
ಅಥಣಿ: ತಾಲೂಕಿನಲ್ಲಿರುವ ಗ್ರಾಮ ಮಟ್ಟದ ಅಧಿಕಾರಿಗಳು ಪಟ್ಟಣದಲ್ಲಿ ಮನೆ ಮಾಡಿಕೊಂಡು, ಇಲ್ಲಿಯೇ ಖಾಸಗಿ ಕಟ್ಟಡದಲ್ಲಿ ಕಚೇರಿಗಳನ್ನು ಆರಂಭಿಸಿಕೊAಡು ಜನಸಾಮಾನ್ಯರಿಗೆ ಅಲೆದಾಡಿಸುವ ಕೆಲಸ ಮಾಡಬಾರದು, ಗ್ರಾಮ ಮಟ್ಟದ ಯಾವುದೇ ಅಧಿಕಾರಿಗಳು ತಮ್ಮ ಗ್ರಾಮದಲ್ಲೇ ಇದ್ದುಕೊಂಡು ಜನಸಾಮಾನ್ಯರ, ಸಾರ್ವಜನಿಕರ ಸಮಸ್ಯಗಳಿಗೆ. ಕುಂದು ಕೊರತೆಗಳಿಗೆ ಸ್ಪಂದಿಸಬೇಕು. ಇದು ಸರಿಯಾಗಿ ಅನುಷ್ಠಾನವಾಗುವ ನಿಟ್ಟಿನಲ್ಲಿ ತಾಲೂಕಾ ಮಟ್ಟದ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ನಿಗಾ ವಹಿಸಬೇಕು. ಏನಾದರೂ ಕುಂಟ ನೆಪ ಹೇಳುವ ಮೂಲಕ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸದೆ ಹೋದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಖಡಕ ಎಚ್ಚರಿಕೆ ನೀಡಿದರು.
ಅವರು ಶನಿವಾರ ಇಲ್ಲಿನ ಕೆಎಲ್‌ಇ ಸಂಸ್ಥೆಯ ಎಸ್ ಎಸ್ ಎಂಎಸ್ ಕಾಲೇಜಿನ ಖೋತ ಸಭಾಂಗಣದಲ್ಲಿ ತಾಲೂಕಾ ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಪ್ರಜಾಸೇವೆ ಆಂದೋಲನ ಸಭೆಯನ್ನು ಉದ್ಘಾಟಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪ್ರಜಾಸೇವೆ ಆಂದೋಲನ ಅಭಿಯಾನಕ್ಕೆ ಜನರಿಂದ ಉತ್ತಮ ಸ್ಪಂದನೆ ಬಂದಿದೆ. ಸಾರ್ವಜನಿಕರ ಕುಂದು ಕೊರತೆಗಳಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತ್ವರಿತಗತಿಯಲ್ಲಿ ಸ್ಪಂದಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಪ್ರಜಾಸೇವೆ ಆಂದೋಲನ ಸಭೆ ಪ್ರತಿ ಶನಿವಾರ ನಡೆಸುವಂತೆ ಆದೇಶ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ದೊರಕಬೇಕಾದ ಸೌಲಭ್ಯಗಳನ್ನು ಮತ್ತು ಸರ್ಕಾರದ ಯೋಜನೆಗಳನ್ನು ಅವರ ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ನಮ್ಮ ತಾಲೂಕಿನ ಅಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು. ಗ್ರಾಮ ಮಟ್ಟದ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ವೈದ್ಯಾಧಿಕಾರಿ, ಹೆಸ್ಕಾಂ ಶಾಕಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಗ್ರಾಮೀಣ ಅಧಿಕಾರಿಗಳು ಗ್ರಾಮದಲ್ಲಿಯೇ ವಾಸ್ತವ ಇದ್ದು, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಅಧಿಕಾರ ಅಂತಸ್ತು ಶಾಶ್ವತವಲ್ಲ :
ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಜನಸಾಮಾನ್ಯರು, ರೈತರು, ಸಾರ್ವಜನಿಕರೇ ನಾಯಕರು. ಅವರ ದುಡಿಮೆಯ ಪರಿಶ್ರಮದಿಂದ ಸರ್ಕಾರಕ್ಕೆ ಬರುವ ತೆರಿಗೆಯ ಹಣದಿಂದಲೇ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಪ್ರತಿ ತಿಂಗಳ ವೇತನ ದೊರಕುತ್ತದೆ. ಹೀಗಾಗಿ ಅವರೇ ನಮ್ಮ ನಾಯಕರು, ನಾವೆಲ್ಲರೂ ಅವರಿಗೆ ಉತ್ತಮ ಸೇವೆಗಳನ್ನ ಒದಗಿಸುವ ಸೇವಕರು. ಅಧಿಕಾರಿಗಳು ಯಾವುದೇ ಕುಂಟು ನೆಪ ಹೇಳದೆ, ಯಾವುದೇ ಆಸೆ, ಅಮಿಷ ಒಡ್ಡದೇ ತಮ್ಮ ಕಾನೂನಿನ ಇತಿಮಿತಿಯಲ್ಲಿ ಸಮಸ್ಯೆಯನ್ನು ತ್ವರಿತ ಗತಿಯಲ್ಲಿ ಬಗೆಹರಿಸುವಂತೆ ಉತ್ತಮ ಸ್ಪಂದನೆ ಮಾಡಬೇಕೆಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಅವರು ಪ್ರಜಾಸೇವೆ ಆಂದೋಲನದಲ್ಲಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಒಂದು ವಾರದ ಒಳಗೆ ಅವುಗಳಿಗೆ ಪರಿಹಾರ ರೂಪಿಸಬೇಕು, ತಮ್ಮ ಹಂತದಲ್ಲಿ ಕಾನೂನು ಚೌಕಟ್ಟಿನಲ್ಲಿ ಮಾಡಲು ಬರೆದಿದ್ದರೆ ಲಿಖಿತವಾಗಿ ಹಿಂಬರಹ ನೀಡಬೇಕು. ಮೇಲಧಿಕಾರಿಗಳು ಒಂದು ವೇಳೆ ಕಾನೂನು ಚೌಕಟ್ಟಿನಲ್ಲಿ ಮಾಡಲು ಸಾಧ್ಯವಿದೆ ಎಂದರೆ ತಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿ ಶನಿವಾರ ಪ್ರಜಾ ಸೇವೆ ಆಂದೋಲನ :
ಸರ್ಕಾರ ಆರಂಭಿಸಿರುವ ಈ ಪ್ರಜಾಸೇವೆ ಆಂದೋಲನ ಪ್ರತಿ ಶನಿವಾರ ಜರುಗಲಿದ್ದು, ಹೋಬಳಿ ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಮುಂಬರುವ ದಿನಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತಾಲೂಕಿಗೆ ಕರಿಸಿಕೊಂಡು ಜಿಲ್ಲಾ ಮಟ್ಟದ ಪ್ರಜಾ ಸೇವೆ ಸಭೆಯನ್ನು ನಡೆಸಲಾಗುವುದು ಎಂದರು.
ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ್ ಸಂಪಗಾವಿ, ತಾಲೂಕಾ ತಹಶೀಲ್ದಾರ್ ಸಿದರಾಯ ಬೋಸಗಿ ಮಾತನಾಡಿದರು. ಈ ಪ್ರಜಾ ಸೇವೆ ಆಂದೋಲನದಲ್ಲಿ ೩೬೦ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ೧೮೦ಕ್ಕೂ ಅಧಿಕ ಅರ್ಜಿಗಳಿಗೆ ಶಾಸಕರ ಅಧ್ಯಕ್ಷತೆಯಲ್ಲಿ ಪರಿಹಾರ ರೂಪಿಸಲಾಯಿತು, ಇನ್ನುಳಿದ ಅರ್ಜಿಗಳಿಗೆ ಬರುವ ಒಂದು ವಾರದಲ್ಲಿ ಅವುಗಳಿಗೆ ಸ್ಪಂದನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ. ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು ವಿವಿಧ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬರ ಘೋಷಣೆ ರಾಜ್ಯ ಸರ್ಕಾರದ ಹಂತದಲ್ಲಿ ಇಲ್ಲ :
ತಾಲೂಕಿನಲ್ಲಿ ಅನೇಕ ಜನರು ಅಥಣಿ ತಾಲೂಕಿನ ಬರಪೀಡಿತ ಪ್ರದೇಶ ಎಂದು ಸಚಿವ ಲಕ್ಷ್ಮಣ ಸವದಿ ಘೋಷಣೆ ಮಾಡಲು ಪ್ರಯತ್ನಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಬರ ಘೋಷಣೆ ಮಾಡುವ ಅಧಿಕಾರ ನಮಗೆ ಹಾಗೂ ಮುಖ್ಯಮಂತ್ರಿಗಳಿಗೆ ಇರುವುದಿಲ್ಲ, ಕೇಂದ್ರ ಸರ್ಕಾರದ ಸೆಟಲೈಟ್ ಸಮೀಕ್ಷೆ ಮೂಲಕ ಬರ ಪೀಡಿತ ಪ್ರದೇಶಗಳ ಬಗ್ಗೆ ನಿರ್ಧರಿಸಲಾಗುತ್ತದೆ. ನಮ್ಮ ತಾಲೂಕಿನಲ್ಲಿ ಕಬ್ಬಿನ ಬೆಳೆ ಹೆಚ್ಚಾಗಿರುವುದರಿಂದ ಸ್ಯಾಟಲೈಟ್ ಕ್ಯಾಮೆರಾದಲ್ಲಿ ಹೆಚ್ಚು ಪ್ರದೇಶ ಹಸಿರಾಗಿ ಕಾಣುತ್ತದೆ, ಅಲ್ಲದೆ ತೇವಾಂಶವೂ ಕೂಡ ಅಧಿಕವಾಗಿರುವುದರಿಂದ ಬರ ಪ್ರದೇಶ ಎಂದು ಘೋಷಣೆಯಾಗಿಲ್ಲ. ಇದು ಸ್ಥಿತಿ ಇನ್ನೂ ೧೫ ದಿನ ಮುಂದುವರೆದರೆ ಅಥಣಿ ತಾಲೂಕು ಕೂಡ ಬರಪೀಡಿತ ಪ್ರದೇಶ ಎಂದು ಘೋಷಣೆಯಾಗುವ ಸಾಧ್ಯತೆ ಇದೆ ಎಂದರು.
ಮುಖ್ಯಮAತ್ರಿ ಡಿ ಕೆ ಶಿವಕುಮಾರ ಅವರ ಕಾರ್ಯವೈಖರಿ ಮುಕ್ತ ಕಂಠದಿAದ ಶ್ಲಾಘಿಸಿದ ಸಚಿವ ಸವದಿ :
ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಪ್ರಜಾಸೇವೆ ಆಂದೋಲನ ಸಭೆ ಆರಂಭಿಸುವ ಮೂಲಕ ಜನಸೇವೆಗೆ ಮುಂದಾಗಿರುವುದು ರಾಜ್ಯದಲ್ಲಿಯೇ ಮಾದರಿಯ ಕಾರ್ಯಕ್ರಮವಾಗಿದೆ. ರಾಜ್ಯದ ಅಭಿವೃದ್ದಿಗಾಗಿ ಅವರ ಮುಂದಾಲೋಚನೆ ಉದ್ಯಮಿಗಳಿಗೆ ಒಂದೊAದು ಗ್ರಾಮ ದತ್ತು ತೆಗೆದುಕೊಂಡು ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಲುವಾಗಿ ಶಾಲೆಗಳನ್ನು ನಿರ್ಮಿಸಲಾಗುವುದು ಮಕ್ಕಳ ಶಿಕ್ಷಣಕ್ಕೆ ತೊಡಕಾಗಬಾರದು ತಮ್ಮ ತಮ್ಮ ಗ್ರಾಮಗಳಲ್ಲಿಯೇ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿದ್ದು ಅದರ ಅಡಿಯಲ್ಲಿ ಅಥಣಿ ಮತಕ್ಷೇತ್ರ ೧೧ ಶಾಲೆಗಳು ಬಂದಿವೆ. ಹಾಗೂ ಅಧಿಕಾರಿಗಳ ಮತ್ತು ಉದ್ಯಮಿಗಳ ಸಭೆಗಳನ್ನು ಮಾಡುವ ಮೂಲಕ ಜನಸೇವೆಗೆ ಇರುವ ಆರ್ಥಿಕ ಸೌಲಭ್ಯಗಳ ಮೂಲಕ ಗ್ರಾಮಗಳ ಸುಧಾರಣೆಗೆ ಮುಂದಾಗಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮವಾದ ಮತ್ತು ಉಚಿತವಾದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಗ್ರಾಮೀಣ ರಸ್ತೆಗಳು, ವಿದ್ಯುತ್ ಸೌಲಭ್ಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಅವರೊಬ್ಬ ದೂರದೃಷ್ಟಿಯ ನಾಯಕರಾಗಿದ್ದು, ಬೆಳಿಗ್ಗೆ ೫:೦೦ಯಿಂದ ದಿನಚರಿ ಆರಂಭಿಸಿ ಮಧ್ಯರಾತ್ರಿ ಒಂದು ಗಂಟೆಯವರೆಗೆ ಸೇವೆ ಸಲ್ಲಿಸುತ್ತಾರೆ ಎಂದು ಮುಖ್ಯಮಂತ್ರಿ ಅವರನ್ನು ಮುಕ್ತ ಕಂಠದಿAದ ಹೊಗಳಿದರು.



























