Home ಮುಖಪುಟ ಸುದ್ದಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ರವಿ ಉಪಾಧ್ಯಕ್ಷರಾಗಿ ಶರಣಗೌಡ ಆಯ್ಕೆ

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ರವಿ ಉಪಾಧ್ಯಕ್ಷರಾಗಿ ಶರಣಗೌಡ ಆಯ್ಕೆ

ಬೆಂಗಳೂರು, ಸೆ. ೧೦- ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷರಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹತ್ತಿರದ ಸಂಬಂಧಿಯಾಗಿರುವ ವಿಧಾನಪರಿಷತ್ ಸದಸ್ಯ ರವಿ ಅವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಆಯ್ಕೆಯಾಗಿದ್ದಾರೆ.


ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇಬ್ಬರನ್ನೂ ಮೊದಲ ಎರಡೂವರೆ ವರ್ಷಕ್ಕೆ ಮಾತ್ರ ಆಯ್ಕೆ ಮಾಡಲಾಗಿದೆ.


ಅಪೆಕ್ಸ್ ಬ್ಯಾಂಕ್ ಅಧ್ಯಕ್ಷೆ ಗಾದೆ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಕೆಎನ್. ರಾಜಣ್ಣ ಮತ್ತು ಶಿವಾನಂದ ಪಾಟೀಲ್ ಅವರಿಗೆ ನಿರಾಸೆಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ರವಿ ಅವರನ್ನು ಅಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದೆ.


ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಪೆಕ್ಸ್ ಬ್ಯಾಂಕ್‌ನ ೧೩ ನಿರ್ದೇಶಕರ ಜತೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸಹಕಾರ ಸಚಿವ ಲಕ್ಮಣಸವದಿ ಸಹ ಉಪಸ್ಥಿತರಿದ್ದರು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಯನ್ನು ಹೈಕ್ಂಡ್‌ಗೆ ಬಿಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಅಂತಿಮವಾಗಿ ಹೈಕಮಾಂಡ್ ರವಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ, ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದೆ.


ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಲ್ಕು ತಿಂಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇದ್ದ ಕಾರಣ ಚುನಾವಣೆಯನ್ನು ಮುಂದೂಡಲಾಗಿತ್ತು. ಇಂದು ಚುನಾವಣೆ ನಡೆಯಿತು.


ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರವಿ ಮತ್ತು ಶರಣಗೌಡ ಬಯ್ಯಾಪುರ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಸಹಕಾರ ಸಚಿವ ಲಕ್ಷ್ಮಣಸವದಿ ಮಾಹಿತಿ ನೀಡಿ, ಎಲ್ಲರ ಸಹಮತದಿಂದ ಆಯ್ಕೆಯಾಗಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಲ್ಲರ ಜತೆ ಸಮಾಲೋಚನೆ ನಡೆಸಿ ನಿರ್ದೇಶಕರ ಅಭಿಪ್ರಾಯ ಸಂಗ್ರಹಿಸಿ ಮೊದಲ ಎರಡೂವರೆ ವರ್ಷಕ್ಕೆ ಅಧ್ಯಕ್ಷರಾಗಿ ರವಿ ಅವರನ್ನು, ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.