
ತುಮಕೂರು, ನ ೨೯- ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸಂವಿಧಾನದ ಆಶಯಗಳ ಜಾರಿ ಹಾಗೂ ನಾಗರಿಕರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ.
ನಗರದ ಟೌನ್ಹಾಲ್ ವೃತ್ತದ ಬಳಿ ಪ್ರತಿಭಟನಾ ಧರಣಿ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕರಾದ ಸಿ. ಯತಿರಾಜು ಮಾತನಾಡಿ, ಸಂವಿಧಾನವನ್ನು ಉಳಿಸುವ ಕೆಲಸವನ್ನು ಪ್ರತಿಯೊಬ್ಬರೂ ದಿನನಿತ್ಯ ಮಾಡಬೇಕಾದ ಅಗತ್ಯ ಎದುರಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎಲ್ಲರಿಗೂ ಲಭ್ಯವಾಗಬೇಕು ಎಂದು ಪ್ರತಿಪಾದಿಸಿದರು.
ದೇಶದಾದ್ಯಂತ ಸುಮಾರು ೩.೭ ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಡೆಯನ್ನು ಖಂಡಿಸಿದರು.
ಆಳುವ ಸರ್ಕಾರಗಳು ಜನರ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಮೂಲಕ ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಿವೆ ಎಂದು ಆರೋಪಿಸಿದರು.
ಪ್ರಗತಿಪರ ಚಿಂತಕರಾದ ಪ್ರೊ. ಕೆ. ದೊರೈರಾಜು ಮಾತನಾಡಿ, ಸಂವಿಧಾನ ಸಮರ್ಪಣಾ ದಿನದ ಆಚರಣೆ ಅರ್ಥಪೂರ್ಣವಾಗಿದೆ. ಸಂವಿಧಾನದ ಅಶಯಗಳು ನಮ್ಮ ಬದುಕಿನ ಭಾಗವಾಗಬೇಕಾಗಿದೆ. ಆದರೆ ಇಂದು ಸಾಹಿತ್ಯ ಹಾಗೂ ಆಚರಣೆಗಳ ಮೂಲಕ ಸಮಾಜದ ಸಾಮರಸ್ಯ ಮತ್ತು ’ಶಾಂತಿಯ ತೋಟ’ವನ್ನು ಕದಡುವ ಸಂವಿಧಾನ ವಿರೋಧಿ ಶಕ್ತಿಗಳು ಸಕ್ರಿಯವಾಗಿವೆ. ಇಂತಹ ಶಕ್ತಿಗಳ ಬಗ್ಗೆ ಜನತೆ ಎಚ್ಚರಿಕೆಯಿಂದಿರಬೇಕು ಮತ್ತು ಸರ್ಕಾರಗಳು ನಿಗ್ರಹಿಸಬೇಕು. ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಬಾ.ಹ. ರಮಾಕುಮಾರಿ ಮಾತನಾಡಿ, ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಪುಸ್ತಕ ಪ್ರಕಟಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರ ಬದುಕಿಗೆ ಆಸರೆಯಾಗಿರುವ ಸಂವಿಧಾನದ ಮತ್ತು ಅದರಡಿಯಲ್ಲಿ ನೀಡಲಾಗಿರುವ ಹಕ್ಕುಗಳನ್ನು ಉಳಿಸಬೇಕೆದಾದರೆ ಜನತೆ ಐಕ್ಯತೆಯಿಂದ ಹೋರಾಟಗಳಿಗೆ ಮುಂದಾಗಬೇಕು ಎಂದರು.
ಪಂಡಿತ್ ಜವಾಹರ್ ಮಾತನಾಡಿ, ಇಂದು ದೇಶದಲ್ಲಿ ಸರ್ವಾಧಿಕಾರಿ ಸರ್ಕಾರವು ದೇಶದ ಸಂವಿಧಾನ ಮತ್ತು ಸ್ವಾಯತ್ತ ಸಂಸ್ಥೆಗಳ ಹಕ್ಕುಗಳನ್ನು ದಮನ ಮಾಡಿ ದುರ್ಬಲಗೊಳಿಸುತ್ತಿದೆ. ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಸರ್ಕಾರದ ಬಗ್ಗೆ ಜನರು ಜಾಗೃತರಾಗಿ ಪ್ರಶ್ನಿಸಬೇಕು ಎಂದರು.
ಮುನಿಸಿಫಲ್ ಕಾರ್ಮಿಕರ ಸಂಘದ ಮಾರುತಿ ಮಾತನಾಡಿ, ಸಂವಿಧಾನ ಬದ್ದವಾಗಿ ಫೇರ ವೇಜಸ್ ನೀಡಬೇಕು, ಸರ್ಕಾರಗಳು ದುಡಿಯು ಜನಕ್ಕೆ ಕನಿಷ್ಠ ವೇತನವನ್ನು ನೀಡುತ್ತಿಲ್ಲ. ಗುತ್ತಿಗೆ ಕಾರ್ಮಿಕ ಪದ್ದತಿಯಡಿ ಜೀತದಾಳುಗಳಂತೆ ದುಡಿಸುವ ಶೋಷಣೆ ನಿಲ್ಲಬೇಕು ಎಂದರು.
ಪರಿಷ್ಕೃತ ಕನಿಷ್ಟ ವೇತನವನ್ನು ಇನ್ನು ನೀಡದಿರುವುದು ದುಡಿಯುವ ಜನರ ಬದುಕು ದುಸ್ತರಗೊಳಿಸಿದೆ ಎಂದು ಹೇಳಿದರು.
ಇಂದಿರಮ್ಮ ಮಾತನಾಡಿ, ಸಂವಿಧಾನ ಬದ್ದವಾಗಿ ಎಲ್ಲರ ಮತದಾನ ಉಳಿಸಲು ಸಾಧ್ಯವಾಗುತ್ತಿಲ್ಲ. ಮತಾಧಿಕಾರವನ್ನು ಕಸಿಯುವ ಕುತಂತ್ರವನ್ನು ಸೋಲಿಸಬೇಕು. ಇಲ್ಲವಾದಲ್ಲಿ ಜನತೆ ಹಕ್ಕುಗಳಿಂದ-ಸಾಮಾಜಿಕ ಭದ್ರತೆಯಿಂದ ವಂಚಿತರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಮಕೃಷ್ಣಪ್ಪ ಮಾತನಾಡಿ, ಪ್ರತಿಭಟನೆಯ ಪ್ರಮುಖ ಹಕ್ಕೋತ್ತಾಯಗಳನ್ನು ಮಂಡಿಸಿದರು. ಎಸ್ಐಆರ್ ರದ್ದಾಗಬೇಕು, ಎಲ್ಲರಿಗೂ ಉಚಿತ ಶಿಕ್ಷಣ ದೊರೆಯಬೇಕು, ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು, ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಿರುವುದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಧರಣಿಯಲ್ಲಿ ಟಿ.ಜಿ.ಶಿವಲಿಂಗಯ್ಯ, ಸೈಯದ್ ಮುಜೀಬ್, ಉಪಾನ್ಯಾಸಕರಾದ ಸುಬ್ರಮಣ್ಯ, ಅಕ್ಕಮ್ಮ, ತಾಜುದ್ದೀನ್, ಜುಲಕ್ಷ್ಮೀ,ಮಾಲ, ಯುವರಾಜು, ಲಕ್ಷ್ಮೀಕಾಂತ, ಅಶ್ವಥಯ್ಯ, ಇಂತಿಯಾಜ್ ಪಾಷ, ಮಂಜು, ಶ್ರೀನಿವಾಸ್, ನರಸಿಂಹಮೂರ್ತಿ, ಮನೋಜ್, ಲಲಿತಮ್ಮ, ಜ್ಯೋತಿ, ಬಸವರಾಜು, ವಿನಾಯಕ, ಎನ್.ಕೆ. ಸುಬ್ರಮಣ್ಯ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
























