
ಬೀದರ್: ಮಕ್ಕಳಿಗೆ ಆಧುನಿಕ ಶಿಕ್ಷಣದ ಜೊತೆಗೆ ನಮ್ಮ ನಾಡು, ನುಡಿ, ಸಂಸ್ಕೃತಿ ಮತ್ತು ಕಬಡ್ಡಿ, ಖೋ-ಖೋದಂತಹ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸಬೇಕಿದೆ. ಜಾನಪದ ಕಲೆಯನ್ನು ಉಳಿಸುವುದು ಕೇವಲ ಸರ್ಕಾರ ಅಥವಾ ಕಲಾವಿದರ ಹೊಣೆಯಲ್ಲ, ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು, ಗೌರವಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಿದಾಗ ಮಾತ್ರ ನಮ್ಮ ಭವಿಷ್ಯ ಗಟ್ಟಿಯಾಗುತ್ತದೆ ಎಂದು ನ್ಯೂ ಸೆಂಚುರಿ ರೋಟರಿ ಕ್ಲಬ್ ಆಫ್ ಬೀದರನ ಅಧ್ಯಕ್ಷ ವೀರಶೆಟ್ಟಿ ಮಣಗೆ ಅವರು ಅಭಿಪ್ರಾಯಪಟ್ಟರು.
ಅವರು ಶನಿವಾರ ಕರ್ನಾಟಕ ಬರಹಗಾರ ಮತ್ತು ಕಲಾವಿದರ ಸಂಘ, ಬೀದರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಶ್ರೀ ಸ್ವಾಮಿ ನರೇಂದ್ರ ಪಿ.ಯು ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಸ್ವಾಮಿ ನರೇಂದ್ರ ಪಿ.ಯು ಕಾಲೇಜಿನಲ್ಲಿ ಆಯೋಜಿಸಿದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಗ್ರಾಮೀಣ ಬದುಕಿನ ಪ್ರತಿಯೊಂದು ಸಂದರ್ಭದಲ್ಲೂ ಜಾನಪದ ಕಲೆ ಜೀವಂತವಾಗಿತ್ತು. ಹಬ್ಬಗಳ ಹಾಡು, ಮದುವೆಯ ಗೀತೆಗಳು, ಹೊಲದಲ್ಲಿ ಕೆಲಸ ಮಾಡುವಾಗ ಹಾಡುವ ಜಾನಪದ ಹಾಡುಗಳು ಹಾಗೂ ದೇವರ ಆರಾಧನೆಯಲ್ಲಿನ ನೃತ್ಯಗಳು ನಮ್ಮ ಜೀವನವನ್ನು ಸಂಸ್ಕೃತಿಯೊಂದಿಗೆ ಬೆಸೆದಿದ್ದವು. ಡೊಳ್ಳು ಕುಣಿತ, ಯಕ್ಷಗಾನ, ವೀರಗಾಸೆ, ಕಂಸಾಳೆ, ಸೋಭಾನೆ ಪದ ಹಾಗೂ ಲಾವಣಿಗಳಂತಹ ಜನಪದ ಕಲೆಗಳು ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುತ್ತವೆ. ಜಾನಪದ ನಾಶವಾದರೆ ನಮ್ಮ ನೆನಪುಗಳು, ಬೇರುಗಳು ಹಾಗೂ ಗುರುತು ನಾಶವಾದಂತೆ. ಬೇರುಗಳು ಗಟ್ಟಿಯಾಗಿದ್ದರೆ ಮಾತ್ರ ಮರ ಎತ್ತರಕ್ಕೆ ಬೆಳೆಯಲು ಸಾಧ್ಯ. ಹಾಗಾಗಿ ಆಧುನಿಕತೆಯನ್ನು ಸ್ವೀಕರಿಸೋಣ, ಆದರೆ ನಮ್ಮ ಬೇರುಗಳನ್ನು ಗಟ್ಟಿಗೊಳಿಸೋಣ ಎಂದರು.
ಆಶಯ ನುಡಿಗಳನ್ನಾಡಿದ ಬೀದರ ವಿಶ್ವವಿದ್ಯಾಲಯದ ನಿವೃತ್ತ ಡೀನರಾದ ಪೆÇ್ರ. ಜಗನ್ನಾಥ ಹೆಬ್ಬಾಳೆ ಅವರು, ಜಾನಪದವು ಅಕ್ಷರ ಜ್ಞಾನಕ್ಕಿಂತ ಮಿಗಿಲಾಗಿ ಅನುಭವದಿಂದ, ಶ್ರಮಜೀವಿಗಳ ಬದುಕಿನಿಂದ ಹರಿದುಬಂದ ಅನಘ್ರ್ಯ ಜ್ಞಾನಸಂಪತ್ತು. ಇಂದಿನ ಆಧುನಿಕ ಯುಗದಲ್ಲಿ ವಾಟ್ಸಾಪ್ ಹಾಗೂ ಫೇಸ್‍ಬುಕ್‍ನಂತಹ ತಂತ್ರಜ್ಞಾನವನ್ನು ಧನಾತ್ಮಕವಾಗಿ ಬಳಸಿಕೊಂಡು, ನಮ್ಮ ಗ್ರಾಮೀಣ ಸಂಸ್ಕೃತಿ, ಒಗಟು, ಒಡಪು, ತತ್ವಪದ ಹಾಗೂ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ.ಜಾನಪದವು ಮನುಷ್ಯನ ಮನಸ್ಸನ್ನು ವಿಶಾಲಗೊಳಿಸಿ, ಧರ್ಮ-ಜಾತಿಗಳ ಭೇದ ಮರೆಸಿ ಏಕತೆಯನ್ನು ಸಾರುತ್ತದೆ. ರಾಮನಗರದ ಜಾನಪದ ಲೋಕ ಹಾಗೂ ಹಾವೇರಿಯ ಜಾನಪದ ವಿಶ್ವವಿದ್ಯಾಲಯಗಳು ಈ ಪರಂಪರೆಯ ರಕ್ಷಣೆಗೆ ಶ್ರಮಿಸುತ್ತಿದ್ದು, ಯುವಜನತೆ ನಮ್ಮ ನೆಲದ ಸದ್ಗುಣ ಹಾಗೂ ಆಚಾರ-ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಹೆಸರಾಂತ ಜನಪದ ಕಲಾವಿದ ಶಂಭುಲಿಂಗ ವಾಲದೊಡ್ಡಿ ಮಾತನಾಡಿ, ಜನಪದರು ವಿಶಾಲ ಮನಸ್ಸಿನವರು ಅವರು ತಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಗುರುಹಿರಿಯರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು, ಅದನ್ನು ತಮ್ಮ ಹಾಡುಗಳ ಮೂಲಕ ಪ್ರಸ್ತುತಪಡಿಸುತ್ತಿದ್ದರು ಎಂದ ಅವರು ವಿದ್ಯಾರ್ಥಿಗಳು ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಜಾನಪದ ಸಾಹಿತ್ಯ, ಸಂಸ್ಕೃತಿಯನ್ನು ಅರಿಯಬೇಕೆಂದರು.
ಶ್ರೀ ಸ್ವಾಮಿ ನರೇಂದ್ರ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಕಾಂತ್ ಪಾಟೀಲ್ ಮಾತನಾಡಿ, ಇತ್ತೀಚಿಗೆ ವಿಲಾಯತಿ ಸಂಸ್ಕೃತಿ ಪ್ರಭಾವದಿಂದ ನಮ್ಮ ಜಾನಪದ ಕಲೆ, ಸಂಸ್ಕೃತಿ, ಸಾಹಿತ್ಯ ಅಳೆದುಹೋಗುತ್ತಿದೆ ಆದ್ದರಿಂದ ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಗೀತೆಗಳನ್ನು ಕೇಳುವುದನ್ನು ಬಿಟ್ಟು ಜಾನಪದ ಗೀತೆಗಳನ್ನು ಕೇಳುವ ಪರಿಪಾಠ ಹಾಕಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ನಿವೃತ್ತ ವಾರ್ತಾ ಇಲಾಖೆಯ ಉಪ ನಿರ್ದೇಶಕ ಜಿ. ಚಂದ್ರಕಾಂತ್, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕರ್ನಾಟಕ ಜಾನಪದ ಪರಿಷತ್ ಬೀದರ ತಾಲೂಕ ಅಧ್ಯಕ್ಷ ಎಸ್.ಬಿ ಕುಚಬಾಳ ಸ್ವಾಗತಿಸಿದರು, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಸಂಚಾಲಕರಾದ ಡಾ. ರಾಜಕುಮಾರ ಹೆಬ್ಬಾಳೆ ನಿರೂಪಿಸಿ, ವಂದಿಸಿದರು.

































