಲಬ್ನಲ್ಲಿ ಕಲ್ಬರಲ್ ವ್ಯಾಲಿ ಟ್ರಸ್ಟ್ ಹಾಗೂ ವಾಲಾಜಿ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ’ಕಲಾ ನಕ್ಷತ್ರಗಳು – ಚಿತ್ರ ಕಲಾವಿದರ ಪರಿಚಯ ಮಾಲಿಕೆ-೧’ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ನಮ್ಮ ನಡುವಿನ ಹಿರಿಯ ಮತ್ತು ಸಮಕಾಲೀನ ಚಿತ್ರ ಕಲಾವಿದರ ಬದುಕು ಹಾಗೂ ಸಾಧನೆಯನ್ನು ದಾಖಲಿಸುವ ’ಕಲಾ ನಕ್ಷತ್ರಗಳು’ ಕೃತಿಯನ್ನು ರಚಿಸಿದ ಕೋಟೆ ಕುಮಾರ್ ಮತ್ತು ಸಿಹಿ ಜೀವಿ ವೆಂಕಟೇಶ್ವರ ಅವರ ಕಾರ್ಯ ಅತ್ಯಂತ ಸ್ತುತ್ಯಾರ್ಹವಾದುದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಾವಿದ ಹಾಗೂ ಕೃತಿಯ ಸಂಪಾದಕ ಕೋಟೆಕುಮಾರ್ ಮಾತನಾಡಿ, ಈ ಕೃತಿಯ ರಚನೆ ಹಾಗೂ ಪ್ರಕಟಣೆಗೆ ಸಹಕರಿಸಿದ ಎಲ್ಲ ಕಲಾವಿದರಿಗೆ, ಸಾಹಿತಿಗಳಿಗೆ ಮತ್ತು ಹಿತೈಷಿಗಳಿಗೆ ಹೃತ್ತೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ಕೃತಿಯ ಮತ್ತೋರ್ವ ಸಂಪಾದಕ ಸಿಹಿಜೀವಿ ವೆಂಕಟೇಶ್ವರ ಅವರು ಕೃತಿಯ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಕೃತಿಯಲ್ಲಿ ಪರಿಚಯಿಸಲ್ಪಟ್ಟ ಕಲಾವಿದರಾದ ಅಶೋಕ್, ಕೆ.ಎನ್. ಮನು ಚಕ್ರವರ್ತಿ, ನರಸಿಂಹ ಮೂರ್ತಿ, ಪ್ರಭು ಹರಸೂರ್, ಕೆ. ಸಿ. ಎಸ್. ಪ್ರಸನ್ನ, ರೇಣುಕಾ ಕೆಸರಮಡು, ಎಂ. ಎಸ್. ಶಿವರುದ್ರಯ್ಯ, ಕ್ಯಾತ್ಸಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎನ್.ಎಲ್ ಸರಸ್ವತಿ, ಶಿಕ್ಷಕರಾದ ಸುರೇಶ್, ರಂಗನಾಥ್, ರಾಕೇಶ್ ಹೆಚ್.ಆರ್, ರಂಗಸ್ವಾಮಯ್ಯ, ರಾಜೇಶ್ವರಿ ಮತ್ತಿತರರು ಭಾಗವಹಿಸಿದ್ದರು.
ಸಮಾರಂಭದ ಅಂಗವಾಗಿ ಕರ್ನಾಟಕ ವಿಕಾಸ ರಂಗದ ಶ್ರೀನಿವಾಸ್ಕುಂಬಾರ್, ಮಹದೇವಪ್ಪ, ಹುಲಿಕುಂಟೆ ಮಂಜುನಾಥ್ ಹಾಗೂ ಮೋಹನ್ಜಾದೂಗಾರ್, ಶಿಲ್ಪಿ ವಿಶ್ವನಾಥ್ಅವರು ಸುಶ್ರಾವ್ಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾವಿದ ನರಸಿಂಹ ಮೂರ್ತಿ, ಪ್ರಭು ಹರಸೂರ್ ಮತ್ತಿತರರು ಸಹಕಾರ ನೀಡಿದ್ದರು.























