
ಕಲಬುರಗಿ: ವಿಶ್ವವಿದ್ಯಾಲಯದ ಜೀವನವು ಕೇವಲ ಪಠ್ಯಪುಸ್ತಕಗಳ ಅಧ್ಯಯನಕ್ಕೆ ಸೀಮಿತವಾಗಿರದೆ, ಜ್ಞಾನ, ಕೌಶಲ್ಯ, ಶಿಸ್ತು, ಜವಾಬ್ದಾರಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮಹತ್ವದ ಹಂತವಾಗಿದೆ. ಶರಣಬಸವ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸುರಕ್ಷತೆ, ಅಧ್ಯಯನ ಮತ್ತು ಶಿಸ್ತುಗಳಿಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ನಿರ್ದೆಶಕ ಪೆÇ್ರ. ವಿ. ಡಿ. ಮೈತ್ರಿ ಹೇಳಿದರು.
ಅವರು ವಿವಿಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಗುರುವಾರದಂದು, ಶೈಕ್ಷಣಿಕ ಜೀವನಕ್ಕೆ ಹೊಸದಾಗಿ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಆಯೋಜಿಸಿದ್ದ 15 ದಿನಗಳ ಇಂಡಕ್ಷನ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ನಿಯಮಗಳು ಮತ್ತು ಶೈಕ್ಷಣಿಕ ವಾತಾವರಣವನ್ನು ಗೌರವಿಸುವುದರ ಜೊತೆಗೆ ವಿದ್ಯಾರ್ಥಿಗಳು ತರಗತಿಗಳಿಗೆ ನಿಯಮಿತವಾಗಿ ಹಾಜರಾಗಬೇಕು. ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು ಹಾಗೂ ಆಂತರಿಕ ಮೌಲ್ಯಮಾಪನ, ಅಸೈನ್ಮೆಂಟ್ಗಳು, ಪ್ರಾಯೋಗಿಕ ತರಬೇತಿ ಮತ್ತು ಸೆಮಿಸ್ಟರ್ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಯುಸಿ ಹಂತದವರೆಗೆ ವಿದ್ಯಾರ್ಥಿಗಳು ಸಾಮಾನ್ಯವಾಗಿ ವಾರ್ಷಿಕ ಪರೀಕ್ಷಾ ಪದ್ಧತಿಗೆ ಪರಿಚಿತರಾಗಿದ್ದೀರಿ, ನಮ್ಮಲ್ಲಿ ಪದವಿ ಶಿಕ್ಷಣಕ್ಕೆ ಪ್ರವೇಶಿಸಿದ ನಂತರ ಸೆಮಿಸ್ಟರ್ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಆದರೆ ಶರಣಬಸವ ವಿಶ್ವವಿದ್ಯಾಲಯದ ಶೈಕ್ಷಣಿಕ ವ್ಯವಸ್ಥೆ ಇದಕ್ಕಿಂತಲೂ ವಿಭಿನ್ನವಾಗಿದ್ದು, ವಿದ್ಯಾರ್ಥಿಗಳ ಜ್ಞಾನ ಮತ್ತು ಕಲಿಕೆಯ ಪ್ರಗತಿಯನ್ನು ಮೊದಲ ದಿನದಿಂದಲೇ ನಿರಂತರವಾಗಿ ಮೌಲ್ಯಮಾಪನ ಮಾಡುವ ನಿರಂತರ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಿಕೊಂಡಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿದ್ಯಾರ್ಥಿಗಳ ಒಟ್ಟು ಶೈಕ್ಷಣಿಕ ಸಾಧನೆಯಲ್ಲಿ 50ರಷ್ಟು ಅಂಕಗಳು ಆಂತರಿಕ ಮೌಲ್ಯಮಾಪನದಿಂದ ಹಾಗೂ ಉಳಿದ 50ರಷ್ಟು ಅಂಕಗಳು ಸೆಮಿಸ್ಟರ್ನ ಅಂತ್ಯದಲ್ಲಿ ನಡೆಯುವ ಪರೀಕ್ಷೆಯಿಂದ ದೊರೆಯುತ್ತವೆ. ಆಂತರಿಕ ಮೌಲ್ಯಮಾಪನದ 50ರಷ್ಟು ಅಂಕಗಳು ವಿದ್ಯಾರ್ಥಿಗಳ ದಿನನಿತ್ಯದ ತರಗತಿ ಹಾಜರಾತಿ, ನಿರಂತರ ಅಧ್ಯಯನ, ಅಸೈನ್ಮೆಂಟ್ಗಳ ಸಲ್ಲಿಕೆ, ಶೈಕ್ಷಣಿಕ ದಾಖಲೆಗಳ ನಿರ್ವಹಣೆ, ಪ್ರಯೋಗಾಲಯದ ಕಾರ್ಯ, ಪ್ರಾಯೋಗಿಕ ಚಟುವಟಿಕೆಗಳು ಹಾಗೂ ತರಗತಿಯಲ್ಲಿನ ಸಕ್ರಿಯ ಪಾಲ್ಗೊಳ್ಳುವಿಕೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಲಾಗುತ್ತದೆ. ಹೀಗಾಗಿ, ವಿದ್ಯಾರ್ಥಿಯ ಪ್ರತಿದಿನದ ಶ್ರಮವೂ ಅವರ ಅಂತಿಮ ಫಲಿತಾಂಶದಲ್ಲಿ ಪ್ರತಿಫಲಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಲಕ್ಷ್ಮೀ ಪಾಟೀಲ ಮಾಕಾ, ಹೊಸ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳು, ಪಠ್ಯಕ್ರಮ, ಪರೀಕ್ಷಾ ಪದ್ಧತಿ, ಶೈಕ್ಷಣಿಕ ನಿಯಮಗಳು, ವಿದ್ಯಾರ್ಥಿ ಸೌಲಭ್ಯಗಳು ಹಾಗೂ ಮಾರ್ಗದರ್ಶನ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.
ಶರಣಬಸವ ವಿಶ್ವವಿದ್ಯಾಲಯವು 2017 ರಲ್ಲಿ ಸ್ಥಾಪನೆಯಾಗಿ ಕೇವಲ ಒಂಬತ್ತು ವರ್ಷಗಳಾಗಿದ್ದರೂ, ವಿಶ್ವವಿದ್ಯಾಲಯದ ಶೈಕ್ಷಣಿಕ ಪರಂಪರೆ ಮತ್ತು ಮೌಲ್ಯಗಳ ಹಿಂದೆ ಶತಮಾನಕ್ಕೂ ಮೀರಿದ ಶ್ರೀಮಂತ ಇತಿಹಾಸವಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅಮೂಲ್ಯ ಸೇವೆಯೇ ಇಂದು ಶರಣಬಸವ ವಿಶ್ವವಿದ್ಯಾಲಯದ ಭದ್ರ ಬುನಾದಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಡಾ. ಲಕ್ಷ್ಮೀ ಪಾಟೀಲ ಮಾಕಾ ತಿಳಿಸಿದರು.
ವಿಶೇಷವಾಗಿ ಮಹಿಳಾ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಸ್ಥೆ ಆರಂಭದಿಂದಲೂ ಅತ್ಯಂತ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ದೇಶದಲ್ಲಿ ಮಹಿಳಾ ಶಿಕ್ಷಣಕ್ಕೆ ಇನ್ನೂ ಸಾಕಷ್ಟು ಅವಕಾಶಗಳು ದೊರೆಯದ ಕಾಲದಲ್ಲಿಯೇ, 1934ರಲ್ಲಿ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಶಾಲೆಯನ್ನು ಆರಂಭಿಸುವ ಮೂಲಕ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಮಹಿಳಾ ಶಿಕ್ಷಣದ ಕ್ಷೇತ್ರದಲ್ಲಿ ದೂರದೃಷ್ಟಿಯ ಹೆಜ್ಜೆ ಇಟ್ಟಿತ್ತು. ಅಂದಿನಿಂದ ಇಂದಿನವರೆಗೆ ಸಂಸ್ಥೆಯ ಶೈಕ್ಷಣಿಕ ಪಯಣ ನಿರಂತರವಾಗಿ ವಿಸ್ತರಿಸುತ್ತಾ ಬಂದಿದೆ. ಶಾಲಾ ಶಿಕ್ಷಣದಿಂದ ಆರಂಭಗೊಂಡ ಈ ಶೈಕ್ಷಣಿಕ ಚಳವಳಿ ಪಿಯುಸಿ, ಪದವಿ, ಸ್ನಾತಕೋತ್ತರ, ವೃತ್ತಿಪರ ಶಿಕ್ಷಣ ಹಾಗೂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಮೂಲಕ ಬೃಹತ್ ಶೈಕ್ಷಣಿಕ ಸಾಮ್ರಾಜ್ಯವಾಗಿ ಬೆಳೆದಿದೆ ಎಂದು ಡಾ. ಲಕ್ಷ್ಮೀ ಪಾಟೀಲ ಮಾಕಾ ತಿಳಿಸಿದರು.
“ನಿಮ್ಮ ಸಮಸ್ಯೆ ಸಣ್ಣದಾಗಿರಲಿ, ದೊಡ್ಡದಾಗಿರಲಿ ಅದನ್ನು ಹೇಳಲು ಎಂದಿಗೂ ಹಿಂಜರಿಯಬೇಡಿ. ವಿದ್ಯಾರ್ಥಿಗಳ ಸಮಸ್ಯೆ ಎಂದರೆ ಕೇವಲ ಶೈಕ್ಷಣಿಕ ಸಮಸ್ಯೆಯೇ ಅಲ್ಲ. ಕುಡಿಯುವ ನೀರಿನ ಕೊರತೆ, ನೀರು ಸ್ವಚ್ಛವಾಗಿಲ್ಲದಿರುವುದು, ಶೌಚಾಲಯಗಳ ಸ್ವಚ್ಛತೆ, ತರಗತಿ ಕೊಠಡಿಗಳ ಮೂಲಭೂತ ಸೌಲಭ್ಯಗಳು, ಅಥವಾ ಯಾವುದೇ ರೀತಿಯ ಅಸೌಕರ್ಯ ಎದುರಾದರೂ ವಿದ್ಯಾರ್ಥಿಗಳು ಮುಕ್ತವಾಗಿ ದೂರು ನೀಡಬಹುದು. ಇಂತಹ ಸಮಸ್ಯೆಗಳಿಗೆ ಸ್ಪಂದಿಸಲು ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಕುಂದುಕೊರತೆ ಪರಿಹಾರ ವ್ಯವಸ್ಥೆ ಅಸ್ತಿತ್ವದಲ್ಲಿದೆ. ತರಗತಿ ಮಟ್ಟದಲ್ಲಿಯೂ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿಯೂ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಸ್ವೀಕರಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಯಾವುದೇ ಸಮಸ್ಯೆಯನ್ನು ಎದುರಿಸಿದರೂ ಮೆಂಟರ್, ವಿಭಾಗದ ಅಧ್ಯಕ್ಷರು, ಡೀನ್ರು ಅಥವಾ ವಿಶ್ವವಿದ್ಯಾಲಯದ ಸಂಬಂಧಿಸಿದ ಅಧಿಕಾರಿಗಳನ್ನು ಯಾವುದೇ ಸಂದರ್ಭದಲ್ಲಿ ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದರು.
ವಿದ್ಯಾರ್ಥಿಗಳು ದೂರದ ಊರುಗಳಿಂದ ಬಂದು ಶಿಕ್ಷಣ ಪಡೆಯುತ್ತಿರುವ ಸಂದರ್ಭದಲ್ಲಿ ಆಹಾರದ ವೆಚ್ಚವು ಅವರ ವಿದ್ಯಾಭ್ಯಾಸಕ್ಕೆ ಹೊರೆಯಾಗಬಾರದು ಎಂಬ ಮಾನವೀಯ ಕಾಳಜಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಅವರ ಆರೋಗ್ಯ ಮತ್ತು ಆಹಾರದ ಬಗ್ಗೆಯೂ ಸಂಸ್ಥೆ ವಿಶೇಷ ಕಾಳಜಿ ವಹಿಸಿದೆ. ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಪೌಷ್ಟಿಕ ಆಹಾರ ದೊರೆಯುವಂತೆ ಕೇವಲ ರೂ. 5ಕ್ಕೆ ಊಟ ನೀಡುವ ವ್ಯವಸ್ಥೆಯನ್ನು ಶರಣಬಸವ ವಿಶ್ವವಿದ್ಯಾಲಯದಲ್ಲಿ ಕಲ್ಪಿಸಲಾಗಿದೆ ಎಂದು ಹೇಳಿದರು.
ಇಂಡಕ್ಷನ್ ಕಾರ್ಯಕ್ರಮವು ಹೊಸ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಶೈಕ್ಷಣಿಕ ವ್ಯವಸ್ಥೆ, ನಿಯಮಗಳು, ಸೌಲಭ್ಯಗಳು ಮತ್ತು ಅವಕಾಶಗಳ ಪರಿಚಯ ಮಾಡಿಕೊಡುವುದರ ಜೊತೆಗೆ, ಅವರ ಮುಂದಿನ ಶೈಕ್ಷಣಿಕ ಪಯಣಕ್ಕೆ ಆತ್ಮವಿಶ್ವಾಸ ಮತ್ತು ಸ್ಪಷ್ಟ ದಿಕ್ಕನ್ನು ನೀಡುವ ಮಹತ್ವದ ವೇದಿಕೆಯಾಗಿದೆ ಎಂದರು. ಇಂಡಕ್ಷನ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಎಸ್. ಎಚ್. ಹೊನ್ನಳ್ಳಿ, ಹಣಕಾಸು ಅಧಿಕಾರಿ ಡಾ. ಕಿರಣ ಮಾಕಾ, ಸಂಶೋಧನಾ ಡೀನ್ ಡಾ. ಸುಜಾತಾ ಮಲ್ಲಾಪುರ ಹಾಗೂ ಡೀನ್ ಡಾ. ಶಿವಕುಮಾರ ಜವಳಿಗಿ ಉಪಸ್ಥಿತರಿದ್ದರು.






























