Home ಜಿಲ್ಲೆ ಬೆಂಗಳೂರು ಪತ್ರಿಕಾ ದಿನಾಚರಣೆ: ಪತ್ರಕರ್ತರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಸತ್ಕಾರ

ಪತ್ರಿಕಾ ದಿನಾಚರಣೆ: ಪತ್ರಕರ್ತರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಸತ್ಕಾರ

ಕೋಲಾರ,ಜು.೨-: ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣುಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತದೆ, ಮತ್ತೊಂದು ಕಣ್ಣು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.


ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ ಅವರು ಮಾತನಾಡಿದರು.


ಕೋಲಾರ-ವೈಟ್ ಫೀಲ್ಡ್ ನೇರ ರೈಲು ಯೋಜನೆಗೆ ರಾಜ್ಯ ಸರ್ಕಾರ ಭೂಮಿ ನೀಡಲು ಸಿದ್ಧವಿದೆ. ಯೋಜನೆಯ ಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕು. ಈ ಕುರಿತು ಮುಖ್ಯಮಂತ್ರಿ ಮಟ್ಟದಲ್ಲಿ ಚರ್ಚೆ ನಡೆದಿದೆ. ಕಾಂತರಾಜ್ ಸರ್ಕಲ್‌ನಲ್ಲಿ ಇಲಾಖೆಯ ಜಾಗದಲ್ಲಿ ರೇಷ್ಮೆ ಪಾರ್ಕ್ ನಿರ್ಮಿಸಲು ಅವಕಾಶವಿದೆ. ರೈತರಿಗೆ ನೆರವು ನೀಡಲಾಗುವುದು, ಬಸ್ ಮಾರ್ಗವನ್ನೂ ಸರಿಪಡಿಸಲಾಗುವುದು ಎಂದು ಹೇಳಿದರು.


ನಿವೇಶನ, ಭೂಸ್ವಾಧೀನ: ಕೋಲಾರದ ಕೋಲಾರಮ್ಮ ಕೆರೆ ಸುತ್ತಲಿನ ಜಾಗವನ್ನು ಭೂಸ್ವಾಧೀನಪಡಿಸಲು ನಿರ್ಧರಿಸಲಾಗಿದೆ. ರೈತರು ಮಾರಾಟ ಮಾಡಿದರೆ ಖರೀದಿಸಲಾಗುವುದು, ಇಲ್ಲದಿದ್ದರೆ ೫೦:೫೦ ಅನುಪಾತದಲ್ಲಿ ಅಭಿವೃದ್ಧಿಪಡಿಸಿ ನೀಡಲಾಗುವುದು. ಇಲ್ಲಿಯೂ ಪತ್ರಕರ್ತರಿಗೆ ನಿವೇಶನ ನೀಡಲಾಗುವುದು. ಪತ್ರಕರ್ತರ ಸಂಘಕ್ಕೆ ೨ ಎಕರೆ ಜಾಗ ನೀಡಲು ಸಿದ್ಧವಿದ್ದು, ಸ್ಥಳವನ್ನು ಈಗಾಗಲೇ ನಿಗದಿಪಡಿಸಿದ್ದುಪರಿಶೀಲನೆ ನಡೆಸಬೇಕಿದೆ ಎಂದರು.


ರಿ೦ಗ್ ರಸ್ತೆಗೆ ಕೇಂದ್ರದ ಅನುದಾನ ಕೋರಲಾಗಿದೆ. ಭೂಸ್ವಾಧೀನಕ್ಕೆ ೧೬೦೦ ಕೋಟಿ, ನಿರ್ಮಾಣಕ್ಕೆ ೧೦೦೦ ಕೋಟಿ ಅಗತ್ಯವಿದೆ. ಇದನ್ನು ಕೇವಲ ರಾಜ್ಯ ಸರ್ಕಾರದಿಂದ ಭರಿಸಲು ಆಗದು ಎಂದು ಹೇಳಿದರು.
೩೦೦ ಕೋಟಿ ವೆಚ್ಚದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಬೇರೆ ಕಡೆ ಕಾಲೇಜು ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದರು. ರಸ್ತೆ ವಿಸ್ತರಣೆ ವಿಚಾರದಲ್ಲಿ ಯೋಜನೆಗಳಿವೆ. ಅನುದಾನವಿದೆ, ಆದರೆ ಕೆಲ ಅಡ್ಡಿ ಆತಂಕಗಳು ಇವೆ ಎಂದು ತಿಳಿಸಿದರು.


ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ರಾಜ್ಯ ಸರ್ಕಾರ ಜಮೀನು ನೀಡಿದರೆ ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಕೋಲಾರದಿಂದ ವೈಟ್ ಫೀಲ್ಡ್ಗೆ ನೇರ ರೈಲು ಯೋಜನೆ ಕೊಡಿಸುವ ಜವಾಬ್ದಾರಿ ನನ್ನದು. ಶಾಸಕರುಬಂದರೆ ಸಚಿವ ವಿ.ಸೋಮಣ್ಣ ಜೊತೆ ಸಮಾಲೋಚನೆ ನಡೆಸಬಹುದು ಎಂದರು.


ರಾಷ್ಟ್ರೀಯ ಹೆದ್ದಾರಿಯ ಕಾಂತರಾಜ್ ಸರ್ಕಲ್ ಬಳಿ ರೇಷ್ಮೆ ಪಾರ್ಕ್ಗೆ ೧೧ ಎಕರೆ ಜಮೀನು ಲಭ್ಯವಿದೆ. ಮಾವು ಶಿಥಲೀಕರ ಘಟಕ ಸ್ಥಾಪನೆ ಕಷ್ಟದ ಕೆಲಸ. ಅದಕ್ಕೆ ಮಾರುಕಟ್ಟೆ ವ್ಯವಸ್ಥೆ ಬೇಕು. ಮಧ್ಯಾಹ್ನದ ಬಿಸಿಯೂಟದಲ್ಲಿ ಮಾವಿನ ಉತ್ಪನ್ನಗಳನ್ನು ನೀಡುವ ಬಗ್ಗೆ ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.


ಕೆ.ಸಿ.ವ್ಯಾಲಿ ನೀರು ಬಾರದಿದ್ದರೆ ರೈತರು ಪರಿಸ್ಥಿತಿಯೇ ಬೇರೆ ರೀತಿ ಇರುತಿತ್ತು. ಈ ಬಗೆಗಿನ ಪರ ವಿರೋಧ ಬೇರೆ ಪ್ರಶ್ನೆ. ಕುಡಿಯುವ ನೀರಿನ ಯೋಜನೆಗೆ ಎಲ್ಲ ಶಾಸಕರ ಸಹಕಾರ ಅಗತ್ಯ. ಕೃಷ್ಣಾ ನದಿ ನೀರು ತರುವ ವಿಚಾರದಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ.


ಅವರ ನೆರವಿಗೆ ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಸಂಘದಿ೦ದಲೇ ೧೫ ಲಕ್ಷದವರೆಗೆ ಅಂಚೆ ವಿಮೆ ಮಾಡಿಸಲಾಗಿದೆ. ೨೦೩೨ರಲ್ಲಿ ಸಂಘದ ಶತಮಾನೋತ್ಸವವನ್ನು ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು. ಸಂಘದ ಸಂಸ್ಥಾಪಕ ಡಿ.ವಿ.ಗುಂಡಪ್ಪ ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯ ಎಂದರು.


ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಿ ಮಾಧ್ಯಮ ಸಲಹೆಗಾರರಾಗಿದ್ದ ಕೆ.ವಿ.ಪ್ರಭಾಕರ್ ಅವರು ಪತ್ರಕರ್ತರ ಧ್ವನಿಯಾಗಿ ನಿಂತು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಬಿ.ವಿ.ಗೋಪಿನಾಥ್ ಅವರು ಅಧ್ಯಕ್ಷರಾಗಿದ್ದಾಗ ಕಲ್ಯಾಣ ನಿಧಿ ಸ್ಥಾಪನೆ ಮಾಡಿ ೧ ಕೋಟಿ ರೂ. ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಅದರಲ್ಲಿ ಬರುವ ಬಡ್ಡಿ ಹಣದಲ್ಲಿ ಪತ್ರಕರ್ತರ ಆರೋಗ್ಯಕ್ಕೆ ನೀಡಲು ತೀರ್ಮಾನ ಮಾಡಿದ್ದಾರೆ. ಇದನ್ನ ಪೂರ್ಣ ಗೊಳಿಸುವ ಕೆಲಸ ಈಗಿನ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮಾಡಬೇಕೆಂದರು.


ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಜಿ.ನಾರಾಯಣಸ್ವಾಮಿ ನೆನಪಿನ ಪ್ರಶಸ್ತಿ: ಕೆ.ಎಸ್.ಗಣೇಶ್; ಕೆ.ಆರ್.ಕೃಷ್ಣಸ್ವಾಮಿ ನೆನಪಿನ ಪ್ರಶಸ್ತಿ: ಅಬ್ಬಣಿಶಂಕರ್; ಬಿ.ವಿ.ನರಸಿಂಹಮೂರ್ತಿ ನೆನಪಿನ ಪ್ರಶಸ್ತಿ: ಎ.ಸದಾನಂದ; ಕೆ.ಪ್ರಹ್ಲಾದರಾವ್ ನೆನಪಿನ ಪ್ರಶಸ್ತಿ: ಎಸ್.ನಾರಾಯಣಸ್ವಾಮಿ; ಬಿ.ಆರ್ಮುಗಂ ನೆನಪಿನ ಪ್ರಶಸ್ತಿ: ಎಚ್.ದೊರೈ ಅರಸು; ಬಿ.ಎನ್.ಗುರುಪ್ರಸಾದ್ ನೆನಪಿನ ಪ್ರಶಸ್ತಿ: ಎನ್.ಮುನಿವೆಂಕಟೇಗೌಡ; ಎಂ.ಮಲ್ಲೇಶ್ ನೆನಪಿನ ಪ್ರಶಸ್ತಿ: ಎನ್.ರಾಮು; ಎಂ.ಜಿ.ಪ್ರಭಾಕರ ನೆನಪಿನ ಪ್ರಶಸ್ತಿ: ಎಂ.ಸುಬ್ರಮಣಿ; ಸಿ.ಎಂ.ರ೦ಗಾರೆಡ್ಡಿ ನೆನಪಿನ ಪ್ರಶಸ್ತಿ: ಕೆ.ಎನ್.ಮಹೇಶ್; ವಿ.ಎಂ.ನಾಗಪ್ಪ ನೆನಪಿನ ಪ್ರಶಸ್ತಿ: ಜಮ್ಮನಹಳ್ಳಿ ಕೃಷ್ಣಪ್ಪ; ಎಚ್.ಎನ್.ಸೋಮಶೇಖರಗೌಡ ನೆನಪಿನ ಪ್ರಶಸ್ತಿ: ಎಸ್.ವೇಣುಗೋಪಾಲ್ ಗೆ ನೀಡಿ ಗೌರವಿಸಲಾಯಿತು